ADVERTISEMENT

ನಾಯಕನಹಟ್ಟಿ: ಅದ್ದೂರಿಯಾಗಿ ನಡೆದ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ

ಸುಡು ಬಿಸಿಲನ್ನು ಲೆಕ್ಕಿಸದೇ ಭಕ್ತಿಯ ಪರಾಕಾಷ್ಠೆ ತೋರಿದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 16:23 IST
Last Updated 26 ಮಾರ್ಚ್ 2024, 16:23 IST
ನಾಯಕನಹಟ್ಟಿ ಪಟ್ಟಣದ ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿರುವುದು
ನಾಯಕನಹಟ್ಟಿ ಪಟ್ಟಣದ ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿರುವುದು   

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ದೊಡ್ಡ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.

ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ನಾಯಕ ಹಾಗೂ ಕಾಯಕ ತತ್ವವನ್ನು ಸಾರಿದ ಕಾಯಕಯೋಗಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರೆಯು ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಸಕಲ ಸಂಪ್ರದಾಯ, ವಿಧಿ ವಿಧಾನಗಳಿಂದ ನೆರವೇರಿತು. 

ಜಾತ್ರೆಯಲ್ಲಿ ನೆರೆದ ಲಕ್ಷಾಂತರ ಭಕ್ತ ಸಾಗರದ ಸಮ್ಮಖದಲ್ಲಿ ಆಲಂಕೃತಗೊಂಡ ಮಹಾರಥವು ರಾಜ ಗಾಂಭೀರ್ಯದಿಂದ ಸಾಗಿತು. ಬೃಹತ್ ಗಾತ್ರದ ಮಿಣಿ (ಹಗ್ಗ) ಹಿಡಿದು ಸಾವಿರಾರು ಭಕ್ತರು ಮಹಾರಥವನ್ನು ಎಳೆಯುತ್ತಿದ್ದರೆ, ತೇರು ಬೀದಿಯ ಇಕ್ಕೆಲಗಳಲ್ಲಿ ನರೆದಿದ್ದ ಲಕ್ಷಾಂತರ ಭಕ್ತರು ತಮ್ಮ ಹರಕೆಯಾಗಿ ಬಾಳೆಹಣ್ಣು, ಚೂರುಬೆಲ್ಲ, ಮೆಣಸು, ಧವನದ ಹೂಗಳನ್ನು ರಥಕ್ಕೆ ಎರಚಿದರು. ಮಹಿಳೆಯರು ಮಕ್ಕಳು ಜನ ಸಾಗರದಲ್ಲಿ ನುಗ್ಗಿಬಂದು ರಥದ ಚಕ್ರಕ್ಕೆ ತೆಂಗಿನ ಕಾಯಿಗಳನ್ನು ಒಡೆದು ಭಕ್ತಿಭಾವದಲ್ಲಿ ಪುನೀತರಾಗುತ್ತಿದ್ದರು. ತೇರುಬೀದಿಯಿಂದ ಪಾದಗಟ್ಟೆಯವರೆಗೂ ರಥವನ್ನು ಎಳೆದ ಭಕ್ತರು ತಿಪ್ಪೇಶನ ನಾಮಸ್ಮರಣೆ ಮಾಡಿದರು. ಸಂಜೆ 4.35ಕ್ಕೆ ಪಾದಗಟ್ಟೆಗೆ ಬಂದ ರಥವು ಸಂಜೆ 6.10ಕ್ಕೆ ಈಶ್ವರ ದೇಗುಲದ ಬಳಿ ಸ್ವಸ್ಥಾನಕ್ಕೆ ಮರಳಿತು. ಭಕ್ತರು ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿ ಕೈಮುಗಿದು ತಮ್ಮ ಊರುಗಳ ಕಡೆಗೆ ಪಯಣ ಬೆಳೆಸಿದರು.

