ADVERTISEMENT

ಚಿತ್ರದುರ್ಗ | ಶೇಂಗಾ : ಅನ್ನದಾತರಿಗೆ ಹೊರೆಯಾದ ‘ಸರ್ಕಾರಿ ದರ’

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 5:28 IST
Last Updated 19 ಜೂನ್ 2023, 5:28 IST
ಚಿತ್ರದುರ್ಗ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರ
ಚಿತ್ರದುರ್ಗ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರ   

ಕೆ.ಪಿ.ಓಂಕಾರಮೂರ್ತಿ

ಹಿಂದಿನ ವರ್ಷ ರೈತರಿಗೆ 500 ಕ್ವಿಂಟಲ್‌ ಲೇಪಾಕ್ಷಿ ಶೇಂಗಾ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ವಿತರಿಸಿತ್ತು. ಇದು ಕಡಿಮೆ ರುಚಿ ಎಂಬ ಕಾರಣಕ್ಕೆ ರೈತರು ಬೆಳೆಯಲು ಆಸಕ್ತಿ ತೋರಲಿಲ್ಲ. ಈ ವರ್ಷ ಡಿ.ಎಚ್-256 ತಳಿಯ 500 ಕ್ವಿಂಟಲ್ ಶೇಂಗಾ ಬೀಜವನ್ನು ಜಿಲ್ಲೆಗೆ ವಿತರಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದೆ. 

ಚಿತ್ರದುರ್ಗ: ‘ಬಡವರ ಬಾದಾಮಿ’ ಎಂದು ಕರೆಯುವ ‘ಶೇಂಗಾ’ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಭಾಗದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಶೇಂಗಾವನ್ನು ನಂಬಿ ಕೃಷಿ ನಡೆಸುತ್ತಿದ್ದಾರೆ. ಸರ್ಕಾರದಿಂದ ವಿತರಿಸುವ ಬಿತ್ತನೆ ಶೇಂಗಾ ಬೀಜದ ದರ ದುಬಾರಿಯಾಗಿದ್ದು ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

‘1.12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಶೇಂಗಾ ಬಿತ್ತನೆಗೆ ಗುರಿ ನಿಗದಿಪಡಿಸಲಾಗಿದೆ. ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ 118 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ವಾಡಿಕೆಗಿಂತ ಶೇ 56ರಷ್ಟು ಮಳೆ ಕೊರತೆಯಾಗಿದೆ. ಕಳೆದ ವರ್ಷ ಮೇ ತಿಂಗಳ ವೇಳೆಗೆ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ ಈ ಬಾರಿ ಶೇಂಗಾ ಹೊರತುಪಡಿಸಿ ಇತರೆ ಬೆಳೆಗಳು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿವೆ.‌

ADVERTISEMENT

ಸರ್ಕಾರದಿಂದ ವಿತರಿಸುವ ಬಿತ್ತನೆ ಶೇಂಗಾ ಬೀಜದ ದರವನ್ನು ಈ ಬಾರಿ ಪ್ರತಿ ಕೆ.ಜಿ.ಗೆ ₹84 ನಿಗದಿಪಡಿಸಲಾಗಿದೆ. ಕ್ವಿಂಟಲ್ ಬಿತ್ತನೆ ಶೇಂಗಾ ಬೀಜದ ದರ ₹8,400 ಆಗುತ್ತದೆ. ಕರ್ನಾಟಕ ಎಣ್ಣೆಕಾಳು ಬೆಳಗಾರರ ಸಹಕಾರಿ ಒಕ್ಕೂಟ ನಿಯಮಿತ (ಕೆಒಎಫ್‌), ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಖಾಸಗಿ ಕಂಪನಿಗಳು ಬಿತ್ತನೆ ಶೇಂಗಾ ಬೀಜದ ವಿತರಣೆ ಮಾಡುತ್ತಿವೆ. ಜಿಲ್ಲೆಗೆ ಕೆಒಎಫ್‌ ಶೇಂಗಾ ಬಿತ್ತನೆ ಬೀಜ ಸರಬರಾಜು ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಲ್ ಬಿತ್ತನೆ ಶೇಂಗಾ ಬೀಜ ಖರೀದಿಗೆ ಸಾಮಾನ್ಯ ರೈತರಿಗೆ ₹1,400 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹2,000 ಸಬ್ಸಿಡಿ ನೀಡಲಾಗುತ್ತಿದೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಅವರ ನಿರ್ದೇಶನದಂತೆ ಕೆಒಎಫ್‌ ಬಿತ್ತನೆ ಬೀಜದ ದರವನ್ನು ₹6500ಕ್ಕೆ ನಿಗದಿ ಮಾಡಿ ಸಬ್ಸಿಡಿ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆಯಲಾಗಿದೆ. ದರ ಪರಿಷ್ಕರಣೆ ಆಗುವ ತನಕ ಈಗ ನಿಗದಿಗೊಳಿಸಿದ ದರಕ್ಕೆ ಮಾರಾಟ ಮಾಡಲಾಗುತ್ತದೆ
ಪಿ.ರಮೇಶ್‌ ಕುಮಾರ್‌, ಜಂಟಿ ಕೃಷಿ ನಿರ್ದೇಶಕ

