ADVERTISEMENT

ಚಿತ್ರದುರ್ಗ: ಬರದ ಬವಣೆ ನೀಗಿಸಿತು ‘ಉಲ್ಲಾಸದ ಮಳೆ’, ಗರಿಗೆದರಿದ ಕೃಷಿ ಚಟುವಟಿಕೆ

ಮುಂಗಾರು ಬಿತ್ತನೆಗೆ ರೈತರಲ್ಲಿ ಉತ್ಸಾಹ

ಜಿ.ಬಿ.ನಾಗರಾಜ್
Published 24 ಮೇ 2024, 6:27 IST
Last Updated 24 ಮೇ 2024, 6:27 IST
ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಬಳಿ ಶೇಂಗಾ ಬಿತ್ತನೆಯಲ್ಲಿ ತೊಡಗಿರುವ ರೈತರು
ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಬಳಿ ಶೇಂಗಾ ಬಿತ್ತನೆಯಲ್ಲಿ ತೊಡಗಿರುವ ರೈತರು   

ಚಿತ್ರದುರ್ಗ: ಬೇಸಿಗೆಯಲ್ಲಿ ಬಿಸಿಗಾಳಿಗೆ ತತ್ತರಿಸಿದ್ದ ಜಿಲ್ಲೆಯ ಕೃಷಿಕರ ಬದುಕು ವಾರದಲ್ಲಿ ಬದಲಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದ ಗ್ರಾಮೀಣ ಪ್ರದೇಶದ ಜಲಮೂಲಗಳಲ್ಲಿ ನೀರು ಕಾಣಿಸಿಕೊಂಡಿದೆ. ಕೃತಿಕಾ ಮಳೆ ಇಳೆಯನ್ನು ತಂಪಾಗಿಸಿದ್ದು, ಬರದ ಬವಣೆಯನ್ನು ದೂರ ಮಾಡಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಉಂಟಾಗಿದ್ದ ಮಳೆಯ ಕೊರತೆಯ ಪರಿಣಾಮ ಜಿಲ್ಲೆ ಭೀಕರ ಬರಕ್ಕೆ ತುತ್ತಾಗಿತ್ತು. ಬೇಸಿಗೆಯಲ್ಲಿ ಜನ ಮತ್ತು ಜಾನುವಾರು ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಕೊಳವೆಬಾವಿಗಳು ಬತ್ತಿದ ಪರಿಣಾಮವಾಗಿ ಅಡಿಕೆ, ತೆಂಗಿನ ತೋಟಗಳು ಒಣಗಿ ಬರದ ತೀವ್ರತೆಯನ್ನು ಸಾರುತ್ತಿದ್ದವು. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ ಮೊರೆ ಹೋಗಿದ್ದರು 10 ದಿನಗಳಿಂದ ಸುರಿದ ಮುಂಗಾರುಪೂರ್ವ ಮಳೆ ಈ ಸಮಸ್ಯೆಗಳನ್ನು ನಿವಾರಿಸಿದೆ.

ಜ.1ರಿಂದ ಮೇ 21ರವರೆಗೆ ಜಿಲ್ಲೆಯಲ್ಲಿ ಸರಾಸರಿ 79 ಮಿ.ಮೀ ಮಳೆಯಾಗಬೇಕಿತ್ತು. ವಾಸ್ತವವಾಗಿ ಸರಾಸರಿ 118 ಮಿ.ಮೀ ಮಳೆಯಾಗಿದ್ದು, ಶೇ 48ರಷ್ಟು ಹೆಚ್ಚುವರಿ ಸುರಿದಿದೆ. ಮೇ ತಿಂಗಳಲ್ಲಿ 41 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಮೇ 1ರಿಂದ 21ರವರೆಗೆ 105 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 131 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ.

ADVERTISEMENT

ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುವಲ್ಲಿ ರೈತರು ಉತ್ಸುಕತೆ ತೋರುತ್ತಿದ್ದಾರೆ. ನಿತ್ಯ ನೀರು ಎತ್ತುತ್ತಿದ್ದ ಕೊಳವೆಬಾವಿಗಳು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿವೆ. ಜಮೀನುಗಳಲ್ಲಿ ಜೋಡೆತ್ತು ಬೇಸಾಯ, ಟ್ರ್ಯಾಕ್ಟರ್‌ ಸದ್ದು ಕೇಳತೊಡಗಿದೆ. ಬಿತ್ತನೆಯ ಕಡೆ ರೈತರ ಚಿತ್ತ ಹರಿದಿದೆ.

