ADVERTISEMENT

ಹಿರಿಯೂರು: ವಾಣಿ ವಿಲಾಸಪುರ– ಕಕ್ಕಯ್ಯನಹಟ್ಟಿ ರಸ್ತೆ ಅವ್ಯವಸ್ಥೆ

ಸುವರ್ಣಾ ಬಸವರಾಜ್
Published 21 ಜುಲೈ 2024, 4:41 IST
Last Updated 21 ಜುಲೈ 2024, 4:41 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರದಿಂದ ಕಕ್ಕಯ್ಯನಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿರುವುದು
ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರದಿಂದ ಕಕ್ಕಯ್ಯನಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿರುವುದು   

ಹಿರಿಯೂರು: ವಾಣಿವಿಲಾಸಪುರದಿಂದ ಕಕ್ಕಯ್ಯನಹಟ್ಟಿ ಮಾರ್ಗವಾಗಿ ಹಿರಿಯೂರು– ಹೊಸದುರ್ಗ ಬೈಪಾಸ್ ರಸ್ತೆಯನ್ನು ಸಂಪರ್ಕಿಸುವ ಹಾದಿ ಸಂಪೂರ್ಣ ಹದಗೆಟ್ಟಿರುವ ಕಾರಣ ಈ ಮಾರ್ಗದಲ್ಲಿನ ಐದಾರು ಹಳ್ಳಿಗಳ ರೈತರು ಜನಪ್ರತಿನಿಧಿಗಳಿಗೆ ನಿತ್ಯ ಶಪಿಸುತ್ತಿದ್ದಾರೆ.

2022ರ ಸೆಪ್ಟಂಬರ್‌ನಲ್ಲಿ ವಾಣಿವಿಲಾಸ ಜಲಾಶಯ ಕೋಡಿ ಬಿದ್ದಾಗ ಹೊಸದುರ್ಗ– ಹಿರಿಯೂರು ನಡುವೆ ಸಂಚರಿಸುವ ಎಲ್ಲ ವಾಹನಗಳು ಕಕ್ಕಯ್ಯನಹಟ್ಟಿ ಮೂಲಕವೇ ಸಾಗಿದ್ದವು. ಹೊಸದುರ್ಗ, ಮಾಡದಕೆರೆ, ಲಕ್ಕಿಹಳ್ಳಿ, ಕುಂಟಪ್ಪನಹಟ್ಟಿ, ತಳವಾರಹಟ್ಟಿ, ಕಕ್ಕಯ್ಯನಹಟ್ಟಿ ಮೂಲಕ ರೈತರು ನಿತ್ಯ ವಾಣಿ ವಿಲಾಸಪುರದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ತರಬೇಕು.

‘ಬೈಕ್‌ನಲ್ಲಿ ಹಾಲಿನ ಕ್ಯಾನ್ ಇಟ್ಟುಕೊಂಡು ಬರುವಾಗ ಸರ್ಕಸ್‌ನಲ್ಲಿ ತಂತಿಯ ಮೇಲೆ ನಡೆಯುವಂತಹ ಅನುಭವ ಆಗುತ್ತದೆ. ಎಷ್ಟೋ ಬಾರಿ ಬೈಕ್‌ನಿಂದ ಬಿದ್ದು ಕ್ಯಾನ್‌ಗಳಲ್ಲಿದ್ದ ಹಾಲೆಲ್ಲ ರಸ್ತೆ ಪಾಲಾಗಿರುವುದುಂಟು. ರಾತ್ರಿ ವೇಳೆ ರಸ್ತೆ ಬದಿಯಲ್ಲಿರುವ ಬೇಲಿಯ ಮುಳ್ಳುಗಳು ವಾಹನ ಸವಾರರ ಮುಖಕ್ಕೆ ಬಡಿಯುತ್ತವೆ. ರಸ್ತೆ ಸರಿಪಡಿಸಿ ಎಂದು ಜನಪ್ರತಿನಿಧಿಗಳಿಗೆ ಮಾಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ’ ಎಂದು ಸ್ಥಳೀಯ ನಿವಾಸಿ ಎಸ್.ಎಸ್.ರಂಗಪ್ಪ ಆರೋಪಿಸಿದರು.