‘ಕಳೆದ ಬಾರಿ ಕೆಒಎಫ್‌ ವಿತರಿಸಿದ ಬಿತ್ತನೆ ಶೇಂಗಾ ಬೀಜದ ಗುಣಮಟ್ಟ ಕಳಪೆಯಾಗಿತ್ತು. ಕೆಒಎಫ್‌ ಮಾರುಕಟ್ಟೆ ದರಕ್ಕಿಂತ ಅಧಿಕವಾಗಿ ಬಿತ್ತನೆ ಬೀಜದ ದರ ನಿಗದಿಪಡಿಸಿದೆ. ಮಾರುಕಟ್ಟೆಯಲ್ಲಿ ₹5,000ರಿಂದ ₹ 6,000ಕ್ಕೆ ದೊರೆಯುವ ಬಿತ್ತನೆ ಶೇಂಗಾ ಬೀಜಕ್ಕೆ ₹9,000 ಸಾವಿರ ದರ ನಿಗದಿ ಮಾಡಿದೆ. ಸಬ್ಸಿಡಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ. ತಕ್ಷಣವೇ ದರ ಇಳಿಕೆ ಮಾಡಬೇಕು’ ಎನ್ನುತ್ತಾರೆ ರೈತರು.

ಹಿಂದಿನ ವರ್ಷ ರೈತರಿಗೆ 500 ಕ್ವಿಂಟಲ್‌ ಲೇಪಾಕ್ಷಿ ಶೇಂಗಾ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ವಿತರಿಸಿತ್ತು. ಇದು ಕಡಿಮೆ ರುಚಿ ಎಂಬ ಕಾರಣಕ್ಕೆ ರೈತರು ಬೆಳೆಯಲು ಆಸಕ್ತಿ ತೋರಲಿಲ್ಲ. ಈ ವರ್ಷ ಡಿ.ಎಚ್-256 ತಳಿಯ 500 ಕ್ವಿಂಟಲ್ ಶೇಂಗಾ ಬೀಜವನ್ನು ಜಿಲ್ಲೆಗೆ ವಿತರಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದೆ. 

ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾರಾಟವಾಗುತ್ತಿರುವ ಬಿತ್ತನೆಯ ಶೇಂಗಾ ಗುಣಮಟ್ಟವಾಗಿಲ್ಲ. ಜೊತೆಗೆ ದುಬಾರಿ ಬೆಲೆ ನಿಗದಿ ಮಾಡಿರುವುದು ಅವೈಜ್ಞಾನಿಕ. ಸ್ಥಳೀಯವಾಗಿ ರೈತರು ಬೆಳೆದಿರುವ ಗುಣಮಟ್ಟದ ಶೇಂಗಾ ಒಂದು ಕ್ವಿಂಟಲ್‌ಗೆ ₹6500 ಕ್ಕೆ ದೊರೆಯುತ್ತಿದೆ
ಹೊಂಬಕ್ಕ, ರೈತ ಮಹಿಳೆ, ಗೂಳ್ಯ