ಜಿಲ್ಲೆಯ ಕೃಷಿ ಭೂಮಿಯಲ್ಲಿ ಶೇ 85ರಷ್ಟು ಪ್ರದೇಶ ಮುಂಗಾರು ಹಂಗಾಮನ್ನೇ ಅವಲಂಬಿಸಿದೆ. 3.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಶೇಂಗಾ, ಮೆಕ್ಕೆಜೋಳ, ರಾಗಿ ಹಾಗೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಮೇ ಅಂತ್ಯಕ್ಕೆ ಬಿತ್ತನೆ ಆರಂಭವಾಗುತ್ತದೆ. ಹೊಸದುರ್ಗ ತಾಲ್ಲೂಕಿನಲ್ಲಿ ಎಳ್ಳು, ಹೆಸರು ಹಾಗೂ ಸಿರಿಧಾನ್ಯಗಳ ಬಿತ್ತನೆಗೆ ರೈತರು ಭೂಮಿ ಸಜ್ಜುಗೊಳಿಸುತ್ತಿದ್ದಾರೆ.

ಹತ್ತಿ, ಸೂರ್ಯಕಾಂತಿ, ಈರುಳ್ಳಿ ಬಿತ್ತನೆ ಕೂಡ ಮೇ ತಿಂಗಳಲ್ಲಿಯೇ ಶುರುವಾಗುತ್ತದೆ. ಮಳೆ ಬಿದ್ದಿರುವುದು ರೈತರಲ್ಲಿ ಹುಮ್ಮಸ್ಸು ಮೂಡಿಸಿದೆ. ಸಾಮಾನ್ಯವಾಗಿ ಈ ಬೆಳೆಗಳನ್ನು ರೋಹಿಣಿ ಮಳೆಯಲ್ಲಿ ಬಿತ್ತಲಾಗುತ್ತದೆ. ಕೃತಿಕಾ ಮಳೆ ನಿರೀಕ್ಷೆ ಮೀರಿ ಸುರಿದಿದ್ದರಿಂದ ಬಿತ್ತನೆಗೆ ಭೂಮಿ ಸಿದ್ಧಪಡಿಸಿಕೊಳ್ಳಲು ಅನುಕೂಲವಾಗಿದೆ. ನಿಗದಿತ ಅವಧಿಯಲ್ಲಿ ಬಿತ್ತನೆ ಮುಗಿದರೆ ಇಳುವರಿ ಚೆನ್ನಾಗಿ ಬರುತ್ತದೆ ಎಂಬುದು ರೈತರ ಬಲವಾದ ನಂಬಿಕೆ.

ಜಿಲ್ಲೆಯಲ್ಲಿ 1.10 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿವೆ. ತೆಂಗು ಹಾಗೂ ಅಡಿಕೆ ಹೆಚ್ಚಾಗಿದೆ. ಹಣ್ಣು, ತರಕಾರಿ, ಹೂ ಸೇರಿ ಇತರ ಬೆಳೆಗಳ ಮೇಲೂ ಕೋಟೆನಾಡ ರೈತರು ಅವಲಂಬಿತರಾಗಿದ್ದಾರೆ. ಬೇಸಿಗೆ ಬಿಸಿಲಿನಲ್ಲಿ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಶ್ರಮಿಸಿದರು. ಏರುತ್ತಿದ್ದ ತಾಪಮಾನ, ಬಿಸಿಗಾಳಿ ಬೆಳೆಯನ್ನು ಇನ್ನಷ್ಟು ಕುಗ್ಗಿಸಿತ್ತು. ಮಳೆ ಕಾಣಿಸಿಕೊಳ್ಳದೇ ಬೇಸಿಗೆ ಧಗೆ ಮುಂದುವರಿದಿದ್ದರೆ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಹಾನಿ ಆಗುತ್ತಿತ್ತು. ವರುಣನ ಕೃಪೆಯಿಂದಾಗಿ ರೈತರು ಸಂಕಷ್ಟದಿಂದ ಪಾರಾಗಿದ್ದಾರೆ.

