ADVERTISEMENT

ಆರೋಪ ಮಾಡುವುದನ್ನು ಕೈಬಿಟ್ಟರೆ ಮಾತ್ರ ಪರಿಶಿಷ್ಟರು ಬೆಳೆಯಲು ಸಾಧ್ಯ

ಸಂಸದ ಗೋವಿಂದ ಕಾರಜೋಳ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:45 IST
Last Updated 19 ಜೂನ್ 2024, 14:45 IST
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿರುವ ಕೋಡಿಹಳ್ಳಿ ಮಾದಿಗ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಮನೆಗೆ ಮಂಗಳವಾರ ಸಂಜೆ ಸಂಸದ ಗೋವಿಂದ ಕಾರಜೋಳ ಭೇಟಿ ನೀಡಿ ಆಶೀರ್ವಾದ ಪಡೆದರು
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿರುವ ಕೋಡಿಹಳ್ಳಿ ಮಾದಿಗ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಮನೆಗೆ ಮಂಗಳವಾರ ಸಂಜೆ ಸಂಸದ ಗೋವಿಂದ ಕಾರಜೋಳ ಭೇಟಿ ನೀಡಿ ಆಶೀರ್ವಾದ ಪಡೆದರು   

ಹಿರಿಯೂರು: ಜಾತಿ ನಿಂದನೆ, ದಲಿತ ದೌರ್ಜನ್ಯಗಳಂತಹ ಆರೋಪಗಳನ್ನು ಕೈಬಿಟ್ಟರೆ ಮಾತ್ರ ಪರಿಶಿಷ್ಟರು ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ತಾಲ್ಲೂಕಿನ ಆದಿವಾಲ ಗ್ರಾಮದ ಕೋಡಿಹಳ್ಳಿ ಮಾದಿಗ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಮನೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ತಳ ಸಮುದಾಯಗಳಿಗೆ ಅನ್ಯಾಯವಾದಾಗ ಕಾನೂನು ಪ್ರಕಾರ ನ್ಯಾಯ ಕಂಡುಕೊಳ್ಳಬೇಕೇ ಹೊರತು, ಮೂರನೇ ವ್ಯಕ್ತಿಯೊಂದಿಗೆ ಕೈ ಜೋಡಿಸಬಾರದು. ಪರಿಶಿಷ್ಟರು ಅನ್ಯ ಸಮುದಾಯದವರೊಂದಿಗೆ ಪ್ರೀತಿ, ವಿಶ್ವಾಸ, ಭ್ರಾತೃತ್ವ ಬೆಳೆಸಿ ಕೊಳ್ಳಬೇಕು. ಒಂದು ಜಾತಿಯ ಬಲದಿಂದ ನಾವು ರಾಜಕಾರಣದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಗೆಲುವಿಗೆ ಎಲ್ಲ ಸಮುದಾಯದ ಬೆಂಬಲ ಬೇಕಾಗುತ್ತದೆ. ಇದನ್ನು ಜಿಲ್ಲೆಯ ಎಲ್ಲ ಸಮುದಾಯಗಳು ನಮ್ಮ ಜೊತೆಗಿರುವ ಮೂಲಕ ಸಾಬೀತು ಪಡಿಸಿವೆ. ಬಾಗಲಕೋಟೆ ಜಿಲ್ಲೆಯವನಾದ ನನ್ನನ್ನು ಹೊರಗಿನವನು ಎನ್ನದೆ ಜಿಲ್ಲೆಯ ಜನ ನನಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಹಾಗಾಗಿ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ತಿಳಿಸಿದರು.

ADVERTISEMENT

ನಮ್ಮಲ್ಲಿನ ಸರಳತೆ, ಸಜ್ಜನಿಕೆ, ಉತ್ತಮ ನಡವಳಿಕೆ ಹಾಗೂ ಇತರೆ ಸಮುದಾಯದ ಜೊತೆಗಿನ ಸ್ನೇಹ, ವಿಶ್ವಾಸಗಳು ರಾಜಕೀಯ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಲು ಮುಖ್ಯ ಕಾರಣ. ನಾನು ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅದು ನನ್ನ ಜಾಯಮಾನವಲ್ಲ. ತಳ ಸಮುದಾಯಗಳು ರಾಜಕೀಯ ಜಾಗೃತಿ ಮೈಗೂಡಿಸಿಕೊಳ್ಳಬೇಕು ಎಂದು ಕಾರಜೋಳ ಅಭಿಪ್ರಾಯಪಟ್ಟರು.

ಸಂಸದರ ಜತೆ ಮಾತನಾಡಿದ ಷಡಕ್ಷರಮುನಿ ಸ್ವಾಮೀಜಿ, ‘ನಮ್ಮ ರಾಜ್ಯದವರೇ ಆಗಿರುವ ವಿ.ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದಾರೆ. ಅವರೊಂದಿಗೆ ಸಮಾಲೋಚಿಸಿ, ದಾವಣಗೆರೆ–ಚಿತ್ರದುರ್ಗ– ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಶ್ರಮಿಸಬೇಕು. ಇದರಿಂದ ಬೆಂಗಳೂರು–ದಾವಣಗೆರೆ ನಡುವಿನ ಪ್ರಯಾಣದ ಅವಧಿ ಒಂದೂವರೆ ಗಂಟೆ ಕಡಿಮೆ ಆಗಲಿದೆ. ಸರಕು ಸಾಗಣೆ ವಹಿವಾಟು ವೃದ್ಧಿಯಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಮೇಲಿನ ಪ್ರಯಾಣದ ಒತ್ತಡ ಕಡಿಮೆಯಾಗಲಿದೆ’ ಎಂದು ವಿವರಿಸಿದರು.

ಈ ಬಗ್ಗೆ ಗಂಭೀರ ಪ್ರಯತ್ನ ಮಾಡುವುದಾಗಿ ಸಂಸದರು ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಜಯಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಪ್ಪನಾಯಕ, ಹಾಲಪ್ಪ ಹಾಗೂ ಮೈತ್ರಿ ಪಕ್ಷದ ಹಲವು ಮುಖಂಡರು ಸಂಸದರ ಜೊತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.