ADVERTISEMENT

ಧಾರಾಕಾರ ಮಳೆ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕಟಾವು ಹಂತದಲ್ಲಿ ಬೆಳೆ ಕಳೆದುಕೊಂಡ ರೈತರು, ಪರಿಹಾರದ ಬಗ್ಗೆ ಸಚಿವರು ಸ್ಪಷ್ಟನೆ ನೀಡಲು ಒತ್ತಾಯ

ಎಂ.ಎನ್.ಯೋಗೇಶ್‌
Published 25 ಅಕ್ಟೋಬರ್ 2024, 7:59 IST
Last Updated 25 ಅಕ್ಟೋಬರ್ 2024, 7:59 IST
ಚಿತ್ರದುರ್ಗದ ಹೊರವಲಯದ ಜಮೀನಿನಲ್ಲಿ ಮಳೆ ನೀರು ನಿಂತಿದ್ದು ಮೆಕ್ಕೆಜೋಳ ಬೆಳೆ ಹಾಳಾಗಿರುವುದು
ಚಿತ್ರದುರ್ಗದ ಹೊರವಲಯದ ಜಮೀನಿನಲ್ಲಿ ಮಳೆ ನೀರು ನಿಂತಿದ್ದು ಮೆಕ್ಕೆಜೋಳ ಬೆಳೆ ಹಾಳಾಗಿರುವುದು   

ಚಿತ್ರದುರ್ಗ: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಕಟಾವು ಹಂತದಲ್ಲಿದ್ದ ಬೆಳೆಗಳು ಹಾಳಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪ್ರಮುಖವಾಗಿ ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ತೊಗರಿ, ಸಿರಿಧಾನ್ಯ ಹಾಗೂ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು ಅನ್ನದಾತ ಅಪಾರ ನಷ್ಟ ಅನುಭವಿಸಿದ್ದಾನೆ.

ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಬಿತ್ತನೆ ಮಾಡಿ ಅಕ್ಟೋಬರ್‌ ತಿಂಗಳಲ್ಲಿ ಕಟಾವು ಮಾಡಬೇಕಾಗಿದ್ದ ಬೆಳೆಗಳು ಮಳೆಗೆ ಸಿಲುಕಿ ಹಾಳಾಗಿವೆ. ಇನ್ನೇನು ಕಟಾವು ಮಾಡಿ ಮನೆಗೆ ಧಾನ್ಯ ತುಂಬಿಸಿಕೊಳ್ಳಬೇಕಾದ ಅವಧಿಯಲ್ಲೇ ಮಳೆ ಬಂದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ವಿವಿಧೆಡೆ ಕೆರೆ, ಹಳ್ಳ, ಕೊಳ್ಳಗಳು ತುಂಬಿ, ಕೋಡಿ ಬಿದ್ದು ಕಟಾವಿಗೆ ಬಂದಿದ್ದ ಬೆಳೆಗಳು ಕೊಚ್ಚಿ ಹೋಗಿವೆ.

ಸಾಲ ಪಡೆದು, ಅಪಾರ ಹಣ ಖರ್ಚು ಮಾಡಿ ನಾಲ್ಕೈದು ತಿಂಗಳುಗಳಿಂದ ಕಷ್ಟಪಟ್ಟು ಬೆಳೆ ಉಳಿಸಿಕೊಂಡಿದ್ದ ರೈತರು ಕಟಾವಿಗೆ ಅಂತಿಮ ಸಿದ್ಧತೆ ನಡೆಸುತ್ತಿದ್ದರು. ವಾರದಿಂದ ಜಿಲ್ಲೆಯಾದ್ಯಂತ ಸರಾಸರಿ 10 ಸೆಂ.ಮೀ. ಮಳೆಯಾಗಿದೆ. ಶೇ 308ರಷ್ಟು ಹೆಚ್ಚುವರಿ ಮಳೆಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಚಳ್ಳಕೆರೆ ತಾಲ್ಲೂಕು ಒಂದರಲ್ಲೇ 11.3 ಸೆಂ.ಮೀ. ಮಳೆಯಾಗಿದ್ದು, ಅಲ್ಲಿಯ ರೈತರು ಅತೀ ಹೆಚ್ಚು ನಷ್ಟ ಅನುಭವಿಸಿದ್ದಾರೆ.