ನಾಯಕನಹಟ್ಟಿ ಹೋಬಳಿಯಲ್ಲಿ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿರುವ ರೈತ
ಹಿರಿಯೂರು ತಾಲ್ಲೂಕಿನ ಛತ್ರಿಗುಡ್ಡದ ಮೇಲಿನಿಂದ ಕಾಣುವ ವಾಣಿವಿಲಾಸ ಜಲಾಶಯ. ಹೊಸ ನೀರು ಹರಿದುಬಂದಿದ್ದರಿಂದ ಜಲಾಶಯ ಮೈದುಂಬುತ್ತಿರುವಂತೆ ಕಾಣುತ್ತಿದೆ
ಹೊಳಲ್ಕೆರೆ ತಾಲ್ಲೂಕಿನ ತೆಂಗಿನ ತೋಟದಲ್ಲಿ ನಿಂತಿರುವ ನೀರು
ಮಳೆ ಉತ್ತಮವಾಗಿ ಸುರಿದಿರುವುದು ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಿದೆ. ಬರ ಪರಿಸ್ಥಿತಿ ಅಂತ್ಯವಾಗಿದೆ. ಬಿತ್ತನೆ ಬೀಜ ರಸಗೊಬ್ಬರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಬಿ.ಮಂಜುನಾಥ್‌, ಜಂಟಿ ನಿರ್ದೇಶಕ ಕೃಷಿ ಇಲಾಖೆ

ಹತ್ತಿ ಬಿತ್ತನೆಗೆ ಸಿದ್ಧತೆ

ನಾಯಕನಹಟ್ಟಿ: ಹದವಾಗಿ ಸುರಿದ ಮುಂಗಾರುಪೂರ್ವ ಮಳೆಯಿಂದ ಸಂತಸಗೊಂಡಿರುವ ರೈತರು ಲವಲವಿಕೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಸಕಾಲಕ್ಕೆ ಮಳೆಯಿಲ್ಲದೆ ರೈತರು ಬೆಳೆ ನಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿದ್ದರು. ಸುಡು ಬಿಸಿಲಿನ ತಾಪಕ್ಕೆ ಜನ– ಜಾನುವಾರುಗಳಿಗೆ ನೀರು ಮೇವಿನ ಕೊರತೆ ಎದುರಾಗಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆದರೆ ಕಳೆದ ಒಂದು ವಾರದಿಂದ ಹದ ಮಳೆ ಸುರಿದಿದ್ದರಿಂದ ಹಳ್ಳ ಕೊಳ್ಳಗಳು ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಹೊಸ ಹುರುಪಿನೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಬಹುತೇಕ ರೈತರು ಟ್ರ್ಯಾಕ್ಟರ್‌ ಮತ್ತು ಎತ್ತುಗಳಿಂದ ಮಾಗಿ ಬೇಸಾಯಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಕೃತ್ತಿಕಾ ಮಳೆ ಸುರಿದಿದ್ದರಿಂದ ಜಮೀನುಗಳಲ್ಲಿ ಹಸಿ ಇದೆ. ಈ ಮಳೆಗಳಿಗೆ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ರೈತರು ಭೂಮಿಯನ್ನು ಸಿದ್ಧಗೊಳಿಸುತ್ತಿದ್ದಾರೆ. ರೋಹಿಣಿ ಮೃಗಶಿರ ಮತ್ತು ಆರಿದ್ರಾ ಮಳೆಗೆ ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಾರೆ. ಶೇಂಗಾ ಹತ್ತಿ ಸೂರ್ಯಕಾಂತಿ ಬಿತ್ತನೆಗೆ ಸಿದ್ಧತೆ ನಡೆಸಿದರೆ ಎನ್.ಮಹದೇವಪುರ ಭಾಗದ ರೈತರು ತೊಗರಿಯನ್ನು ಬಿತ್ತುತ್ತಾರೆ. ವಾರದಿಂದ ಸುರಿದ ಮಳೆಗೆ ಅಂತರ್ಜಲ ಮಟ್ಟ ಹೆಚ್ಚಾಗುವ ವಿಶ್ವಾಸ ಮೂಡಿದೆ. ನೀರಾವರಿ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ರೈತರು ಮುಂದಾಗಿದ್ದಾರೆ. ಭರಣಿ ಮತ್ತು ಕೃತ್ತಿಕಾ ಮಳೆ ಸುರಿದಿದ್ದರಿಂದ ಈರುಳ್ಳಿ ಬೆಳೆಯಲು  ಸೂಕ್ತವಾಗಿದೆ. ಇದರಿಂದ ಉತ್ತಮವಾದ ಇಳುವರಿ ಸಿಗಲಿದೆ ಎಂಬುದು ಬೆಳೆಗಾರರ ಅಭಿಪ್ರಾಯ.

