ಹಿರಿಯೂರು: ವಾಣಿವಿಲಾಸ ಜಲಾಶಯ ಭರ್ತಿ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದ್ದು ಒಂದೆಡೆಯಾದರೆ, ಕೋಡಿಯ ನೀರು ಹರಿಯುವ ಜಾಗದಲ್ಲಿ ಸೇತುವೆ ನಿರ್ಮಿಸದ ಕಾರಣ ಹೊಸದುರ್ಗ– ಹಿರಿಯೂರು ನಡುವಿನ ಸಂಪರ್ಕ ಸ್ಥಘಗಿತಗೊಳ್ಳುವ ಭೀತಿಯೂ ಸಾರ್ವಜನಿಕರನ್ನು ಕಾಡುತ್ತಿದೆ.
2022ರ ಸೆ. 2ರಂದು ವಾಣಿವಿಲಾಸ ಜಲಾಶಯ 2ನೇ ಬಾರಿಗೆ ಕೋಡಿ ಬಿದ್ದ ಸಂದರ್ಭದಲ್ಲಿ ಹೊಸದುರ್ಗ– ಹಿರಿಯೂರು ನಗರಗಳನ್ನು ಸಂಪರ್ಕಿಸುವ ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ಎರಡು ನಗರಗಳ ನಡುವೆ ಸಂಚರಿಸುತ್ತಿದ್ದ ಬಸ್ ವಾಣಿವಿಲಾಸಪುರಕ್ಕೆ ಬಂದು, ಮರಳಿ ಅತ್ಯಂತ ಕಿರಿದಾದ ಕಕ್ಕಯ್ಯನಹಟ್ಟಿ ರಸ್ತೆ ಮಾರ್ಗವಾಗಿ 8–10 ಕಿ.ಮೀ ಸುತ್ತಿಕೊಂಡು ಹೊಸದುರ್ಗ ಬೈಪಾಸ್ ರಸ್ತೆಗೆ ಹೋಗಬೇಕಿತ್ತು.
ಹೊಸದುರ್ಗದ ಕಡೆಯಿಂದ ವಾಣಿವಿಲಾಸ ಜಲಾಶಯ ನೋಡಲು ಬರುತ್ತಿದ್ದವರು ಹಾರನಕಣಿವೆ ರಂಗನಾಥಸ್ವಾಮಿ ದೇವರ ದರ್ಶನ ಮಾಡಿಕೊಂಡು ಕೋಡಿ ರಸ್ತೆಯಲ್ಲಿ ಅಣೆಕಟ್ಟೆಯತ್ತ ಬರುತ್ತಿದ್ದರು. ಪ್ರಸ್ತುತ ಜಲಾಶಯದ ನೀರಿನ ಮಟ್ಟ 123 ಅಡಿಗೆ ಸಮೀಪಿಸಿದ್ದು, ಇನ್ನು 7 ಅಡಿಯಷ್ಟು ನೀರು ಬಂದರೆ ಜಲಾಶಯ ಕೋಡಿ ಬೀಳಲಿದೆ. ಆಗ ಪ್ರವಾಸಿಗರು ಸುತ್ತಿಕೊಂಡು ಜಲಾಶಯಕ್ಕೆ ಬರಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ಕೋಡಿ ಭಾಗದಲ್ಲಿ ಅಂದಾಜು ಅರ್ಧ ಪರ್ಲಾಂಗು ರಸ್ತೆ ಕಿತ್ತು ಹೋಗಿತ್ತು. ಬಸ್‌ಗಳು ಒಂದೂವರೆ ತಿಂಗಳು ಕಕ್ಕಯ್ಯನಹಟ್ಟಿ ಮಾರ್ಗವಾಗಿ ಸಂಚರಿಸಿದ್ದವು. ವಾಹನ ಸಂಚಾರ ಹೆಚ್ಚಿದ್ದರಿಂದ ಕಕ್ಕಯ್ಯನಹಟ್ಟಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಆರೇಳು ಹಳ್ಳಿಗಳ ಜನರ ಪ್ರತಿಭಟನೆಗೆ ಮಣಿದ ಅಂದಿನ ಆಡಳಿತ 900 ಮೀಟರ್ ಹೊರತುಪಡಿಸಿ ಉಳಿದ ರಸ್ತೆಯನ್ನು ಅಭಿವೃದ್ಧಿ ಪಡಿಸಿತ್ತು.