ಮಾರುಕಟ್ಟೆಯಲ್ಲಿ ದೊರಕುವ ಖಾಸಗಿ ಕಂಪನಿಯ ಬಿತ್ತನೆ ಜೀಜವನ್ನು ಪರೀಕ್ಷಿಸಿಕೊಂಡು ತರಬಹುದು. ಆದರೆ ಸರ್ಕಾರ ನೀಡುವ ಬೀಜದ ವಿಷಯದಲ್ಲಿ ಇದಕ್ಕೆ ಮುಕ್ತ ಅವಕಾಶವಿಲ್ಲ. ಜತೆಗೆ ದುಬಾರಿ ಬೆಲೆ ತೆತ್ತು ಖರೀದಿ ಮಾಡಬೇಕು. ಸೀಮಾಂಧ್ರಕ್ಕೆ ಹೋಲಿಕೆ ಮಾಡಿದಲ್ಲಿ ರಾಜ್ಯದಲ್ಲಿ ಶೇಂಗಾ ಬೆಳೆಗಾರರನ್ನು ಪ್ರತಿ ಹಂತದಲ್ಲೂ ಸರ್ಕಾರ ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದೆ ಎನ್ನುತ್ತಾರೆ ಶೇಂಗಾ ಬೆಳೆಯುವ ರೈತರು. ಬಿತ್ತನೆ ಆರಂಭಕ್ಕೂ ಮುನ್ನವೇ ಸರ್ಕಾರ ಶೇಂಗಾ ಬಿತ್ತನೆ ಬೀಜದ ದರವನ್ನು ಇಳಿಕೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಧರ್ಮಪುರ: ಆಂಧ್ರದತ್ತ ಮುಖ ಮಾಡಿದ ರೈತರು

ಧರ್ಮಪುರ ಹೋಬಳಿಯಲ್ಲಿ 19 ಸಾವಿರ ಹೆಕ್ಟೇರ್‌ ಶೇಂಗಾ ಬಿತ್ತನೆಯ ಪ್ರದೇಶವಿದ್ದು ಅಂದಾಜು 15 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಇದಕ್ಕೆ 6 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜದ ಅವಶ್ಯಕತೆಯಿದೆ. ಆದರೆ ಬಿತ್ತನೆ ಶೇಂಗಾ ಖರೀದಿಗೆ ರೈತರು ಕಳೆದ ಮೂರು ವರ್ಷಗಳಿಂದ ಆಂಧ್ರಪ್ರದೇಶದತ್ತ ಮುಖ ಮಾಡಿದ್ದಾರೆ.

ಕೇವಲ ಆರೇಳು ಕಿ.ಮೀ.ದೂರದಲ್ಲಿರುವ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ಕಡಿಮೆ ದರಕ್ಕೆ ಸಿಗುತ್ತಿದೆ. ಆ ಕಾರಣಕ್ಕೆ ಬಿತ್ತನೆ ಕಾರ್ಯಕ್ಕೂ ಮುನ್ನವೇ ಹೋಗಿ ಖರೀದಿಸುತ್ತೇವೆ. ನಾಲ್ಕೈದು ವರ್ಷದಿಂದ ಇದೇ ರೀತಿ ಮಾಡುತ್ತಿದ್ದೇವೆ
ಎ.ಶಿವಮೂರ್ತಿ, ರೈತ ಬೆನಕನಹಳ್ಳಿ

ಅಮರಾಪುರದಿಂದ ಬಿತ್ತನೆ ಶೇಂಗಾ ಖರೀದಿಸಿಕೊಂಡು ಬರುವುದು ಸಾಮಾನ್ಯವಾಗಿದೆ. 30 ಕೆ.ಜಿಯ ಒಂದು ಪ್ಯಾಕೆಟ್‌ ಶೇಂಗಾಕ್ಕೆ ಆಂಧ್ರಪ್ರದೇಶದಲ್ಲಿ ₹1680 ಇದ್ದರೆ ಕರ್ನಾಟಕದಲ್ಲಿ ₹2655 ದರವಿದೆ. ಈ ಕಾರಣಕ್ಕೆ ಇಲ್ಲಿಯ ರೈತರು ನೆರೆಯ ಆಂಧ್ರಪ್ರದೇಶದತ್ತ ಮುಖ ಮಾಡಿದ್ದಾರೆ.