-ವಿ.ಧನಂಜಯ

ವಿ.ವಿ.ಸಾಗರಕ್ಕೆ ಮೇ ತಿಂಗಳಲ್ಲೇ ನೀರು

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲಿ ನೀರು ಹರಿದುಬಂದಿದೆ. ಅಚ್ಚುಕಟ್ಟು ಪ್ರದೇಶದ ರೈತರ ಆತಂಕ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಮೇ 20ರಿಂದ 23 ರವರೆಗೆ 1.65 ಅಡಿ ನೀರು ಜಲಾಶಯ ಸೇರಿದೆ. ಮೇ 19ರಂದು ಜಲಾಶಯದ ನೀರಿನ ಮಟ್ಟ 112 (ಪೂರ್ಣಮಟ್ಟ 130 ಅಡಿ) ಇದ್ದರೆ ಮೇ 23ರಂದು 113.65 ಅಡಿಗೆ ತಲುಪಿದೆ. ಹಿಂದಿನ ವರ್ಷ ಇದೇ ದಿನ 125 ಅಡಿ ನೀರಿನ ಸಂಗ್ರಹವಿತ್ತು. 2022 ಸೆ.2ರಂದು ಜಲಾಶಯ ಕೋಡಿ ಬಿದ್ದಾಗ 135 ಅಡಿ ನೀರಿತ್ತು. 5 ತಿಂಗಳು ಕೋಡಿಯ ನೀರು ವೇದಾವತಿ ನದಿ ಮೂಲಕ ಹರಿದು ಹೋಗಿತ್ತು. ಮಳೆಯ ಕೊರತೆ ಕಾರಣಕ್ಕೆ 2023ರಲ್ಲಿ ಜಲಾಶಯಕ್ಕೆ ಹೊಸ ನೀರು ಬರಲೇ ಇಲ್ಲ. ಕೇವಲ 20 ತಿಂಗಳಲ್ಲಿ ಜಲಾಶಯ 135 ಅಡಿಯಿಂದ 112 ಅಡಿಗೆ ಇಳಿದಿತ್ತು. ಇದೇ ಪ್ರಮಾಣದಲ್ಲಿ ನೀರು ಬಳಕೆ ಆಗುತ್ತ ಹೋದರೆ ಮತ್ತೊಮ್ಮೆ ಡೆಡ್ ಸ್ಟೋರೇಜ್ ತಲುಪುವ ಆತಂಕ ರೈತರನ್ನು ಕಾಡುತ್ತಿತ್ತು. ಸಾಮಾನ್ಯವಾಗಿ ಆಗಸ್ಟ್ ನಂತರ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿದು ಬರುವುದು ವಾಡಿಕೆ. ಆದರೆ ಅಚ್ಚರಿ ಎನ್ನುವಂತೆ ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲಿ 1.65 ಅಡಿ ನೀರು ಬಂದಿದೆ. ಪ್ರಸ್ತುತ ಬರುತ್ತಿರುವ ನೀರಿನಿಂದ 2 ಅಡಿಯವರೆಗೆ ಸಂಗ್ರಹವಾಗುವ ಸಾಧ್ಯತೆ ಇದೆ. ವೇದಾವತಿ ನದಿಯ ಮೂಲಕ ಎರಡು ತಿಂಗಳಿಂದ ಅಚ್ಚುಕಟ್ಟು ಪ್ರದೇಶ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಿಗೆ ನೀರು ಹರಿಸಲಾಗಿತ್ತು. ಇದರಿಂದ ನದಿ ಪಾತ್ರದ ರೈತರಿಗೆ ನೀರಿನ ತೊಂದರೆ ಆಗಿರಲಿಲ್ಲ. ಈಗ ಬಂದಿರುವ ಮಳೆಯಿಂದ ರೈತರು ಮತ್ತಷ್ಟು ಸಂತೃಪ್ತರಾಗಿದ್ದಾರೆ.