ADVERTISEMENT

ಈರುಳ್ಳಿ ಬೆಳೆದವರ ಕಣ್ಣಲ್ಲಿ ಕಣ್ಣೀರು: ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ ತಾಲ್ಲೂಕಿನಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯಲಾಗಿದ್ದು, ಕಟಾವಿನ ಹಂತದಲ್ಲೇ ಮಳೆ ಬಂದಿದೆ. ಪ್ರತಿ ವರ್ಷ ಮೇ ತಿಂಗಳಲ್ಲೇ ಈರುಳ್ಳಿ ಬಿತ್ತನೆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಜೂನ್‌, ಜುಲೈ ತಿಂಗಳಲ್ಲಿ ಹೆಚ್ಚು ಮಳೆ ಸುರಿದ ಕಾರಣ ಆಗಸ್ಟ್‌ವರೆಗೂ ಬಿತ್ತನೆ ಮಾಡಿದ್ದರು.

ಶೇ 30ರಷ್ಟು ಈರುಳ್ಳಿಯನ್ನು ಕಟಾವು ಮಾಡಿ ಹೊಲಗಳಲ್ಲೇ ಸಂಗ್ರಹ ಮಾಡಿದ್ದರು. ಶೇ 70ರಷ್ಟು ಹೊಲದಲ್ಲೇ ಇದ್ದು ಕಟಾವಿಗೆ ಸಿದ್ಧವಾಗಿತ್ತು. ಮಳೆಯಿಂದಾಗಿ ಸಂಗ್ರಹ ಮಾಡಿದ್ದ ಈರುಳ್ಳಿಯ ಸಾಗಣೆ ಮಾಡಲು ಸಾಧ್ಯವಾಗದ ಕಾರಣ ಈರುಳ್ಳಿ ಕೊಳೆಯುವ ಸ್ಥಿತಿ ತಲುಪಿದೆ. ರೈತರು ಟಾರ್ಪಲ್‌ನಿಂದ ಮುಚ್ಚಿ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಈರುಳ್ಳಿ ಮೊಳಕೆಯೊಡೆಯುತ್ತಿದ್ದು ಮೌಲ್ಯ ಕಳೆದುಕೊಂಡಿದೆ ಎಂದು ರೈತರು ಹೇಳುತ್ತಾರೆ.

‘ಜಿಲ್ಲೆಯಿಂದ ನೂರಾರು ಲೋಡ್‌ ಈರುಳ್ಳಿ ಲಾರಿಗಳೂ ಬೆಂಗಳೂರು ಎಪಿಎಂಸಿ ತಲುಪಿದ್ದವು. ಆದರೆ ಭಾರಿ ಮಳೆಯಿಂದ ಮಾರುಕಟ್ಟೆಗೆ ತಲುಪಲು ಸಾಧ್ಯವಾಗಲಿಲ್ಲ. ವಾರಕ್ಕೂ ಹೆಚ್ಚು ಕಾಲ ಲಾರಿಯಲ್ಲೇ ಈರುಳ್ಳಿ ಕೊಳೆಯಿತು’ ಎಂದು ತುರುವನೂರು ಗ್ರಾಮದ ರೈತ ಮಹಾಂತೇಶ್‌ ಬೇಸರ ವ್ಯಕ್ತಪಡಿಸಿದರು.

