ADVERTISEMENT

ಆಗಸದ ಹೂಮಳೆಗೆ ಭಕ್ತರ ಪುಳಕ

ಮೆರವಣಿಗೆಗೆ ರಂಗುತಂದ ಕಲಾಮೇಳ, ಸ್ತಬ್ಧಚಿತ್ರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 13:31 IST
Last Updated 19 ಅಕ್ಟೋಬರ್ 2018, 13:31 IST
ಸಾರೋಟಿನಲ್ಲಿ ಸಾಗಿದ ಮುರುಘಾ ಶರಣರು
ಸಾರೋಟಿನಲ್ಲಿ ಸಾಗಿದ ಮುರುಘಾ ಶರಣರು   

ಚಿತ್ರದುರ್ಗ: ನೆತ್ತಿಸುಡುವ ಬಿಸಿಲನ್ನೂ ಲೆಕ್ಕಿಸದೇ ಕಾಯುತ್ತಿದ್ದ ಭಕ್ತರ ಕುತೂಹಲ ತಣಿಸುವ ಗಳಿಗೆ ಎದುರಾಯಿತು. ಶಿವಮೂರ್ತಿ ಮುರುಘಾ ಶರಣರು ಆಸೀನರಾಗಿದ್ದ ಸಾರೋಟು ಗಾಂಧಿ ವೃತ್ತ ಪ್ರವೇಶಿಸಿತು. ಆಗಸದಲ್ಲಿ ಸದ್ದು ಮಾಡುತ್ತ ಬಂದ ಹೆಲಿಕಾಪ್ಟರ್‌ನತ್ತ ಎಲ್ಲರ ದೃಷ್ಟಿ ನೆಟ್ಟಿತು. ಮಳೆಯಂತೆ ಬಾನಂಗಳದಿಂದ ಸುರಿದ ಪುಷ್ಪವೃಷ್ಟಿ ಸಾರೋಟಿನ ಮೇಲೆ ಬೀಳುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಘಾರ ಮೊಳಗಿತು.

ಶರಣ ಸಂಸ್ಕೃತಿ ಉತ್ಸವವು ವಿಜಯದಶಮಿಯ ದಿನ ಅಭೂತಪೂರ್ವ ಗಳಿಗೆಗೆ ಸಾಕ್ಷಿಯಾಯಿತು. ಜಾನಪದ ಕಲಾಮೇಳದೊಂದಿಗೆ ಮೇಲ್ದುರ್ಗದ ಕೋಟೆಗೆ ಹೊರಟಿದ್ದ ಶರಣರ ಮೆರವಣಿಗೆ ಮೇಲೆ ಆಗಸದಿಂದ ಹೂಮಳೆ ಸುರಿದಿದ್ದನ್ನು ಕೋಟೆ ನಾಡಿನ ಜನತೆ ಕಣ್ತುಂಬಿಕೊಂಡರು. ಜಾನಪದ ಕಲಾಮೇಳ, ಸ್ತಬ್ಧಚಿತ್ರಗಳನ್ನು ಕಂಡು ಪುಳಕಗೊಂಡರು.

ಶರಣ ಸಂಸ್ಕೃತಿ ಉತ್ಸವದ ಕೇಂದ್ರಬಿಂದುವಾಗಿರುವ ಜಾನಪದ ಕಲಾಮೇಳಕ್ಕೆ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಸಾರೋಟು ಏರಿದ ಶರಣರಿಗೆ ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾಥ್‌ ನೀಡಿದರು.

ADVERTISEMENT

ಮುರುಘಾ ಮಠದ ಆವರಣದಿಂದ ಹೊರಟ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ–4, ಬಿ.ಡಿ.ರಸ್ತೆ ಮೂಲಕ ನಗರ ಪ್ರವೇಶಿಸಿತು. ರಾಜಬೀದಿಗಳಾದ ಸಂತೆಪೇಟೆ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಕೋಟೆಯ ಮೇಲುದುರ್ಗಕ್ಕೆ ಸಾಗಿತು. ಕೋಟೆಯೊಳಗಿನ ಮುರುಘಾ ಮಠದ ಆವರಣದ ಬಿಚ್ಚುಗತ್ತಿ ಭರಮಣ್ಣ ನಾಯಕ ವೇದಿಕೆಯಲ್ಲಿ ರಾಜವಂಶಸ್ಥರಿಂದ ಶರಣರಿಗೆ ಭಕ್ತಿ ಸಮರ್ಪಣೆ ನಡೆಯಿತು.

