ADVERTISEMENT

‘ಕೊಟ್ಟಿಗೆ ಗೊಬ್ಬರ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಳ’

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಓ.ಕುಮಾರ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 14:40 IST
Last Updated 12 ಸೆಪ್ಟೆಂಬರ್ 2024, 14:40 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಆನಂದ್ ಆರ್.ಬಂಗೇರಿ ಉದ್ಘಾಟಿಸಿದರು
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಆನಂದ್ ಆರ್.ಬಂಗೇರಿ ಉದ್ಘಾಟಿಸಿದರು   

ಹಿರಿಯೂರು: ರೈತರು ತಮ್ಮ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರದ ಬದಲಿಗೆ ರಾಸಾಯನಿಕ ಗೊಬ್ಬರ ಬಳಸಲು ಆರಂಭಿಸಿದ ನಂತರ ಕೃಷಿಯಲ್ಲಿ ಹಲವಾರು ಸಮಸ್ಯೆಗಳು ಕಾಣತೊಡಗಿವೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಓ.ಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೈನುಗಾರಿಕೆಯಲ್ಲಿ ಸಮತೋಲಿತ ಆಹಾರ ಪೂರೈಕೆ ಮತ್ತು ಆರೋಗ್ಯ ರಕ್ಷಣೆ ಕುರಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಕೆಲವು ದಶಕಗಳ ಹಿಂದೆ ಪ್ರತಿ ರೈತರ ಮನೆಯಲ್ಲೂ ದೊಡ್ಡ ದೊಡ್ಡ ದನದ ಕೊಟ್ಟಿಗೆಗಳು ಇರುತ್ತಿದ್ದವು. ಆದರೆ ಈಗೀಗ ದನಕರುಗಳ ಸಂಖ್ಯೆ ಕ್ಷೀಣಿಸುತ್ತಿದೆ. ರೈತರು ಕೃಷಿಗೆ ಕೊಟ್ಟಿಗೆ ಗೊಬ್ಬರ ಬಳಸುವುದು ಮರೆತಂತೆ ಕಾಣುತ್ತಿದೆ. ಸುಸ್ಥಿರ ಕೃಷಿಗಾಗಿ ಪ್ರತಿ ರೈತನೂ ಸಮಗ್ರ ಕೃಷಿ ಪದ್ಧತಿಯನ್ನು ತಪ್ಪದೆ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಸು ಸಾಕಣೆಯಿಂದ ಹಲವು ರೀತಿಯ ಲಾಭಗಳಿವೆ. ನಿರಂತರ ಆದಾಯ ದೊರೆಯುತ್ತದೆ. ಸಗಣಿ ಮತ್ತು ಗಂಜಳ ಬಳಸಿಕೊಂಡು ಜೀವಾಮೃತ, ಬೀಜಾಮೃತ ಒಳಗೊಂಡಂತೆ ಸಾವಯವ ಪದಾರ್ಥಗಳನ್ನು ತಯಾರಿಸಿ ಕೃಷಿಯಲ್ಲಿ ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಸುಧಾರಿಸುವ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು ಎಂದು ಅವರು ವಿವರಿಸಿದರು.

ADVERTISEMENT

ತಿಪಟೂರಿನ ಬೈಫ್ ಸಂಸ್ಥೆಯ ಯೋಜನಾ ನಿರ್ದೇಶಕ ಆನಂದ್ ಆರ್.ಬಂಗೇರಿ ಕಾರ್ಯಕ್ರಮ ಉದ್ಘಾಟಿಸಿದರು.

ಸಸ್ಯ ಸಂರಕ್ಷಣೆ ವಿಜ್ಞಾನಿ ಎಸ್.ಓಂಕಾರಪ್ಪ ಸಾವಯವ ಕೃಷಿಯ ಮಹತ್ವ, ಬೆಳೆಗಳಿಗೆ ಹೆಚ್ಚಾಗಿ ಕಾಡುವ ರೊಗಗಳು, ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದರು.

ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಭಾಗದ ವಿಜ್ಞಾನಿ ಜೆ.ಎಂ. ಸರಸ್ವತಿ, ತೋಟಗಾರಿಕೆ ವಿಜ್ಞಾನಿ ಪಿ.ಎಸ್. ಮಹಂತೇಶ್ ಹಾಜರಿದ್ದರು. ಹಿರಿಯ ತಾಂತ್ರಿಕ ಅಧಿಕಾರಿ ಬಿ.ಎನ್. ಗೀತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳ ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.