‘ಅಭಿವೃದ್ಧಿ ಮಾಡದೇ ಇರುವ 900 ಮೀಟರ್ ಜಾಗಕ್ಕೆ ಡಾಂಬರೀಕರಣ ಮಾಡುವಂತೆ ಒಂದೂವರೆ ವರ್ಷದಿಂದ ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದು, ರಸ್ತೆ ಮತ್ತಷ್ಟು ಹದಗೆಟ್ಟಿದೆ. ಜಲಾಶಯ ಕೋಡಿ ಬೀಳುವುದು ಸಂತಸದ ಸಂಗತಿ. ಆದರೆ, ಯಾವುದೇ ಕಾರಣಕ್ಕೂ ಕಕ್ಕಯ್ಯನಹಟ್ಟಿ ಮಾರ್ಗವನ್ನು ಪರ್ಯಾಯ ರಸ್ತೆಯನ್ನಾಗಿ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ಒಂದು ಬಸ್ ಮಾತ್ರ ಸಂಚರಿಸುವಷ್ಟು ಕಿರಿದಾದ ರಸ್ತೆ ನಮ್ಮದು. ಕೆಲವೊಮ್ಮೆ ಎರಡು ದೊಡ್ಡ ವಾಹನಗಳು ಎದುರಾದರೆ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ಆಗ ತುರ್ತಾಗಿ ನಮ್ಮ ಹೊಲಗಳಿಗೆ ಹೋಗಲೂ ಕೂಡ ಜಾಗ ಇರುವುದಿಲ್ಲ. ಬೇಕಿದ್ದರೆ ಭರಮಗಿರಿ ಗ್ರಾಮದ ಸಮೀಪ ಇರುವ ಬೈಪಾಸ್ ಮೂಲಕ ಸಂಚರಿಸಲಿ’ ಎಂದು ಕಕ್ಕಯನಹಟ್ಟಿ ಜಯಣ್ಣ ತಿಳಿಸಿದರು.
ತಾತ್ಕಾಲಿಕ ಸೇತುವೆ:
2023ರ ಜನವರಿಯಲ್ಲಿ ವಾಣಿವಿಲಾಸಪುರದ ಗ್ರಾಮಸ್ಥರು, ಖಾಸಗಿ ಬಸ್ ಮಾಲೀಕರ ಸಂಘದವರು ಸುಮಾರು ₹ 80,000 ಖರ್ಚು ಮಾಡಿ, 8 ಬೃಹತ್ ಗಾತ್ರದ ಸಿಮೆಂಟ್ ಪೈಪ್‌ಗಳನ್ನು ಒಂದಕ್ಕೊಂದು ಹೊಂದಿಸಿ ಕಿತ್ತು ಹೋಗಿದ್ದ ಕೋಡಿಯ ಜಾಗದಲ್ಲಿ ಜೋಡಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದರು.
‘ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ರಸ್ತೆಯ ಎರಡೂ ಕಡೆ ಕೋಡಿಯ ನೀರಿನಲ್ಲಿ ಕೊಚ್ಚಿ ಹೋಗಿ ಗುಂಡಿ ಬಿದ್ದಿದ್ದ ಜಾಗಕ್ಕೆ ಮಣ್ಣುತುಂಬಿ ವಾಹನಗಳು ಓಡಾಡಲು ಅನುವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು. ಆದರೆ, ಜಲಾಶಯ ಮತ್ತೊಮ್ಮೆ ಕೋಡಿಬಿದ್ದರೆ, ಕೋಡಿಯಲ್ಲಿ ಹರಿದು ಬರುವ ನೀರಿನ ರಭಸವನ್ನು ಕೇವಲ ಎರಡು ಪೈಪ್‌ಗಳು ತಾಳಿಕೊಳ್ಳುವುದು ಅಸಾಧ್ಯ. ಹೀಗಾಗಿ ಮತ್ತೆ ರಸ್ತೆ ಕಿತ್ತು ಹೋಗುವುದು ಖಚಿತ. ಹೀಗಾಗಿ ಕೋಡಿಯ ಭಾಗದಲ್ಲಿ ಸೇತುವೆ ನಿರ್ಮಿಸಿದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ’ ಎನ್ನುತ್ತಾರೆ ವಿ.ವಿ. ಪುರದ ಎಸ್.ಎಸ್.ರಂಗಪ್ಪ.
ವಾಣಿವಿಲಾಸ ಜಲಾಶಯದ ಕೋಡಿ ಹರಿಯುವ ಜಾಗದಲ್ಲಿ ಸೇತುವೆ ನಿರ್ಮಿಸಲು ಆರು ತಿಂಗಳ ಹಿಂದೆ ₹ 13.40 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಯೋಜನೆ ಅನುಮೋದನೆ ಆಗಿ ಬಂದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.ಮಂಜುನಾಥ್, ಎಇಇ, ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.