ADVERTISEMENT

ಕೇಂದ್ರ ಸರ್ಕಾರದ ದಾಳಿಂಬೆ ಕ್ಲಸ್ಟರ್ ಯೋಜನೆ: ಹಿರಿಯೂರು ಆಯ್ಕೆ

3000 ಎಕರೆಯಲ್ಲಿ ಹೊಸದಾಗಿ ದಾಳಿಂಬೆ ಬೆಳೆ ಬೆಳೆಯುವ ಗುರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:12 IST
Last Updated 16 ಸೆಪ್ಟೆಂಬರ್ 2024, 14:12 IST

ಹಿರಿಯೂರು: ಕೇಂದ್ರ ಸರ್ಕಾರದ ದಾಳಿಂಬೆ ಕ್ಲಸ್ಟರ್ ಯೋಜನೆಗೆ ಹಿರಿಯೂರು ತಾಲ್ಲೂಕನ್ನು ಆಯ್ಕೆ ಮಾಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ತಾಲ್ಲೂಕಿನಲ್ಲಿ 3,000 ಎಕರೆಯಲ್ಲಿ ಹೊಸದಾಗಿ ದಾಳಿಂಬೆ ಬೆಳೆ ಮತ್ತು ಬೆಳೆಯ ಪುನರುಜ್ಜೀವನ ಹಾಗೂ ದಾಳಿಂಬೆ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ತಿಳಿಸಿದ್ದಾರೆ.

ದಾಳಿಂಬೆ ಬೆಳೆಗೆ ಸಂಬಂಧಿಸಿದಂತೆ ವಿಜ್ಞಾನಿಗಳನ್ನು ಬಳಸಿಕೊಂಡು ಬೆಳೆ ನಿರ್ವಹಣಾ ವೆಚ್ಚ ಕಡಿಮೆ ಮಾಡುವುದು, ಬೆಳೆಯಲ್ಲಿ ಅತ್ಯಾಧುನಿಕ ಮಾದರಿ ಅಳವಡಿಕೆ, ಬೆಳೆಗೆ ನೀಡುವ ಶೇ 40ರಷ್ಟು ಸಬ್ಸಿಡಿ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುವುದು, ಬೆಳೆಗೆ ಕಾಡುವ ಕಪ್ಪುಚುಕ್ಕೆ, ಸೀಳುರೋಗ ಒಳಗೊಂಡಂತೆ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಲು ತಜ್ಞರ ಮೂಲಕ ರೈತರಿಗೆ ಮಾಹಿತಿ ನೀಡುವುದು ಯೋಜನೆಯ ಆದ್ಯತೆಗಳಲ್ಲಿ ಪ್ರಮುಖವಾದವು ಎಂದು ಮಾಹಿತಿ ನೀಡಿದ್ದಾರೆ.

ದಾಳಿಂಬೆ ಸಸಿ ನಾಟಿ ಮಾಡಿದ ದಿನದಿಂದ ಪ್ರತಿ ಹಂತದಲ್ಲೂ ವಿಜ್ಞಾನಿಗಳು ಬೆಳೆಗೆ ಯಾವ ಔಷಧ ಸಿಂಪಡಿಸಬೇಕು, ಗೊಬ್ಬರ ಹಾಕಬೇಕು, ಗಿಡದ ಕೊಂಬೆಗಳನ್ನು ಯಾವಾಗ ಕತ್ತರಿಸಬೇಕು, ಹೂವು ಬಿಟ್ಟಾಗ ಕೈಗೊಳ್ಳುವ ಕ್ರಮಗಳು, ನೀರು ಹಾಯಿಸುವುದನ್ನು ಯಾವಾಗ ನಿಲ್ಲಿಸಬೇಕು ಎಂಬ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ದಾಳಿಂಬೆ ಬೆಳೆಗಾರರಿಗಾಗಿ ಅಭಿವೃದ್ಧಿಪಡಿಸಿರುವ ಸುರಕ್ಷಾ ಪೋರ್ಟಲ್‌ನಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಿ ಎಲ್ಲಾ ರೀತಿಯ ಆರ್ಥಿಕ ಸಹಾಯ ಹಾಗೂ ಸೇವೆ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಹಳೆಯ ದಾಳಿಂಬೆ ತೋಟಗಳ ಪುನರುಜ್ಜೀವನದ ಜೊತೆಗೆ ರೋಗಮುಕ್ತ ದಾಳಿಂಬೆ ತೋಟಗಳ ನಿರ್ವಹಣೆಗೆ ಯೋಜನೆಯಡಿ ಒತ್ತು ನೀಡಲಾಗುವುದು. ರೈತರಿಗೆ ಉತ್ತಮ ಆದಾಯ ತಂದುಕೊಡುವ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ದಾಳಿಂಬೆಗೆ ಹಿರಿಯೂರು ತಾಲ್ಲೂಕಿನ ಹವಾಗುಣ, ಮಳೆಯ ಪ್ರಮಾಣ ಹಾಗೂ ಮಣ್ಣಿನ ಗುಣ ಪೂರಕವಾಗಿದೆ. ರೈತರು ಕೇಂದ್ರ ಸರ್ಕಾರ ರೂಪಿಸಿರುವ ಈ ಯೋಜನೆಯಡಿ ದೊರೆಯುವ ಮಾಹಿತಿ ಮತ್ತು ನಿರ್ವಹಣಾ ವಿಧಾನಗಳನ್ನು ಅನುಸರಿಸಿದಲ್ಲಿ ಉತ್ತಮ ಆದಾಯ ಪಡೆಯಬಹುದು. ಜಾಗತಿಕ ಮಟ್ಟದ ರೈತಸ್ನೇಹಿ ಮಾರುಕಟ್ಟೆ ಒದಗಿಸುವುದು ಕೂಡ ಯೋಜನೆಯ ಪ್ರಮುಖ ಗುರಿ ಎಂದು ವಿವರಿಸಿದ್ದಾರೆ.

ಸೆ.18ರಂದು ಸಭೆ:

ತಾಲ್ಲೂಕಿನ ಧರ್ಮಪುರದ ವಾಸವಿ ಸಮುದಾಯ ಭವನದಲ್ಲಿ ಸೆಪ್ಟೆಂಬರ್‌ 18ರಂದು ಮಧ್ಯಾಹ್ನ 12.30ಕ್ಕೆ ದಾಳಿಂಬೆ ರೈತರ ಸಭೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯ ಮಾಹಿತಿ ಪಡೆಯಲು ಮೊ: 9743111955, 9743100855 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.