-ಸುವರ್ಣಾ ಬಸವರಾಜ್‌

ಟ್ಯಾಂಕರ್ ನೀರಿಗೆ ವಿದಾಯ

ಹೊಳಲ್ಕೆರೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಅಡಿಕೆ ಬೆಳೆಗಾರರು ಟ್ಯಾಂಕರ್‌ಗೆ ವಿದಾಯ ಹೇಳಿ ಹರ್ಷಗೊಂಡಿದ್ದಾರೆ. ತೋಟಗಳ ಕಳೆ ಮರಳಿದಂತಾಗಿದೆ. ಕಳೆದ ವರ್ಷ ಭೀಕರ ಬರ ಆವರಿಸಿದ್ದರಿಂದ ಬೇಸಿಗೆಯಲ್ಲಿ ಶೇ 60ರಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಇದರಿಂದ ಕಂಗಾಲಾದ ರೈತರು ಹೊಸ ಕೊಳವೆಬಾವಿ ಕೊರೆಸಿದ್ದರು. ಈ ಪೈಕಿ ಶೇ 80ರಷ್ಟು ಕೊಳವೆ ಬಾವಿಗಳಲ್ಲಿ ನೀರು ಬರದೆ ವಿಫಲವಾದವು. ಇದರಿಂದ ತೋಟ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಎಂಬಂತೆ ಟ್ಯಾಂಕರ್ ನೀರಿನ ಮೊರೆ ಹೋಗಿದ್ದರು. ಟ್ಯಾಂಕರ್ ನೀರು ತೋಟಗಳಿಗೆ ಸಾಲದೆ ಅಡಿಕೆ ಗಿಡಗಳು ಒಣಗುವ ಹಂತಕ್ಕೆ ಬಂದಿದ್ದವು. ಜೀವನಕ್ಕೆ  ಆಸರೆಯಾಗಿದ್ದ ತೋಟ ಉಳಿಸಿಕೊಳ್ಳಲೇಬೇಕು ಎಂಬ ಛಲದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿತ್ತು. ಇನ್ನು 15 ದಿನ ಇದೇ ಪರಿಸ್ಥಿತಿ ಮುಂದುವರೆದಿದ್ದರೆ ಅರ್ಧಕ್ಕರ್ಧ ಅಡಿಕೆ ತೋಟಗಳು ಒಣಗಿ ಹೋಗುತ್ತಿದ್ದವು. ಈಗ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಚೆಕ್ ಡ್ಯಾಂ ಕೆರೆ ಕಟ್ಟೆಗಳಿಗೂ ಸ್ವಲ್ಪ ನೀರು ಬಂದಿದೆ. ಅಂತರ್ಜಲವೂ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಈಗ ಸುರಿದ ಮಳೆಯಿಂದ ಒಣಗುವ ಅಪಾಯದಲ್ಲಿದ್ದ ತೆಂಗಿನ ಮರಗಳೂ ಚೇತರಿಸಿಕೊಳ್ಳುತ್ತಿವೆ.