ಹೋಬಳಿ ಜಿಲ್ಲೆಯ ಗಡಿ ಭಾಗವಾಗಿದ್ದು ಕೇವಲ 6–7 ಕಿ.ಮೀ.ದೂರದಲ್ಲಿ ಆಂಧ್ರಪ್ರದೇಶದ ಗ್ರಾಮಗಳಿವೆ. ಇದರಿಂದ ಇಲ್ಲಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಂದಲೇ ಶೇಂಗಾ ಖರೀದಿಸುತ್ತಿದ್ದಾರೆ. ಪ್ರತಿ ವರ್ಷ ರೈತ ಸಂಪರ್ಕ ಕೇಂದ್ರದಲ್ಲಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. 2019-20ರಲ್ಲಿ 2700 ಕ್ವಿಂಟಲ್‌ 2020-21ರಲ್ಲಿ 2600 ಕ್ವಿಂಟಲ್ 2021-22ರಲ್ಲಿ 2472 ಕ್ವಿಂಟಲ್‌ 2022-23ರಲ್ಲಿ 2800 ಕ್ವಿಂಟಲ್‌ ಬಿತ್ತನೆ ಶೇಂಗಾ ಮಾರಾಟವಾಗಿದೆ. 2023-24ರಲ್ಲಿ 1600 ಕ್ವಿಂಟಲ್‌ ಸಂಗ್ರಹವಿದ್ದು ಈವರೆಗೂ ಕೇವಲ 600 ಕ್ವಿಂಟಲ್‌ ಮಾರಾಟವಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಕಿರಣ್‌ ಕುಮಾರ್‌.

ಶೇಂಗಾ ಬಿತ್ತನೆ ಬೀಜ ದರದ ವಿಚಾರದಲ್ಲಿ ಸರ್ಕಾರ ಪ್ರತಿ ಬಾರಿಯೂ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಅಧಿಕ ಬೆಲೆ ನಿಗದಿ ಮಾಡಿ ಸಬ್ಸಿಡಿ ನೀಡುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಕೂಡಲೇ ದರ ಇಳಿಕೆ ಮಾಡಿ ಸಬ್ಸಿಡಿ ಮುಂದುವರಿಸಬೇಕು
ಕೆ.ಪಿ.ಭೂತಯ್ಯ, ರಾಜ್ಯ ರೈತ ಸಂಘ ಉಪಾಧ್ಯಕ್ಷ

ಅಂಕಿ ಅಂಶಗಳನ್ನು ಗಮನಿಸಿದರೆ ಖರೀದಿ ಸಂಪೂರ್ಣ ಇಳಿಮುಖವಾಗುತ್ತಿದೆ. ಜತೆಗೆ ಕಳೆದ ವರ್ಷಕ್ಕಿಂತ ಈ ಬಾರಿ ಮತ್ತೆ ₹400 ದರ ಏರಿಕೆಯಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.  ‘ಆಂಧ್ರಪ್ರದೇಶದಲ್ಲಿ ಬಿತ್ತನೆ ಶೇಂಗಾ ದರ ಕಡಿಮೆ ಇರುವುದರಿಂದ ರೈತರು ಅಲ್ಲಿಂದಲೇ ಖರೀದಿಸುತ್ತಿದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಬಿತ್ತನೆ ಶೇಂಗಾ ದರವನ್ನು ಕಡಿತಗೊಳಿಸಿ ಸಬ್ಸಿಡಿ ದರವನ್ನು ಹೆಚ್ಚಿಸಿದಾಗ ಮಾತ್ರ ರೈತರಿಗೆ ನೆರವಾಗಲಿದೆ’ ಎನ್ನುತ್ತಾರೆ ರೈತ ಮದ್ದಿಹಳ್ಳಿ ಕೆ.ದೊಡ್ಡಯ್ಯ.

