ADVERTISEMENT

ಹಳೆಯ ಶೇಂಗಾ ತಳಿಯತ್ತ ಒಲವು

ಕದರಿ ಲೇಪಾಕ್ಷಿ ತಳಿ ಪರಿಚಯಿಸಲು ಮುಂದಾದ ಕೃಷಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:44 IST
Last Updated 15 ಜೂನ್ 2022, 6:44 IST
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಟಿಎಂವಿ-2 ತಳಿಯ ಬಿತ್ತನೆ ಶೇಂಗಾವನ್ನು ಖರೀದಿಸುತ್ತಿರುವ ರೈತರು.
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಟಿಎಂವಿ-2 ತಳಿಯ ಬಿತ್ತನೆ ಶೇಂಗಾವನ್ನು ಖರೀದಿಸುತ್ತಿರುವ ರೈತರು.   

ನಾಯಕನಹಟ್ಟಿ: ಕೃಷಿ ಇಲಾಖೆಯು ಮೊದಲ ಬಾರಿಗೆ ಬಯಲುಸೀಮೆಯ ರೈತರಿಗೆ ಕದರಿ ಲೇಪಾಕ್ಷಿ ಶೇಂಗಾ ತಳಿಯನ್ನು ಮಳೆಯಾಶ್ರಿತವಾಗಿ ಬೆಳೆಯಲು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದೆ. ರೈತರು ಮಾತ್ರ ಹಳೆಯ ಟಿಎಂವಿ-2 ಮತ್ತು ಕೆ-6 ತಳಿಯ ಶೇಂಗಾ ಬಿತ್ತನೆ ಬೀಜ ಕೊಂಡುಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.

3-4 ವರ್ಷಗಳ ಹಿಂದೆ ಕದರಿಲೇಪಾಕ್ಷಿ ಶೇಂಗಾ ತಳಿಯನ್ನು ಸುಧಾರಿತ ಸಂಶೋಧನೆಯ ಮೂಲಕ ಆವಿಷ್ಕರಿಸಲಾಗಿದೆ. ಇದು ಹೆಚ್ಚು ಇಳುವರಿಗೆ ಹೆಸರುವಾಸಿಯಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಸೇರಿದಂತೆ ಹಲವೆಡೆಗಳಲ್ಲಿ ಕಪ್ಪುಭೂಮಿಯಲ್ಲಿ ಬೆಳೆಯಲಾಗುತ್ತಿದೆ. ಎಸ್.ಪಿ. 0622 ಮಾದರಿ ಹೊಂದಿದ್ದು ಕಂದು ಬಣ್ಣದ್ದಾಗಿದೆ. 118ರಿಂದ 120 ದಿನಗಳ ಅಂತರದಲ್ಲಿ ಕಟಾವಿಗೆ ಬರುತ್ತದೆ. 1 ಎಕರೆಗೆ 12ರಿಂದ 15ಕ್ವಿಂಟಲ್‍ಗಳಷ್ಟು ಇಳುವರಿ ಲಭಿಸುತ್ತದೆ. ಜೊತೆಗೆ ಶೇ 51ರಷ್ಟು ಎಣ್ಣೆ ಅಂಶವನ್ನು ಹೊಂದಿದೆ. ಸಾಮಾನ್ಯವಾಗಿ ತಗುಲುವ ಎಲೆಚುಕ್ಕಿರೋಗ, ತುಕ್ಕುರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಹಾಗೆಯೇ ಬರ ಸಹಿಷ್ಣುತೆ ಇದ್ದು, ಕಟಾವು ಹಂತದವರೆಗೂ ಗಿಡದ ಎಲೆಗಳು, ಮತ್ತು ಕಾಂಡ ಹಸಿರು ಬಣ್ಣದಿಂದ ಕೂಡಿರುತ್ತದೆ. ಈ ತಳಿಯಿಂದ ಉತ್ತಮ ಮೇವು ಸಹ ಲಭಿಸುತ್ತದೆ.