-ಸಾಂತೇನಹಳ್ಳಿ ಸಂದೇಶಗೌಡ

ಕೆರೆ ಕಟ್ಟೆಗಳಿಗೆ ಜೀವಕಳೆ

ಹೊಸದುರ್ಗ: ತಾಲ್ಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದು ಬತ್ತಿ ಹೋಗಿದ್ದ ಕೆರೆ ಕಟ್ಟೆಗಳಿಗೆ ಜೀವಕಳೆ ಬಂದಿದೆ. ಜಿಲ್ಲೆಯ ಜೀವನಾಡಿ ವೇದಾವತಿ ನದಿ ಹರಿಯತೊಡಗಿದ್ದು ರೈತರಲ್ಲಿ ಆನಂದ ಮೂಡಿಸಿದೆ. ಮೇ 18ರಂದು 12 ಸೆಂ.ಮೀ ಮಳೆ ಸುರಿದಿದೆ. ಈ ಮಳೆಯಿಂದಾಗಿ ವೇದಾವತಿ ಮೈದುಂಬಿ ಹರಿಯಿತು. ಪಟ್ಟಣದ ಜನರಿಗೆ ನಿತ್ಯ ನೀರುಣಿಸುವ ಕೆಲ್ಲೋಡು ಬ್ಯಾರೇಜ್‌ ಭರ್ತಿಯಾಗಿದೆ. ತಾಲ್ಲೂಕಿನ ಹಲವು ಹಳ್ಳಿಗಳ ಕೆರೆಗಳಿಗೆ ನೀರು ಹರಿದುಬಂದಿದೆ. ಬತ್ತಿದ್ದ ಕೊಳವೆಬಾವಿಗಳು ಚಿಮ್ಮುತ್ತಿವೆ. ಪ್ರಾಣಿ ಪಕ್ಷಿಗಳು ಕೆರೆಯಲ್ಲಿ ನಿತ್ಯ ಆಟವಾಡುತ್ತಿವೆ. ಮೀನು ಹಿಡಿಯಲು ಜನರು ಕೆರೆಗಳತ್ತ ಧಾವಿಸುತ್ತಿದ್ದಾರೆ. ಸತತ ಮೂರು ದಿನ ಮಳೆ ಸುರಿದ ಪರಿಣಾಮ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಜಂತಿಕೊಳಲು ಸೇರಿ ಹಲವು ಕೆರೆಗಳು ಕೋಡಿ ಬೀಳುವ ಹಂತದಲ್ಲಿವೆ. ಕೆರೆ ಚೆಕ್‌ಡ್ಯಾಂ ಸೇರಿ ಜಲಮೂಲಗಳಿಗೆ ನೀರು ಹರಿದುಬಂದಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.

-ಶ್ವೇತಾ ಜಿ

ಭೂಮಿ ಹದ ಮಾಡಿಕೊಳ್ಳುವ ರೈತ ‌

ಮೊಳಕಾಲ್ಮುರು: ಈಚೆಗೆ ಸುರಿದ ಮಳೆಯಿಂದಾಗಿ ಖುಷಿಯಲ್ಲಿರುವ ತಾಲ್ಲೂಕಿನ ರೈತರು ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ತಾಲ್ಲೂಕಿನ ಹಲವೆಡೆ ಹತ್ತಿ ರಾಗಿ ತೊಗರಿ ಹೆಸರು ಬಿತ್ತನೆ ಮಾಡಲಾಗುತ್ತಿದೆ. ಕಸಬಾ ಹೋಬಳಿಯ ವಿವಿಧೆಡೆ ಸಾಧಾರಣ ಮಳೆಯಾಗಿದ್ದು ಹೊಲ ಉಳುಮೆ ಮಾಡಿಸಲಾಗುತ್ತಿದೆ. ಕೋಳಿ ಗೊಬ್ಬರ ಸಗಣಿ ಗೊಬ್ಬರವನ್ನು ಹೊಲಕ್ಕೆ ಸಾಗಿಸುವ ಕಾರ್ಯ ಚುರುಕುಗೊಂಡಿದೆ. ಹತ್ತಿಗೆ ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ದೇವಸಮುದ್ರ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಕಸಬಾ ಹೋಬಳಿಯಲ್ಲಿ ತೊಗರಿ ಹೆಸರು ಸಜ್ಜೆ ಬಿತ್ತನೆಯಾಗಲಿದೆ. ಶೇಂಗಾಕ್ಕೆ ಪರ್ಯಾಯವಾಗಿ ಹೊಸ ಬೆಳೆ ಬೆಳೆಯಲು ರೈತರು ಮುಂದಾಗುತ್ತಿದ್ದಾರೆ. ಈಗ ಮಳೆ ಬಂದಿರುವುದು ಅವರ ಉತ್ಸಾಹ ಹೆಚ್ಚಿಸಿದೆ.

-ಕೊಂಡ್ಲಹಳ್ಳಿ ಜಯಪ್ರಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.