ನಾಯಕನಹಟ್ಟಿ: ಗೊಂದಲದಲ್ಲಿ ಶೇಂಗಾ ಬೆಳೆಗಾರರು

ಶೇಂಗಾ ಬೆಳೆಗೆ ಪ್ರಸಿದ್ಧಿ ಪಡೆದಿರುವ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಶೇಂಗಾ ಬೆಳೆಗಾರರು ಸಾಂಪ್ರದಾಯಿಕ ‘ಟಿಎಂವಿ-2 ತಳಿ’ಯ ಬಿತ್ತನೆ ಬೀಜ ಖರೀದಿಸಬೇಕೇ ಅಥವಾ ‘ಕದಿರಿ ಲೇಪಾಕ್ಷಿ’ ತಳಿ ಬಿತ್ತನೆ ಬೀಜ ಖರೀದಿಸಬೇಕೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೃಷಿ ಇಲಾಖೆ ಹೆಚ್ಚು ಇಳುವರಿ ರೋಗ ನಿರೋಧಕ ಶಕ್ತಿ ಹೊಂದಿರುವ ‘ಕದಿರಿ ಲೇಪಾಕ್ಷಿ’ ಎಂಬ ಸುಧಾರಿತ ಹೊಸ ಶೇಂಗಾ ತಳಿಯನ್ನು ಖರೀದಿಸಲು ರೈತರನ್ನು ಪ್ರೋತ್ಸಾಹಿಸುತ್ತಿದೆ.

ಕೃಷಿ ಅಧಿಕಾರಿಗಳ ಮಾತಿನಂತೆ ರೈತರು ‘ಕದಿರಿ ಲೇಪಾಕ್ಷಿ’ ತಳಿಯನ್ನು ಖರೀದಿಸಿ ಮಳೆಯಾಶ್ರಿತವಾಗಿ ಬಿತ್ತನೆ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟಕ್ಕೆ ಇಳುವರಿ ದೊರೆತಿಲ್ಲ. ಜತೆಗೆ ಮಾರುಕಟ್ಟೆಯಲ್ಲಿ ಈ ಸುಧಾರಿತ ಹೊಸ ತಳಿ ಖರೀದಿಗೆ ವ್ಯಾಪಾರಸ್ಥರು ಶೇಂಗಾ ಎಣ್ಣೆ ಕಾರ್ಖಾನೆಗಳ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಎಣ್ಣೆ ಅಂಶ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ರೈತರು ‘ಕದಿರಿ ಲೇಪಾಕ್ಷಿ’ ತಳಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ‘ಟಿಎಂವಿ-2 ತಳಿ’ಯು 105ರಿಂದ 110 ದಿನಗಳ ಬೆಳೆಯಾಗಿದ್ದು ತಿಳಿ ಗುಲಾಬಿ ಬಣ್ಣದ ದುಂಡಾದ ಬೀಜಗಳಿಂದ ಕೂಡಿರುತ್ತದೆ. ಜೊತೆಗೆ ಸಾಂಪ್ರದಾಯಿಕ ರುಚಿ ಹೊಂದಿರುತ್ತದೆ. ಪ್ರತಿ ಎಕರೆಗೆ 4ರಿಂದ 5 ಕ್ವಿಂಟಲ್‌ ಇಳುವರಿ ಬರುತ್ತದೆ. ಶೇ 45ರಿಂದ 46ರಷ್ಟು ಎಣ್ಣೆ ಅಂಶ ಇರುತ್ತದೆ.

ಹಾಗೆಯೇ ಕೆ-6 ಶೇಂಗಾ ತಳಿಯು 100ರಿಂದ 105 ದಿನಗಳ ಅವಧಿಯದಾಗಿದ್ದು ಬೀಜವು ಕಂದು ಬಣ್ಣಕ್ಕಿರುತ್ತದೆ. ಎಕರೆಗೆ 6ರಿಂದ 7 ಕ್ವಿಂಟಲ್‌ ಇಳುವರಿ ಲಭಿಸುತ್ತದೆ. ಶೇ 48ರಷ್ಟು ಎಣ್ಣೆ ಅಂಶ ಹೊಂದಿದೆ. ಜತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ‘ಕದಿರಿ ಲೇಪಾಕ್ಷಿ’ ತಳಿಯ ಶೇಂಗಾದ ರುಚಿ ಸಪ್ಪೆ ಮತ್ತು ಕಹಿಯಾಗಿರುತ್ತದೆ. ನೀರಾವರಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು ಮಳೆಯಾಶ್ರಿತ ಪ್ರದೇಶದಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಈ ತಳಿಗೆ ಸಕಾಲಕ್ಕೆ ಹೆಚ್ಚು ನೀರು ಜಿಪ್ಸಂ ಲಘು ಪೋಷಕಾಂಶ ಸೇರಿದಂತೆ ದುಪ್ಪಟ್ಟು ಪ್ರಮಾಣದಲ್ಲಿ ಗೊಬ್ಬರ ನೀಡಬೇಕು. ಜತೆಗೆ ಬೆಳೆ ನಿರ್ವಹಣಾ ವೆಚ್ಚವೂ ದುಬಾರಿ. ಮಳೆ ಬರುವುದು ತಡವಾದರೂ ಅಥವಾ ಕಡಿಮೆ ಪ್ರಮಾಣದಲ್ಲಿ ಮಳೆ ಬಂದರೂ ಬೆಳೆ ಕೈ ಸೇರುವುದು ಕಷ್ಟ.