ಮೇಲೆ ಬಾರದ ಶೇಂಗಾ: ಮೊಳಕಾಲ್ಮೂರು, ಚಳ್ಳಕೆರೆ ತಾಲ್ಲೂಕಿನ ರೈತರಿಗೆ ಜೀವನಾಧಾರವಾಗಿರುವ ಶೇಂಗಾ ಬೆಳೆ ಕೂಡ ಕಟಾವು ಹಂತದಲ್ಲೇ ನಾಶವಾಗಿದೆ. ಸರಿಯಾಗಿ ಕಾಯಿಕಟ್ಟಿದ ಅವಧಿಯಲ್ಲಿ ಮಳೆಯಾಗಿ ಭೂಮಿಯ ತೇವದಿಂದಾಗಿ ಕಾಯಿ ಕೊಳೆತು ಹೋಗಿದೆ. ಕಿತ್ತರೆ ಬರೀ ಗಿಡ ಮಾತ್ರ ಮೇಲೆ ಬರುತ್ತಿದ್ದು ಕಾಯಿ ಬರುತ್ತಿಲ್ಲ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ಪರಶುರಾಂಪುರ ಭಾಗದಲ್ಲಿ ಅಪಾರ ಪ್ರಮಾಣದ ಶೇಂಗಾ ಹಾನಿಗೀಡಾಗಿದೆ.

ಮೆಕ್ಕೆಜೋಳ, ರಾಗಿ, ಹತ್ತಿ, ತೊಗರಿ ಮತ್ತು ಸಿರಿಧಾನ್ಯ ಬೆಳೆಯೂ ಅತೀ ಮಳೆಯಿಂದ ಹಾನಿಗೀಡಾಗಿದೆ. ದಾಳಿಂಬೆ, ಟೊಮೆಟೊ ಸೇರಿದಂತೆ ತೋಟಗಾರಿಕೆ ಬೆಳಗಳಿಗೂ ನಷ್ಟ ಉಂಟಾಗಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೊಸದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಿರಿಧಾನ್ಯ ಬಿತ್ತನೆ ಮಾಡಿದ್ದು ಅಧಿಕ ಮಳೆಗೆ ಸಿಲುಕಿ ಕೊಳೆಯುವ ಸ್ಥಿತಿಗೆ ತಲುಪಿದೆ.

‘2022–23ರಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಆಗಲೂ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿತ್ತು. ವಾಯುಭಾರ ಕುಸಿತದಿಂದಲೇ ತೀವ್ರವಾದ ಮಳೆ ಬಂದಿತ್ತು. ಈಗಲೂ ಅಂಥದ್ದೇ ಪರಿಸ್ಥಿತಿ ಬಂದಿದೆ. ಈಗ ನಮ್ಮ ಜಿಲ್ಲೆಯ ರೈತರಿಗೆ ಆಗಿರುವ ನಷ್ಟವನ್ನು ಬೆಲೆಕಟ್ಟಲು ಸಾಧ್ಯವೇ ಇಲ್ಲ. ಆದರೂ ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಒತ್ತಾಯಿಸಿದರು.

ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಜಿಲ್ಲೆಯಾದ್ಯಂತ 664.91 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ.
– ಬಿ.ಮಂಜುನಾಥ್‌ ಕೃಷಿ ಜಂಟಿ ನಿರ್ದೇಶಕ ಚಿತ್ರದುರ್ಗ

ಕಂದಾಯ ಸಚಿವರ ಪರಿಶೀಲನೆ

ಇಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಶುಕ್ರವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು ಪರಿಶೀಲನೆ ನಡೆಸಲಿದ್ದಾರೆ. ಅದಕ್ಕೂ ಮೊದಲು ಗುರುವಾರ ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಜೆ.ಸೋಮಶೇಖರ್‌ ತಾಲ್ಲೂಕಿನ ವಿವಿಧೆಡೆ ತೆರಳಿ ಹಾನಿ ಪರಿಶೀಲಿಸಿದರು. ‘ಸಚಿವರು ಜಿಲ್ಲೆಗೆ ಬರುತ್ತಿದ್ದು ಕಾಟಾಚಾರಕ್ಕಾಗಿ ಮಳೆಹಾನಿ ಪರಿಶೀಲನೆ ನಡೆಸಿ ತೆರಳಬಾರದು. ಸರ್ಕಾರದಲ್ಲಿ ಹಣ ಇಲ್ಲ ಪರಿಹಾರ ಬಾರುವುದಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕು’ ಎಂದು ರೈತಸಂಘದ ಮುಖಂಡರು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.