ADVERTISEMENT

ಹಿರಿಯೂರು: ಸೇವಾ ರಸ್ತೆಗೆ ಇಳಿಯದ ಸರ್ಕಾರಿ ಬಸ್‌ಗಳು

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಸಮಸ್ಯೆ: ಪ್ರಯಾಣಿಕರ ಪರದಾಟ

ಸುವರ್ಣಾ ಬಸವರಾಜ್
Published 30 ಮೇ 2024, 6:02 IST
Last Updated 30 ಮೇ 2024, 6:02 IST
ಜವನಗೊಂಡನಹಳ್ಳಿಯಲ್ಲಿ ಅಪಘಾತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಎತ್ತರದ ಗೋಡೆ ನಿರ್ಮಿಸಿರುವುದು
ಜವನಗೊಂಡನಹಳ್ಳಿಯಲ್ಲಿ ಅಪಘಾತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಎತ್ತರದ ಗೋಡೆ ನಿರ್ಮಿಸಿರುವುದು   

ಹಿರಿಯೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ತಾಲ್ಲೂಕಿನ ಜವನಗೊಂಡನಹಳ್ಳಿಯ ಸೇವಾ ರಸ್ತೆಗೆ ನಿಯಮಿತವಾಗಿ ಬಾರದೇ ಇರುವುದರಿಂದ ಪ್ರಯಾಣಿಕರು ನಿತ್ಯವೂ ಪರದಾಡುವಂತಾಗಿದೆ. 

ಜವನಗೊಂಡನಹಳ್ಳಿಯಿಂದ ಹಿರಿಯೂರು, ಶಿರಾ, ದಾವಣಗೆರೆ ಹಾಗೂ ಬೆಂಗಳೂರು ನಗರಗಳಿಗೆ ಕನಿಷ್ಠ 150 ರಿಂದ 200 ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿನಿತ್ಯವೂ ಸಂಚರಿಸುತ್ತಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಬಾರದ ಕಾರಣ ಇವರೆಲ್ಲಾ ಸಂಕಷ್ಟ ಎದುರಿಸುವಂತಾಗಿದೆ. 

ಮೇ 23ರಂದು ಹೆದ್ದಾರಿಯಲ್ಲಿ ಸರಣಿ ಅಪಘಾತವೊಂದು ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯ ನಂತರ ಪೊಲೀಸ್ ಇಲಾಖೆಯ ಹೆದ್ದಾರಿಗೆ ಯಾರೂ ಇಳಿಯದಂತೆ ತಡೆಯಲು ರಸ್ತೆ ಅಂಚಿನಲ್ಲಿ ಎತ್ತರದ ಗೋಡೆ ನಿರ್ಮಿಸಿದೆ. ರಸ್ತೆಯಿಂದ ರಸ್ತೆಗೆ ದಾಟುವುದನ್ನು ತಪ್ಪಿಸಲು ವಿಭಜಕದ ಮೇಲೆ ತಂತಿ ಬೇಲಿಯನ್ನೂ ಅಳವಡಿಸಿದೆ. ಇದರಿಂದ ಪ್ರಯಾಣಿಕರು ಸೇವಾ ರಸ್ತೆ ಮೇಲೆ ಬಸ್‌ಗಾಗಿ ಕಾಯುವುದು ಅನಿವಾರ್ಯವಾಗಿದೆ. ಆ ರಸ್ತೆಯಲ್ಲಿ ಬಸ್‌ಗಳೇ ಬರದಿರುವುದು ಅವರನ್ನು ಚಿಂತೆಗೀಡುಮಾಡಿದೆ.  

ADVERTISEMENT

‘ಹೆದ್ದಾರಿಯಲ್ಲಿ ಸಾಗುವ ಎಲ್ಲಾ ಬಸ್‌ಗಳು ಸೇವಾ ರಸ್ತೆಯ ಮೂಲಕ ಸಂಚರಿಸುವಂತಾಗಬೇಕು. ಈ ಸಂಬಂಧ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ಪದೇ ಪದೇ ಸಂಭವಿಸುವ ಅಪಘಾತಗಳನ್ನು ತಡೆಯಲು ಈ ಕ್ರಮ ಅನಿವಾರ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ನಿರ್ಧಾರಕ್ಕೆ ಸಾರ್ವಜನಿಕರೂ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಾಲಿದ್ ಹುಸೇನ್ ಹೇಳಿದರು.