ADVERTISEMENT
ಜಾತ್ರೆಯಲ್ಲಿ ಹರಕೆಹೊತ್ತ ಭಕ್ತರು ಕೊಬ್ಬರಿ ಸುಡುತ್ತಿರುವುದು

ಸಾಧು-ಸಂತರ ಸಮಾಗಮ: ಯೋಗಿಪುರುಷ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ನೂರಾರೂ ಸಂಖ್ಯೆಯಲ್ಲಿ ವಿವಿಧ ಜಿಲ್ಲೆಗಳಿಂದ, ಹೊರರಾಜ್ಯಗಳಿಂದ ಸಾಧು-ಸಂತರು ಹೊರಮಠದ ಆವರಣದಲ್ಲಿ ಕಂಡು ಬಂದರು. ಮಹಿಳೆ ಹಾಗೂ ಪುರುಷ ಸನ್ಯಾಸಿಗಳು, ಸಾಧುಗಳು ಹಾಡು ಭಜನೆಯಲ್ಲಿ ತೊಡಗಿದ್ದರು. ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ ಇಲಾಖೆಗಳು ವಸ್ತು ಪ್ರದರ್ಶನ ಏರ್ಪಡಿಸಿದ್ದವು. ಪಶು ಸಂಗೋಪನಾ ಇಲಾಖೆಯು ಜೋಡೆತ್ತು ರಾಸುಗಳ ಪ್ರದರ್ಶನ ಏರ್ಪಡಿಸಿತ್ತು. ಗಮನ ಸೆಳೆದ ರಾಸುಗಳಿಗೆ ಬಹುಮಾನ ನೀಡಲಾಯಿತು. 

ತಂದೆಯ ಹೆಗಲ ಮೇಲೆ ಕುಳಿತು ಜಾತ್ರೆಯನ್ನು ವೀಕ್ಷಿಸುತ್ತಿರುವ ಪುಠಾಣಿ ಮಗು

ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ದ್ರಾಕ್ಷಾರಸ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಯೋಗೀಶ್‌ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೋಲಿಸ್ ಅಧೀಕ್ಷಕ ಧರ್ಮೇಂದ್ರ ಕುಮಾರ್‌ ಮೀನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಎಸ್.ಸೋಮಶೇಖರ್, ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ರೆಹಾನ್‌ಪಾಷಾ, ಮುಖ್ಯಾಧಿಕಾರಿ ಎ.ನಸರುಲ್ಲಾ, ಹಾಗೂ ಲಕ್ಷಾಂತರ ಭಕ್ತರು ಇದ್ದರು.

ಜಾತ್ರೆಯಲ್ಲಿ ಹೆಂಗೆಳೆಯರು ಕೈಗಳಿಗೆ ಬಳೆಯನ್ನು ತೊಡಿಸಿಕೊಳ್ಳುತ್ತಿರುವುದು
ಜಾತ್ರೆಯಲ್ಲಿ ಭರ್ಜರಿ ಸಿಹಿ ತಿಂಡಿಗಳ ವ್ಯಾಪಾರದಲ್ಲಿ ನಿರತ ವರ್ತಕರು

ಕಲಾಮೇಳಗಳ ಮೆರುಗು: 

'ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದವು. ಡೊಳ್ಳು ಕಂಸಾಳೆ ವೀರಗಾಸೆ ತಮಟೆ ಉರುಮೆ ಚೌಡಿಕೆ ಗೊರವರು ಕರಡೆವಾದ್ಯ ನಂಧಿದ್ವಜ ನಂದಿಕೋಲು ಕುಣಿತಗಳು ನರೆದ ಭಕ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದವು. ಅದರಲ್ಲೂ ಮಹಿಳಾ ವೀರಗಾಸೆ ಹಾಗೂ ಮಹಿಳಾ ಡೊಳ್ಳುಕುಣಿತ ಆಕರ್ಷಕವಾಗಿತ್ತು.

ಮಜ್ಜಿಗೆ ಅನ್ನಸಂತರ್ಪಣೆ:

ಪಟ್ಟಣದ ಜೈಭೀಮ್‌ ಯುವಕರ ಸಂಘ ತನ್‌ಜೀಮ್‌ ವೆಲ್‌ಫೇರ್ ವರ್ತಕರ ಸಂಘ ಶ್ರೀಸಾಯಿ ಎಂಟರ್‌ಪ್ರೈಸಸ್ ಕೆನರಾಬ್ಯಾಂಕ್ ಸೇರಿದಂತೆ ಹತ್ತಾರು ಸಂಘಟನೆಗಳು ಪಾನಕ ಮಜ್ಜಿಗೆ ಶುದ್ಧಕುಡಿಯುವ ನೀರು ಉಪಹಾರ ಅನ್ನಸಂತರ್ಪಣೆ ಏರ್ಪಡಿಸಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.