ಚಳ್ಳಕೆರೆ: ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ತಾಲ್ಲೂಕಿನ ಹಲವು ಕೆರೆಗಳು ಕೋಡಿ ಬಿದ್ದಿವೆ.
ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜನಗುಡಿ ಕೆರೆ, ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಿರೇಮದುರೆ ಕೆರೆ, ದೊಡ್ಡೇರಿ ಚಿಕ್ಕಕೆರೆ, ನಗರಂಗೆರೆ ಕೆರೆ ತುಂಬಿ ಕೋಡಿ ಬಿದ್ದು ನೀರು ರಭಸವಾಗಿ ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆಗೆ ಹರಿಯುತ್ತಿದೆ.
ಅಜ್ಜನಗುಡಿಕೆರೆ ಕೋಡಿಯಿಂದ ಚಳ್ಳಕೆರೆ ನಗರದ ಪಾವಗಡ ರಸ್ತೆ ಮಾರ್ಗದ ಹಳ್ಳದ ಮೂಲಕ ಹೆಚ್ಚು ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನಗರಪ್ರದೇಶಕ್ಕೆ ಬರಲು ಗ್ರಾಮೀಣ ಪ್ರದೇಶದ ಜನರು ಹರಸಹಾಸ ಪಡುವಂತಾಗಿದೆ.
ತಳಕು ಗ್ರಾಮದ ಭೀಮನಕೆರೆ, ಹೊಸಹಳ್ಳಿ ಕೆರೆಗಳು ಕೂಡ ಕೋಡಿ ಬಿದ್ದಿದ್ದು, ಬೆಳೆ ಪ್ರದೇಶಕ್ಕೆ ನೀರು ನುಗ್ಗಿದೆ. ಇದರಿಂದ ಮೆಕ್ಕೆಜೋಳ, ಈರುಳ್ಳಿ ಬೆಳೆ ಹಾನಿಯಾಗಿದೆ.
ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರದೇವರಹಟ್ಟಿ ಗ್ರಾಮದಲ್ಲಿ ಚರಂಡಿ ನಿರ್ಮಿಸದ ಕಾರಣ ಇಡೀ ಗ್ರಾಮದಲ್ಲಿ ಮಳೆ ನೀರು ಆವರಿಸಿಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆ ನೀರು ಕೆಲವು ಮನೆಗೆ ನುಗ್ಗಿದ ಪರಿಣಾಮ ಆಹಾರ ಧಾನ್ಯ, ಬಟ್ಟೆ ಇನ್ನಿತರ ವಸ್ತುಗಳು ನೀರು ಪಾಲಾಗಿವೆ.
ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ಹಾದು ಹೋಗುವ ಶ್ರೀರಂಗಪಟ್ಟಣ–ಬೀದರ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆಗೋಡೆ ಕುಸಿದು ಬಿದ್ದಿದೆ. ಡಾಂಬರ್ ರಸ್ತೆ ಮಳೆ ನೀರಿಗೆ ಕಿತ್ತು ಹೋಗಿದೆ.
ಕಳಪೆ ಕಾಮಗಾರಿಯಿಂದಾಗಿ ರಸ್ತೆ ತಡೆಗೋಡೆ ಕುಸಿದು ಬಿದ್ದಿದೆ. ಹೀಗಾಗಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ರಸ್ತೆ ಹಾಗೂ ತಡೆಗೋಡೆ ದುರಸ್ತಿ ಮಾಡಿಸಿಕೊಡಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.