ADVERTISEMENT

ಪ್ರಮುಖ ರಸ್ತೆ: ‘ವಾಣಿವಿಲಾಸ ಜಲಾಶಯ ಕೋಡಿ ಬಿದ್ದಲ್ಲಿ ಹಿರಿಯೂರು–ಹೊಸದುರ್ಗ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. 2022ರಲ್ಲಿ ಕೋಡಿಯಲ್ಲಿನ ನೀರು ನಿಂತಾಗ ಖಾಸಗಿ ಬಸ್ ಮಾಲೀಕರ ಸಂಘದವರು ಕೋಡಿ ನೀರು ಹರಿಯುವ ಜಾಗದಲ್ಲಿ (ಅಲ್ಲಿ ಸೇತುವೆ ಇಲ್ಲ. ಜಲಾಶಯ ತುಂಬಿದರೆ ಕೋಡಿಯ ನೀರು ರಸ್ತೆಯ ಮೇಲೆಯೇ ಹರಿಯಬೇಕು) ತಾತ್ಕಾಲಿಕ ರಸ್ತೆ ನಿರ್ಮಿಸಿಕೊಂಡಿದ್ದರು. ಇಂದಿಗೂ ಅದೇ ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಮತ್ತೊಮ್ಮೆ ಕೋಡಿಯಲ್ಲಿ ನೀರು ಬಂದರೆ ಈ ರಸ್ತೆ ಕೆಲವೇ ಕ್ಷಣಗಳಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಆದ್ದರಿಂದ ಕಕ್ಕಯ್ಯನಹಟ್ಟಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು’ ಎಂದು ರಂಗಪ್ಪ ಆಗ್ರಹಿಸಿದರು.

‘ಹೊಸದುರ್ಗ ಪಟ್ಟಣದ ಕಡೆಯಿಂದ ಬರುವ ಬಸ್‌ಗಳು ಕಕ್ಕಯ್ಯನಹಟ್ಟಿ ಸಮೀಪ ತಿರುವು ಪಡೆದುಕೊಂಡು ವಾಣಿವಿಲಾಸಪುರ, ಕುರುಬರಹಳ್ಳಿ, ಪರಮೇನಹಳ್ಳಿ ಮೂಲಕ ಹೋದಲ್ಲಿ ಹುಳಿಯಾರು ರಸ್ತೆಯನ್ನು ಸುಲಭವಾಗಿ, ಅತಿ ಕಡಿಮೆ ಸಮಯದಲ್ಲಿ ತಲುಪಬಹುದು. ಈ ಮಾರ್ಗದಲ್ಲಿ ಅಂದಾಜು 600 ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸದೆ ಬಿಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಬಾಕಿ ಇರುವ ರಸ್ತೆಗೆ ಡಾಂಬರ್‌ ಹಾಕಿಸಿ ಅನುಕೂಲ ಮಾಡಿಕೊಡಬೇಕು’ ಎಂದು ಕಕ್ಕಯ್ಯನಹಟ್ಟಿ ಗ್ರಾಮದ ಜಯಣ್ಣ, ಶಿವಮೂರ್ತಿ ಮನವಿ ಮಾಡಿದ್ದಾರೆ.

ಭರಮಗಿರಿ ಗ್ರಾಮದ ತೋಟಗಳಿಗೆ ಹೋಗುವ ರಸ್ತೆಯನ್ನು 5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಫಲಕ

Cut-off box - ಭರಮಗಿರಿ ರಸ್ತೆಯ ಅವ್ಯವಸ್ಥೆ ‘ವಾಣಿ ವಿಲಾಸಪುರದ ಮೊರಾರ್ಜಿ ದೇಸಾಯಿ ಶಾಲೆಯ ಸಮೀಪ ಭರಮಗಿರಿ ಗ್ರಾಮದ ಹೊಲಗಳಿಗೆ ಹೋಗುವ ರಸ್ತೆ ಕೆಸರು ಗದ್ದೆಯಂತಾಗಿದೆ. 2023– 24ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ₹ 5 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಫಲಕ ಹಾಕಲಾಗಿದೆ. ಆದರೆ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ಮಳೆ ಬಂದರೆ ಜಮೀನುಗಳಿಗೆ ಹೋಗಿ ಬರಲು ಆಗುತ್ತಿಲ್ಲ’ ಎಂದು ಭರಮಗಿರಿ ಗ್ರಾಮದ ರೈತ ಮಹಿಳೆ ಕುಸುಮಾ ಬೇಸರ ವ್ಯಕ್ತಪಡಿಸಿದರು. ವಾಣಿವಿಲಾಸಪುರ– ಕಕ್ಕಯ್ಯನಹಟ್ಟಿ ಹಾಗೂ ವಾಣಿವಿಲಾಸಪುರ ರಸ್ತೆಯಿಂದ ಭರಮಗಿರಿ ಗ್ರಾಮದ ತೋಟಗಳಿಗೆ ಹೋಗಿಬರುವ ರಸ್ತೆಯನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.