‘ಹೆದ್ದಾರಿಯಲ್ಲಿ ಸಾಗುವ ಬಹಳಷ್ಟು ಬಸ್‌ಗಳು ಸೇವಾ ರಸ್ತೆಗೆ ಇಳಿಯುತ್ತಿಲ್ಲ. ಈಶಾನ್ಯ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಬಸ್‌ಗಳು ಸೀಟುಗಳು ಖಾಲಿ ಇದ್ದರೆ ಮಾತ್ರ ಸೇವಾ ರಸ್ತೆಗೆ ಬರುತ್ತವೆ. ಆದರೆ ದಾವಣಗೆರೆ, ಚಿತ್ರದುರ್ಗದಿಂದ ಬರುವ ಬಸ್‌ಗಳು ಖಾಲಿ ಇದ್ದರೂ ಹೆದ್ದಾರಿಯಲ್ಲೇ ಸಾಗುತ್ತವೆ. ಅಡ್ಡ ಹಾಕಿ ಕೇಳಿದರೆ, ‘ನಮ್ಮದು ನಾನ್ ಸ್ಟಾಪ್ ಬಸ್’ ಎಂದು ನಿರ್ವಾಹಕರು ಉತ್ತರ ನೀಡುತ್ತಾರೆ. ಈ ಮುಂಚೆ ಹೆದ್ದಾರಿಯಲ್ಲಿ ನಿಂತು ಬಸ್‌ ಹತ್ತುವಾಗ ತುಂಬಿ ತುಳುಕುತ್ತಿದ್ದರೂ ಹತ್ತಿಸಿಕೊಂಡು ಹೋಗುತ್ತಿದ್ದರು. ಸೇವಾ ರಸ್ತೆ ಮೂಲಕ ಹೋದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಹೀಗೆ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಸಂಜೆ 6ರ ನಂತರ ಕೆಲವು ಬಸ್‌ಗಳು ಸೇವಾ ರಸ್ತೆಯ ಬದಲಿಗೆ ಮುಂಚಿನಂತೆ ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ಹೀಗೆ ಇಳಿದವರು ತಡೆಗೋಡೆ, ತಂತಿಬೇಲಿ ಇರುವ ಕಾರಣಕ್ಕೆ ಹೆದ್ದಾರಿಯ ಅಂಚಿನಲ್ಲಿ ಸುಮಾರು 1 ಕಿ.ಮೀ. ಕ್ರಮಿಸಿ ಸೇವಾ ರಸ್ತೆಗೆ ಬಂದು ಮನೆಗಳನ್ನು ಸೇರಬೇಕಿರುವುದು ತ್ರಾಸದಾಯಕವಾಗಿದೆ. ಹೆದ್ದಾರಿ ಅಂಚಿನಲ್ಲಿ ರಾತ್ರಿ ವೇಳೆ ನಡೆದು ಹೋಗುವುದು ಮೊದಲಿಗಿಂತ ಅಪಾಯಕಾರಿ. ಈ ವಿಚಾರದಲ್ಲಿ ಮಹಿಳೆಯರ ಪಾಡು ಹೇಳುವಂತಿಲ್ಲ. ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಬಸ್‌ ಚಾಲಕರು ಹಾಗೂ ನಿರ್ವಾಹಕರು ಯಾರ ಮಾತನ್ನೂ ಕೇಳುತ್ತಿಲ್ಲ. ಜವನಗೊಂಡನಹಳ್ಳಿ ಜಂಕ್ಷನ್ ಆಗಿದ್ದು, ಯಲ್ಲದಕೆರೆ ಗ್ರಾಮದ ಹಾಗೂ ಶಿರಾ ತಾಲ್ಲೂಕಿನ ನೂರಾರು ಪ್ರಯಾಣಿಕರು ಇಲ್ಲಿಂದಲೇ ಬಸ್‌ ಹಿಡಿದು ಕೆಲಸಗಳಿಗೆ ಹೋಗುತ್ತಾರೆ’ ಎಂದು ವಿವರಿಸಿದರು.

ಹೆದ್ದಾರಿಯ ಮಧ್ಯದಲ್ಲಿ ತಂತಿಬೇಲಿ ಹಾಕಿರುವುದು

ರಸ್ತೆ ಮಧ್ಯದಲ್ಲಿ ತಂತಿಬೇಲಿ ಅಳವಡಿಸಿರುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಹೆದ್ದಾರಿ ಅಂಚಿಗೆ ಕಟ್ಟಿರುವ ಗೋಡೆಯನ್ನು ತೆಗೆದು ಅಲ್ಲಿ ನಾಲ್ಕನೇ ಮಾರ್ಗ ನಿರ್ಮಿಸಬೇಕು. ಇಲ್ಲವೇ ಎಲ್ಲಾ ಬಸ್‌ಗಳೂ ಸೇವಾ ರಸ್ತೆಯ ಮೂಲಕ ಸಂಚರಿಸುವಂತೆ ಮಾಡಬೇಕು.

–ಖಾಲಿದ್‌ ಹುಸೇನ್ ಗ್ರಾ.ಪಂ. ಮಾಜಿ ಅಧ್ಯಕ್ಷ

ಜವನಗೊಂಡನಹಳ್ಳಿ ಸಮೀಪ ಸೇವಾ ರಸ್ತೆಯ ಎರಡೂ ಬದಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಂತ್ರಣ ಅಧಿಕಾರಿಗಳನ್ನು ನೇಮಿಸಿದ್ದು ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳು ಸೇವಾ ರಸ್ತೆಯ ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ ವೇಳೆಯೂ  ಪ್ರಯಾಣಿಕರಿದ್ದಲ್ಲಿ ಸೇವಾ ರಸ್ತೆಯ ಮೂಲಕ ಹೋಗುವಂತೆ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಸೂಚಿಸಲಾಗುವುದು

-ಕಾಳಿಕೃಷ್ಣ ಇನ್‌ಸ್ಪೆಕ್ಟರ್‌ ಗ್ರಾಮಾಂತರ ಪೊಲೀಸ್ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.