ಜಾನಪದ ಕಲಾಮೇಳವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಮಾರ್ಗದುದ್ದಕ್ಕೂ ಜಮಾಯಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಹೆಲಿಕಾಪ್ಟರ್‌ನಿಂದ ಹೂ ಸುರಿಯುವ ದೃಶ್ಯವನ್ನು ನೋಡಲು ಗಾಂಧಿ ವೃತ್ತದ ಬಳಿ ಹೆಚ್ಚು ಜನ ಸೇರಿದ್ದರು.

ಆಗಸದಲ್ಲಿ ಕಾಣಿಸಿಕೊಂಡ ಹೆಲಿಕಾಪ್ಟರ್‌ ಮೆರವಣಿಗೆ ಸಮೀಪದಲ್ಲಿ ಹಾರತೊಡಗಿತು. ಚಲಿಸದೇ ಆಗಸದಲ್ಲಿ ನಿಂತಿದ್ದ ಹೆಲಿಕಾಪ್ಟರ್‌ನಿಂದ ಏಕಾಏಕಿ ಹೂಮಳೆ ಸುರಿಯಲಾರಂಭಿಸಿತು. ಐದು ನಿಮಿಷಕ್ಕೂ ಹೆಚ್ಚು ಹೊತ್ತು ಒಂದೆಡೆ ನಿಂತು ಪುಷ್ಪಗಳನ್ನು ಸುರಿಯುತ್ತಿದ್ದದು ರಾಜ ವೈಭವವನ್ನು ನೆನಪಿಸಿತು. ಬಾನಂಗಳದಿಂದ ಎರಡು ಬಾರಿ ಸುರಿದ ಹೂಮಳೆಗೆ ಸಾವಿರಾರು ಜನರು ಸಾಕ್ಷಿಯಾದರು.

ಕಲಾಮೇಳದ ರಂಗು:

ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಕಲಾತಂಡಗಳು ಜಾನಪದ ಕಲಾಮೇಳದ ಮೆರವಣಿಗೆಗೆ ರಂಗು ತುಂಬಿದವು. ಸುಮಾರು ಒಂದು ಕಿ.ಮೀ ಉದ್ದದವರೆಗೆ ಇದ್ದ ಕಲಾತಂಡಗಳು, ಬಿಸಿಲಿನ ಧಗೆಯಲ್ಲಿಯೂ ಸಾರ್ವಜನಿಕರ ಕಣ್ಮನ ತಣಿಸಿದವು.

ತಲೆಗೆ ಬಿಳಿ ವಸ್ತ್ರ ಸುತ್ತಿಕೊಂಡು, ಹುಲಿ ಚರ್ಮದ ಬಟ್ಟೆಯನ್ನು ತೊಟ್ಟು ಕಚ್ಚೆ ಕಟ್ಟಿಕೊಂಡಿದ್ದ ಬೇಡರ ಪಡೆ ವಿಶೇಷವಾಗಿತ್ತು. ಗತಕಾಲದ ಆಯುಧಗಳನ್ನು ಹಿಡಿದು ಕುಣಿಯುತ್ತಿದ್ದ ಕಲಾವಿದರನ್ನು ಪ್ರೇಕ್ಷಕರು ಕಣ್ಣು ಮಿಟುಕಿಸದೇ ನೋಡುತ್ತಿದ್ದರು. ಇವರ ಮುಂದೆ ಸಾಗುತ್ತಿದ್ದ ಕರಡಿ ಮಜಲು ತಂಡ ವಿಶಿಷ್ಟ ಬಗೆಯ ನಾದ ಹೊರಹೊಮ್ಮಿಸುತ್ತಿತ್ತು.

ನರಗುಂದದ ಜಗ್ಗಲಗೆ ಮೇಳ ಭೂಮಿ ನಡುಗಿಸುವ ಸದ್ದು ಮಾಡುತ್ತಾ ಉರುಳುತ್ತಿತ್ತು. ಬೆಂಕಿ ಕರಗ, ಹಗಲು ವೇಷ, ನಾಸಿಕ್ ಡೋಲು, ಪಟದಕುಣಿತ, ಪೂಜಾಕುಣಿತ ಗಮನ ಸೆಳೆದವು. ಗಾರುಡಿ ಗೊಂಬೆಗಳನ್ನು ನೋಡಿ ಮಕ್ಕಳು ಬೆರಗಾದರು. ಡೊಳ್ಳು ಕುಣಿತ, ಕೋಲಾಟ, ಮಹಿಳೆಯರ ಚೆಂಡೆ ಮದ್ದಳೆ ಮನೋರಂಜನೆ ನೀಡಿದವು.

