ADVERTISEMENT

ಹಿರಿಯೂರು: ಭರವಸೆ ಮೂಡಿಸಿದ ವಿ.ವಿ.ಸಾಗರ ಜಲಾಶಯ

ಎತ್ತಿನಹೊಳೆ ನೀರು ಬಂದರೆ ಕೋಡಿ ಬೀಳುವ ಸಾಧ್ಯತೆ; 121 ಅಡಿ ತಲುಪಿದ ಜಲಾಶಯದ ಮಟ್ಟ

ಸುವರ್ಣಾ ಬಸವರಾಜ್
Published 10 ಅಕ್ಟೋಬರ್ 2024, 6:11 IST
Last Updated 10 ಅಕ್ಟೋಬರ್ 2024, 6:11 IST
<div class="paragraphs"><p>ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ ಮಂಗಳವಾರ 121.75 ಅಡಿ ತಲುಪಿದ ಸಂದರ್ಭದಲ್ಲಿ ಕಂಡುಬಂದ ನೋಟ</p></div>

ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ ಮಂಗಳವಾರ 121.75 ಅಡಿ ತಲುಪಿದ ಸಂದರ್ಭದಲ್ಲಿ ಕಂಡುಬಂದ ನೋಟ

   

ಹಿರಿಯೂರು: ತಾಲ್ಲೂಕಿನಲ್ಲಿರುವ ವಾಣಿ ವಿಲಾಸ ಜಲಾಶಯ 61ನೇ ಬಾರಿ 100 ಅಡಿಯ ಮಟ್ಟವನ್ನು ದಾಟಿದ್ದು, ಪ್ರಸಕ್ತ ವರ್ಷ ಭದ್ರಾ ಜಲಾಶಯ ಹಾಗೂ ಮಳೆ ನೀರು ಸೇರಿ ಬುಧವಾರದ ವೇಳೆಗೆ 121.90 ಅಡಿ ದಾಟಿದೆ.

1933ರಲ್ಲಿ ಪ್ರಥಮ ಬಾರಿಗೆ ಜಲಾಶಯ ಕೋಡಿ ಹರಿದಿತ್ತು. 89 ವರ್ಷಗಳ ನಂತರ 2022 ಸೆ. 2ರಂದು ಎರಡನೇ ಬಾರಿಗೆ ಕೋಡಿ ಬಿದ್ದಿತ್ತು. ಪ್ರಸಕ್ತ ವರ್ಷ ಭದ್ರಾ ಜಲಾಶಯದ ನೀರಿನ ಜೊತೆಗೆ ಎತ್ತಿನಹೊಳೆಯ ನೀರು ಹರಿದುಬಂದರೆ ಮೂರನೇ ಬಾರಿಗೆ ಜಲಾಶಯ ಕೋಡಿ ಬೀಳುವ ಸಾಧ್ಯತೆ ಇದೆ.

ADVERTISEMENT

ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ತಾಲ್ಲೂಕಿನ ಜನರು ಕಾತರದಿಂದ ಕಾಯುತ್ತಿದ್ದಾರೆ.

30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 24 ಟಿಎಂಸಿ ಅಡಿ ಸಂಗ್ರಹವಾಗಿದೆ. 1,502 ಕ್ಯುಸೆಕ್ ಒಳಹರಿವು ಇದ್ದು, 1911ರಲ್ಲಿ ಪ್ರಥಮ ಬಾರಿಗೆ ನೀರಿನ ಮಟ್ಟ 109.66 ಅಡಿ ತಲುಪಿತ್ತು. ಕಳೆದ ವರ್ಷ ಈ ದಿನ 122.25 ಅಡಿ ನೀರಿನ ಸಂಗ್ರಹ ಇತ್ತು. 1933ರಲ್ಲಿ 135.25 ಅಡಿ ದಾಖಲೆ ನೀರು ಸಂಗ್ರಹವಾಗಿ ಕೋಡಿ ಹರಿದಿತ್ತು. 2017ರಲ್ಲಿ ಡೆಡ್ ಸ್ಟೋರೇಜ್ ಹಂತ ತಲುಪುವ ಮೂಲಕ ಆತಂಕ ಮೂಡಿಸಿತ್ತು.

2019ರಿಂದ ಹರಿವಿನಲ್ಲಿ ಹೆಚ್ಚಳ: 2019ರಿಂದ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳ ಕಂಡುಬಂತು. 2017ರಲ್ಲಿ 66.10 ಅಡಿಗೆ ಇಳಿದಿದ್ದ ನೀರಿನ ಮಟ್ಟ, 2018ರಲ್ಲಿ ಕೇವಲ ಒಂದೂವರೆ ಅಡಿಯಷ್ಟು ಹೆಚ್ಚಿತ್ತು. 2019ರಲ್ಲಿ ನೀರಿನ ಮಟ್ಟ 102.15 ಅಡಿ ತಲುಪಿ, 2022ರಲ್ಲಿ ಕೋಡಿ ಬಿದ್ದಿತು.

ಹರಿದು ಹೋಗುತ್ತಿದ್ದ ವೇದಾವತಿ ನದಿಯ ನೀರನ್ನು ಬಯಲು ಸೀಮೆಯ ಜನರ ಅನುಕೂಲಕ್ಕಾಗಿ ಅಣೆಕಟ್ಟೆ ನಿರ್ಮಿಸಿ ಬಳಸುವ ಕಾರ್ಯಕ್ಕೆ ಮುಂದಾದವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್. ವಾಣಿ ವಿಲಾಸಪುರ ಗ್ರಾಮದ ಬಳಿ ಮಾರಿಕಣಿವೆ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಹೆಸರಿನಲ್ಲಿ ವಾಣಿ ವಿಲಾಸ ಜಲಾಶಯವನ್ನು ಅವರು ನಿರ್ಮಿಸಿದ್ದಾರೆ. 1897ರಲ್ಲಿ ಕಾಮಗಾರಿ ಆರಂಭಿಸಿ ಹತ್ತೇ ವರ್ಷಗಳಲ್ಲಿ ಆಗ ₹ 45 ಲಕ್ಷ ವೆಚ್ಚದಲ್ಲಿ ಈ ಭಾಗದಲ್ಲಿಯೇ ದೊಡ್ಡದಾದ ಜಲಾಶಯ ತಲೆ ಎತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.