ಹೀಗಾಗಿ ಕಳೆದ ಎರಡು ವರ್ಷಗಳಿಂದ ಹೋಬಳಿಯ ವಿವಿಧ ಭಾಗದ ರೈತರು ಆಂಧ್ರ ಪ್ರದೇಶದ ರೈತರಿಂದ ನೇರವಾಗಿ ಖರೀದಿಸಿ ತಮ್ಮಲ್ಲಿರುವ ನೀರಾವರಿ ವ್ಯವಸ್ಥೆಯಲ್ಲಿ ಬೇಸಿಗೆ ಬೆಳೆಯಾಗಿ ಬೆಳೆದಿದ್ದು, ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದಾರೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಕೃಷಿ ಇಲಾಖೆಯು ರೈತರಿಗೆ ಮಳೆಯಾಶ್ರಿತವಾಗಿ ಕದರಿ ಲೇಪಾಕ್ಷಿ ತಳಿಯ ಶೇಂಗಾ ರಿಯಾಯಿತಿ ದರದಲ್ಲಿ ನೀಡಲು ಮುಂದಾಗಿದೆ ಎಂದು ಕೃಷಿ ಅಧಿಕಾರಿ ಎನ್. ಹೇಮಂತ್‍ ನಾಯ್ಕ್ ತಿಳಿಸಿದರು.

ADVERTISEMENT

ಆದರೆ ಹೋಬಳಿಯ ಹಲವು ರೈತರು ಕದರಿ ಲೇಪಾಕ್ಷಿ ಶೇಂಗಾ ತಳಿಯನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಈ ತಳಿ ಶೇಂಗಾ ಬೀರಿದ ಬಣ್ಣ, ರುಚಿ, ಮತ್ತು ಬೀಜಗಳ ಆಕಾರದಲ್ಲಿರುವ ವ್ಯತ್ಯಾಸ. ರೈತರು 3 ರಿಂದ4 ದಶಕಗಳಿಂದ ತಮ್ಮ ಮನೆಯ ಬೀಜವೆಂಬಂತೆ ಬಿತ್ತನೆ ಮಾಡಿಕೊಂಡು ಬರುತ್ತಿರುವ ದೇಸಿತಳಿ ಟಿ.ಎಂ.ವಿ.-2, ಮತ್ತು ಕೆ-6 ತಳಿಯ ಶೇಂಗಾ ಬೀಜಗಳನ್ನು ಖರೀದಿಸುತ್ತಿದ್ದಾರೆ.

ಟಿ.ಎಂ.ವಿ-2 ಮತ್ತು ಕೆ-6 ತಳಿಯ ವಿಶೇಷತೆ: ಟಿ.ಎಂ.ವಿ-2 ತಳಿಯು 105ರಿಂದ 110 ದಿನಗಳ ಅವಧಿಯದ್ದಾಗಿದೆ. ಬೀಜಗಳು ದುಂಡಾಗಿದ್ದು, ತಿಳಿ ಗುಲಾಬಿ ಬಣ್ಣವನ್ನು ಹೊಂದಿವೆ. ಒಂದು ಎಕರೆಗೆ 4-5 ಕ್ವಿಂಟಲ್‍ಗಳಷ್ಟು ಇಳುವರಿ ಬರಲಿದ್ದು, ಶೇ 45ರಿಂದ 46ರಷ್ಟು ಎಣ್ಣೆ ಅಂಶ ಇರುತ್ತದೆ. ಹಾಗೆಯೇ ಕೆ-6 ಶೇಂಗಾ ತಳಿಯು 100ರಿಂದ 105 ದಿನಗಳ ಅವಧಿಯದಾಗಿದ್ದು, ಬೀಜವು ಕಂದು ಬಣ್ಣದ್ದಾಗಿದೆ. ಇದು ಎಕರೆಗೆ 6-7ಕ್ವಿಂಟಲ್‍ಗಳಷ್ಟು ಇಳುವರಿ ಬರುತ್ತದೆ. ಶೇ 48ರಷ್ಟು ಎಣ್ಣೆ ಅಂಶ ಹೊಂದಿದೆ. ಎಲೆಚುಕ್ಕಿ ರೋಗವನ್ನು ತಡೆದುಕೊಳ್ಳುವ ಸಹಿಷ್ಣುತೆಯನ್ನು ಈ ಎರಡೂ ತಳಿಗಳು ಹೊಂದಿವೆ. ಉತ್ತಮ ಬೆಲೆಗೆ ಶೇಂಗಾ ಮಾರಾಟವಾಗುತ್ತದೆ. ಉತ್ತಮ ಸಾಂಪ್ರದಾಯಿಕ ರುಚಿಯನ್ನೂ ಹೊಂದಿದೆ.