ಇಳುವರಿಯ ಜತೆಗೆ ಶೇಂಗಾ ಕಾಯಿಯ ಗುಣಮಟ್ಟ ಕುಸಿಯುತ್ತದೆ. ಟಿ.ಎಂ.ವಿ-2 ಮತ್ತು ಕೆ-6 ತಳಿಯು ಕಡಿಮೆ ಮಳೆ ಬಂದರೂ ಅಥವಾ ತಡವಾದರೂ ತಾಳಿಕೊಳ್ಳುವ ಶಕ್ತಿ ಹೊಂದಿದೆ ಎಂಬುದು ಶೇಂಗಾ ಬೆಳೆಗಾರರಾದ ಬೋಸಯ್ಯ ಕೃಷ್ಣಮೂರ್ತಿ ಅವರ ಅಭಿಪ್ರಾಯ. ಅದಕ್ಕಾಗಿ ಚಳ್ಳಕೆರೆ ತಾಲ್ಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆಗಾರರು ಕದಿರಿ ಲೇಪಾಕ್ಷಿ ತಳಿಯ ಬದಲಿಗೆ ಹಳೆಯ ಟಿ.ಎಂ.ವಿ-2 ಕೆ-6 ತಳಿಯ ಶೇಂಗಾ ಬಿತ್ತನೆ ಬೀಜದ ಖರೀದಿಗೆ ಚಿತ್ತಹರಿಸಿದ್ದಾರೆ.

ಮುಂಗಾರು ಹಂಗಾಮಿನ ಶೇಂಗಾ ಬಿತ್ತನೆ

ತಾಲ್ಲೂಕು; ಗುರಿ (ಹೆಕ್ಟೇರ್‌)

ಚಳ್ಳಕೆರೆ;74040

ಚಿತ್ರದುರ್ಗ;4200

ಹಿರಿಯೂರು;11030

ಹೊಳಲ್ಕೆರೆ;500

ಹೊಸದುರ್ಗ;1920

ಮೊಳಕಾಲ್ಮುರು;20710

ಒಟ್ಟು;112400

(ಮಾಹಿತಿ: ಕೃಷಿ ಇಲಾಖೆ)

ಚಿತ್ರದುರ್ಗದಲ್ಲಿ ದಾಸ್ತಾನಿರುವ ಬಿತ್ತನೆ ಶೇಂಗಾ ಬೀಜ
ಕೆಒಎಫ್‌ನ 30 ಕೆ.ಜಿ.ಯ ಪ್ಯಾಕೆಟ್‌
ಆಂಧ್ರಪ್ರದೇಶದ ಅಮರಾಪುರದಿಂದ ತಂದಿರುವ ಬಿತ್ತನೆ ಶೇಂಗಾ ಬೀಜ
ಕದಿರಿ ಲೇಪಾಕ್ಷಿ ತಳಿ ಶೇಂಗಾ ಬೀಜ

Cut-off box - ಮುಂಗಾರು ಹಂಗಾಮಿನ ಶೇಂಗಾ ಬಿತ್ತನೆ ತಾಲ್ಲೂಕು ಗುರಿ (ಹೆಕ್ಟೇರ್‌) ಚಳ್ಳಕೆರೆ;74040 ಚಿತ್ರದುರ್ಗ;4200 ಹಿರಿಯೂರು;11030 ಹೊಳಲ್ಕೆರೆ;500 ಹೊಸದುರ್ಗ;1920 ಮೊಳಕಾಲ್ಮುರು;20710 ಒಟ್ಟು;112400 (ಮಾಹಿತಿ: ಕೃಷಿ ಇಲಾಖೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.