ಚಿತ್ರದುರ್ಗ: ಭಾರತದ ಆರ್ಥಿಕ ವ್ಯವಸ್ಥೆ ಸರಿಯಾದ ಪಥದಲ್ಲಿ ಸಾಗುತ್ತಿದೆ. 2025ರ ಹೊತ್ತಿಗೆ ಅತಿದೊಡ್ಡ ಆರ್ಥಿಕತೆ ಹೊಂದಿದ ವಿಶ್ವದ ಮೂರು ದೇಶಗಳ ಸಾಲಿಗೆ ಭಾರತವೂ ಸೇರಲಿದೆ ಎಂದು ಗಯಾನಾದ ಭಾರತೀಯ ಹೈಕಮಿಷನರ್ ಡಾ.ಕೆ.ಜೆ.ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾಲೇಜಿನಲ್ಲಿ ಓದಿದ ದಿನಗಳನ್ನು ಮೆಲುಕು ಹಾಕುತ್ತಲೇ ದೇಶದ ಅಭಿವೃದ್ಧಿ, ವಿದೇಶಿ ವ್ಯವಹಾರದ ಬಗ್ಗೆ ಮಾತನಾಡಿದರು.
‘ಭಾರತದ ಕೀರ್ತಿ ವಿಶ್ವದಾದ್ಯಂತ ಹಬ್ಬಿದೆ. ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಐದು ರಾಷ್ಟ್ರಗಳಲ್ಲಿ ಭಾರತ ಕೂಡ ಸೇರಿದೆ. ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ವಿದೇಶಿಗರನ್ನು ಆಕರ್ಷಿಸಿದೆ. ಭಾರತೀಯರ ವಿದ್ವತ್ತಿಗೆ ಇಡೀ ಜಗತ್ತು ತಲೆದೂಗುತ್ತಿದೆ. ವಿದೇಶಿ ಬಂಡಾವಳ ಹೂಡಿಕೆಯೂ ಹೆಚ್ಚಾಗುತ್ತಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.
‘ಅಮೆರಿಕದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಲ್ಲಿ ಭಾರತೀಯ ಉದ್ಯಮಿಗಳ ಸಂಖ್ಯೆ ಶೇ 17ರಷ್ಟಿದೆ. ದೇಶದ ಆರ್ಥಿಕ ವ್ಯವಸ್ಥೆ ಬೆಳೆಯುತ್ತಿರುವ ರೀತಿಯನ್ನು ವಿಶ್ವ ಬೆರಗು ಕಣ್ಣಿನಿಂದ ನೋಡುತ್ತಿದೆ. ಯುದ್ಧ ವಿಮಾನ ತಯಾರಿಸಿಕೊಂಡು ಸಂಪೂರ್ಣ ಸ್ವಾವಲಂಬಿಗಳಾಗುತ್ತಿದ್ದೇವೆ’ ಎಂದರು.
‘1996ರಲ್ಲಿ ಪಾಸ್‌ಪೋರ್ಟ್ ಪಡೆಯಲು ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳಿದ್ದೆ. ನಸುಕಿನ 4 ಗಂಟೆಯಿಂದ ಕಾದು ಕುಳಿತು ಪಾಸ್‌ಪೋರ್ಟ್ ಪಡೆದಿದ್ದೆ. ಈಗ ಈ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ಜನಸ್ನೇಹಿಯಾಗಿ ರೂಪಿಸಲಾಗಿದೆ. ವಿಳಂಬ, ಅಕ್ರಮಕ್ಕೆ ಆಸ್ಪದ ಇಲ್ಲವಾಗಿದೆ. ಕಾಲಮಿತಿಯಲ್ಲಿ ಪಾಸ್‌ಪೋರ್ಟ್ ಪಡೆಯಬಹುದಾಗಿದೆ. ‘ಉಡಾನ್’ ಯೋಜನೆಯಡಿ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.
‘ರಾಷ್ಟ್ರದ ತ್ರಿವರ್ಣ ಧ್ವಜವನ್ನು ವಿದೇಶಿ ನೆಲದಲ್ಲಿ ಎತ್ತಿಹಿಡಿಯುವ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಸಣ್ಣ ನಗರದಲ್ಲಿ ಶಿಕ್ಷಣ ಪಡೆದು ವಿದೇಶದಲ್ಲಿ ಭಾರತದ ಪ್ರತಿನಿಧಿಯಾಗಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಸೇವೆಗೆ ಸೇರಿರುವುದರ ಬಗ್ಗೆ ತೃಪ್ತಿಯಿದೆ’ ಎಂದು ಸಂತಸ ಹಂಚಿಕೊಂಡರು.
‘ವಿದ್ಯಾರ್ಥಿ ದಿಸೆಯಲ್ಲಿದ್ದಾಗ ಎಂಜಿನಿಯರ್ ಅಥವಾ ವೈದ್ಯ ಆಗಬೇಕು ಎಂಬ ತುಡಿತ ಇತ್ತು. ಪ್ರತಿಯೊಬ್ಬರು ಈ ಕನಸಿನ ಬೆನ್ನೇರಿ ಹೊರಟಿದ್ದೆವು. ಸ್ಪರ್ಧಾತ್ಮಕ ಯುಗ ಹಲವು ಅವಕಾಶಗಳನ್ನು ತೆರೆದಿಟ್ಟಿದೆ. ವಿಜ್ಞಾನಿ, ಸಂಶೋಧನೆ ಸೇರಿ ಹಲವು ಕ್ಷೇತ್ರಗಳಿವೆ. ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು’ ಎಂದರು.
‘ವಿದ್ಯಾರ್ಥಿ ದಿಸೆಯಲ್ಲಿ ಮನೆಪಾಠಕ್ಕೆ ಹೋಗುತ್ತಿದ್ದೆ. ಆದರೆ, ತರಗತಿಗಳನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಜ್ಞಾನ ವೃದ್ಧಿಗೆ ಈಗಿನಂತೆ ಕಂಪ್ಯೂಟರ್, ಮೊಬೈಲ್ ಇರಲಿಲ್ಲ. ಕೇಂದ್ರ ಗ್ರಂಥಾಲಯದಲ್ಲಿ ಕುಳಿತು ವ್ಯಾಸಂಗ ಮಾಡುತ್ತಿದ್ದೆ. ಸ್ನೇಹಿತರೊಂದಿಗೆ ಸ್ಪರ್ಧೆ ಮಾಡುವ ಬದಲಿಗೆ ಅಂಕಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದೆ’ ಎಂದು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಹೊನ್ನುರೆಡ್ಡಿ, ಪ್ರಾಂಶುಪಾಲ ಪ್ರೊ.ಬಸವರಾಜ ಇದ್ದರು. ವಿದ್ಯಾವಿಕಾಸ, ಚಿನ್ಮೂಲಾದ್ರಿ ಪ್ರೌಢಾಶಾಲೆ ವಿದ್ಯಾರ್ಥಿಗಳೊಂದಿಗೆ ಹೈಕಮಿಷನರ್ ಚರ್ಚೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.