‘ಕದರಿಲೇಪಾಕ್ಷಿ ತಳಿಯ ಶೇಂಗಾ ಸಪ್ಪೆಯಾಗಿದ್ದು, ಕಹಿಯಾದ ರುಚಿಯನ್ನೂ ನೀಡುತ್ತದೆ. ಈ ತಳಿಯನ್ನು ಹೆಚ್ಚು ನೀರಾವರಿ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಇದು ಅಷ್ಟಾಗಿ ಯಶಸ್ಸು ಪಡೆದಿಲ್ಲ. ಕಾರಣ ತಳಿಗೆ ಸಕಾಲಕ್ಕೆ ಯಥೇಚ್ಛವಾಗಿ ನೀರು ಬೇಕು. ಜಿಪ್ಸಂ, ಲಘು ಪೋಷಕಾಂಶಗಳು ಸೇರಿದಂತೆ ದುಪ್ಪಟ್ಟು ಪ್ರಮಾಣದಲ್ಲಿ ಗೊಬ್ಬರ ನೀಡಬೇಕಾಗುತ್ತದೆ. ಬೆಳೆ ನಿರ್ವಹಣಾ ವೆಚ್ಚವೂ ದುಬಾರಿಯಾಗುತ್ತದೆ. ಒಂದು ವೇಳೆ ಕದರಿ ಲೇಪಾಕ್ಷಿಯನ್ನು ಬಿತ್ತನೆ ಮಾಡಿದಾಗ ಯಾವುದೇ ಹಂತದಲ್ಲಿ ಮಳೆ ಬರುವುದು ತಡವಾದರೂ ಅಥವಾ ಕಡಿಮೆ ಪ್ರಮಾಣದಲ್ಲಿ ಮಳೆ ಬಂದರೂ ಬೆಳೆ ಕೈಸೇರುವುದು ಕಷ್ಟ. ನಾಯಕನಹಟ್ಟಿ ಹೋಬಳಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬರುವುದೇ ಹೆಚ್ಚು. ಇದರಿಂದ ಇಳುವರಿಯ ಜೊತೆಗೆ ಶೇಂಗಾಕಾಯಿಯ ಗುಣಮಟ್ಟವೂ ಕುಸಿಯುತ್ತದೆ. ಆದರೆ ಟಿ.ಎಂ.ವಿ-2 ಮತ್ತು ಕೆ-6 ತಳಿಯು ಕಡಿಮೆ ಬಂದರೂ ಅಥವಾ ಮಳೆ ತಡವಾದರೂ ತಡೆದುಕೊಳ್ಳುವ ಶಕ್ತಿ ಹೊಂದಿದೆ’ ಎಂದು ಶೇಂಗಾ ಬೆಳೆಗಾರರಾದ ನಾಯಕನಹಟ್ಟಿಯ ಮಲೇಶಪ್ಪ, ಬೋಸಯ್ಯ, ರೇಖಲಗೆರೆ ಚಿನ್ನಯ್ಯ, ಕವಲನಹಳ್ಳಿ ತಮ್ಮಣ್ಣ
ತಿಳಿಸಿದರು.

....

ಕದರಿ ಲೇಪಾಕ್ಷಿ ತಳಿಯು ನೀರಾವರಿ ಪ್ರದೇಶಕ್ಕೆ ಸೂಕ್ತ. ಮಳೆಯಾಶ್ರಿತವಾಗಿ ಬೆಳೆಯಲು ಯೋಗ್ಯವಾಗಿಲ್ಲ. ನೀರಿನ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾರೂ ಗುಣಮಟ್ಟದಲ್ಲಿ ವ್ಯತ್ಯಾಸವಾಗಿ ಇಳುವರಿ ಕುಂಠಿತವಾಗುತ್ತದೆ.

-ಶಂಕ್ರಪ್ಪ, ಮಲ್ಲೂರಹಟ್ಟಿ

.....

ಟಿ.ಎಂ.ವಿ-2 ಮತ್ತು ಕೆ-6 ತಳಿಗಳು ತುಂಬಾ ಹಳೆಯದಾಗಿವೆ. ಬೇಗ ರೋಗಗಳಿಗೆ ತುತ್ತಾಗುತ್ತವೆ. ಕದರಿ ಲೇಪಾಕ್ಷಿ ತಳಿಯನ್ನು ಮಳೆಯಾಶ್ರಿತವಾಗಿ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ.

–ಎನ್. ಹೇಮಂತ್‍ ನಾಯ್ಕ್, ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.