ಸ್ತಬ್ಧಚಿತ್ರದ ಜಾಗೃತಿ:

ಮೆರವಣಿಗೆಗೆ ರೂಪಿಸಿದ ಹಲವು ಸ್ತಬ್ಧಚಿತ್ರಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದವು. ಪರ್ಯಾಯ ಇಂಧನ, ಸ್ವಚ್ಛತೆ, ಮಕ್ಕಳ ಹಕ್ಕು ರಕ್ಷಣೆ, ಆರೋಗ್ಯ ಕಾಳಜಿಯ ಬಗೆಗೆ ಮಾಹಿತಿ ನೀಡಿದವು.

ಸೌರಶಕ್ತಿಯ ಕುರಿತು ಎಸ್‌ಜೆಎಂ ಎಂಜಿನಿಯರಿಂಗ್‌ ಕಾಲೇಜು ಸಿದ್ಧಪಡಿಸಿದ ಸ್ತಬ್ಧಚಿತ್ರ ವಿಭಿನ್ನವಾಗಿತ್ತು. ‘ಸೌರಶಕ್ತಿ ಬಳಸಿ ಪರಿಸರ ಉಳಿಸಿ’ ಎಂಬ ಘೋಷಣೆಯೊಂದಿಗೆ ಸಾರ್ವಜನಿಕರನ್ನು ಆಕರ್ಷಿಸಿತು. ಸೆಲ್ಕೋ ಸೋಲಾರ್‌ ಕಂಪನಿಯ ಸಹಯೋಗದೊಂದಿಗೆ ಎಸ್‌ಜೆಎಂ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿದ್ದ ಪರ್ಯಾಯ ಇಂಧನದ ಸ್ತಬ್ಧಚಿತ್ರವೂ ಮಾಹಿತಿಪೂರ್ಣವಾಗಿತ್ತು.

ಗುಡಿಕೈಗಾರಿಕೆಗಳ ಮಹತ್ವದ ಕುರಿತು ಐಟಿಐ, ಬಾಯಿ ಕ್ಯಾನ್ಸರ್‌ ಬಗ್ಗೆ ದಂತ ವೈದ್ಯಕೀಯ ಮಹಾವಿದ್ಯಾಲಯ, ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ಕಲಾ ಮತ್ತು ವಾಣಿಜ್ಯ ಕಾಲೇಜು, ಸಾಂಕ್ರಾಮಿಕ ರೋಗಗಳ ಬಗ್ಗೆ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು ಸ್ತಬ್ಧಚಿತ್ರಗಳ ಮೂಲಕ ಗಮನ ಸೆಳೆದರು. ಕುಂಬಾರಿಕೆ, ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹ ಪದ್ಧತಿಯ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮಜ್ಜಿಗೆ ಪಾನಕ ವಿತರಣೆ:

ಮೆರವಣಿಗೆಯಲ್ಲಿ ಸಾಗುತ್ತಿದ್ದ ಕಲಾವಿದರು ಹಾಗೂ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರಿಗೆ ಅನೇಕರು ಮಜ್ಜಿಗೆ, ಪಾನಕ, ನೀರು ವಿತರಿಸಿ ಧನ್ಯತೆ ಮೆರೆದರು. ಬಿ.ಡಿ ರಸ್ತೆಯ ದಂತ ವೈದ್ಯಕೀಯ ಕಾಲೇಜು, ಗಾಂಧಿ ವೃತ್ತ, ಬಸ್‌ ನಿಲ್ದಾಣ ಸೇರಿದಂತೆ ಮಾರ್ಗದ ಉದ್ದಕ್ಕೂ ಹಲವರು ಸೇವೆ ಒದಗಿಸಿದರು. ಕೆಲವರು ಊಟ, ಉಪಹಾರ ನೀಡಿ ಖುಷಿಪಟ್ಟರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಉತ್ಸವದ ಕಾರ್ಯಾದ್ಯಕ್ಷ ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಜಯಕುಮಾರ್, ಹನುಮಲಿ ಷಣ್ಮುಖಪ್ಪ, ತಾಜ್‌ಪೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.