ADVERTISEMENT

ವಾಣಿವಿಲಾಸ ಅಣೆಕಟ್ಟೆಯಿಂದ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:29 IST
Last Updated 21 ಸೆಪ್ಟೆಂಬರ್ 2024, 15:29 IST
ಹಿರಿಯೂರು ತಾಲ್ಲೂಕಿನ ವಿವಿಪುರದಿಂದ ತಾಲ್ಲೂಕು ಕಚೇರಿವರೆಗೆ ರೈತರು ಶನಿವಾರ ಜಾಥಾ ನಡೆಸಿದರು
ಹಿರಿಯೂರು ತಾಲ್ಲೂಕಿನ ವಿವಿಪುರದಿಂದ ತಾಲ್ಲೂಕು ಕಚೇರಿವರೆಗೆ ರೈತರು ಶನಿವಾರ ಜಾಥಾ ನಡೆಸಿದರು   

ಹಿರಿಯೂರು: 15 ವರ್ಷ ಕಳೆದರೂ ತೆವಳುತ್ತಾ ಸಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಸರ್ಕಾರ ತನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು.

ತಾಲ್ಲೂಕಿನ ಮೇಟಿಕುರ್ಕೆ, ಸೂರಗೊಂಡನಹಳ್ಳಿ, ಭರಮಗಿರಿ, ಗೌನಹಳ್ಳಿ, ಭೂತನಹಟ್ಟಿ, ಕೂನಿಕೆರೆ, ಬೀರೇನಹಳ್ಳಿ ಹಾಗೂ ತವಂದಿ ಗ್ರಾಮಗಳ ಕೆರೆಗಳಿಗೆ ವಾಣಿವಿಲಾಸ ಅಣೆಕಟ್ಟೆಯಿಂದ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ವಾಣಿವಿಲಾಸಪುರದಿಂದ ಹಿರಿಯೂರು ತಾಲ್ಲೂಕು ಕಚೇರಿವರೆಗೆ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು.

ಜಲಾಶಯಕ್ಕೆ ಕೂಗಳತೆ ದೂರದಲ್ಲಿರುವ ಕೆರೆಗಳಿಗೆ ನೀರಿಲ್ಲ ಎಂಬುದು ದುರಂತದ ಸಂಗತಿ. ಈ ಹಿಂದೆ ತಾಲ್ಲೂಕು ಕಚೇರಿ ಮುಂದೆ ರೈತರು ನಡೆಸಿದ 543 ದಿನಗಳ ನಿರಂತರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿತು. ಈ ತಾಲ್ಲೂಕಿನ ರೈತರು ಗಟ್ಟಿದನಿಯ ಹೋರಾಟಗಾರರು ಎಂಬುದನ್ನು ಆಡಳಿತ ನಡೆಸುವವರು ಮರೆಯಬಾರದು. ಜೆ.ಜಿ. ಹಳ್ಳಿಯಲ್ಲಿ ನಡೆಸುತ್ತಿರುವ ಹೋರಾಟ ಸೇರಿ ರೈತರ ಎಲ್ಲ ಹೋರಾಟಗಳನ್ನು ಬೆಂಬಲಿಸುತ್ತೇನೆ ಎಂದು ಸ್ವಾಮೀಜಿ ಭರವಸೆ ನೀಡಿದರು.

ADVERTISEMENT

ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ವಿವಿ ಸಾಗರ ಜಲಾಶಯದ ಕೆಳಭಾಗದಲ್ಲಿರುವ ಕೆರೆಗಳಿಗೆ ನೀರು ತುಂಬಿಸಬೇಕು. ಭದ್ರಾ ಜಲಾಶಯ ಮತ್ತು ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ ಪ್ರತಿವರ್ಷ 10 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು. ಜೆ.ಜಿ. ಹಳ್ಳಿಯಲ್ಲಿ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ನಡೆಯುತ್ತಿರುವ ಧರಣಿ ನೂರು ದಿನ ಪೂರೈಸಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಧೋರಣೆ ತೋರಿಸಿದರೆ ಹಿರಿಯೂರು ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್, ಆಲೂರು ಸಿದ್ದರಾಮಣ್ಣ, ಕಂದಿಕೆರೆ ಜಗದೀಶ್ ಮಾತನಾಡಿದರು. ಬೀರೇನಹಳ್ಳಿ ರಾಮಯ್ಯ, ಎಸ್.ಜೆ. ಹನುಮಂತರಾಯ, ಕಂದಿಕೆರೆ ರಂಗನಾಥ್, ಲಕ್ಷ್ಮಣ್ ಹೂಗಾರ್, ವೆಂಕಟೇಶ್, ರಂಗಸ್ವಾಮಿ, ಮುಕುಂದ, ತಿಪ್ಪೇಸ್ವಾಮಿ, ಗೋವಿಂದರಾಜು, ರಾಮಣ್ಣ,‌ ಶ್ರೀನಿವಾಸ್, ಸಿದ್ದಮ್ಮ,‌ ಕರಿಯಪ್ಪ, ಸುರೇಶ್,‌ ಪಾರ್ಥ, ತಿಮ್ಮಯ್ಯ, ಶಿವಣ್ಣ, ರಾಮಣ್ಣ, ಸುಕುರ್ ಸಾಬ್, ಫಕ್ರುದ್ದೀನ್ ಸಾಬ್ ಇತರರು ಇದ್ದರು.

ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.