ADVERTISEMENT

ಬಸವತತ್ವ ಆಚರಣೆಗೆ ತರುವುದು ಅಗತ್ಯ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:07 IST
Last Updated 22 ನವೆಂಬರ್ 2024, 16:07 IST
ಇಂಡೋನೇಷ್ಯಾದಲ್ಲಿ ನಡೆದ ಭಾರತ ವಚನ ಸಾಂಸ್ಕೃತಿಕ ಯಾತ್ರಾ–2024ರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಇಂಡೋನೇಷ್ಯಾದಲ್ಲಿ ನಡೆದ ಭಾರತ ವಚನ ಸಾಂಸ್ಕೃತಿಕ ಯಾತ್ರಾ–2024ರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಹೊಸದುರ್ಗ: ‘ಇಡೀ ವಿಶ್ವಕ್ಕೆ ಬಸವಣ್ಣ ಗುರು. ಬದುಕಿನ ಎಲ್ಲಾ ಆಯಾಮಗಳನ್ನು ಕೊಟ್ಟಂಥ ಮಹಾನ್ ಪುರುಷ. ಇಂಥವರ ತತ್ವಗಳನ್ನು ಆಚರಣೆಗೆ ತರದೇ ಹೋದರೆ ನಾವು ಬಸವದ್ರೋಹಿಗಳಾಗುತ್ತೇವೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಭಾರತ ವಚನ ಸಾಂಸ್ಕೃತಿಕ ಯಾತ್ರಾ –2024ರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬಸವಣ್ಣ ಪರಿಪೂರ್ಣ ವ್ಯಕ್ತಿ. ಅಂದು ಇಂದು ಮುಂದು ಎಂದೆಂದಿಗೂ ಪ್ರಸ್ತುತ. ಬಸವಣ್ಣನವರ ತತ್ವಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ‌. ಬಸವ ತತ್ವ ವಿಶ್ವವ್ಯಾಪಿಯಾಗಲಿ’ ಎಂದು ಆಶಿಸಿದರು.

ADVERTISEMENT

‘ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು, ಸಾಂಸ್ಕೃತಿಕ ನಾಯಕರುಗಳ ಸರಳತೆಯನ್ನು ನೋಡಿದರೆ ನಿಜವಾಗಿಯೂ ಬಸವತತ್ವ ನೆಲೆಸಿರುವುದು ಇಂಡೋನೇಷ್ಯಾದಲ್ಲಿ ಎನ್ನುವ ಭಾವ ಮೂಡುತ್ತದೆ’ ಎಂದರು.

‘ವಿಶ್ವದ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಿದ ಕಾಲ 12ನೆಯ ಶತಮಾನ. ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಬಸವಣ್ಣ. ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತನೆಯ ಹರಿಹಾರ ಬಸವಣ್ಣ. ಆದ್ದರಿಂದಲೇ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣನವರ ಕ್ರಾಂತಿಕಾರಕ ವಿಚಾರಗಳನ್ನು ಮನೆ ಮನಗಳಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಸಲಹೆ ನೀಡಿದರು.

‘ಮುಂದಿನ ವರ್ಷ ಬಸವಣ್ಣನವರ ತತ್ವ ವಿಚಾರಗಳು ಬಗ್ಗೆ ಅಂತರರಾಷ್ಟ್ರೀಯ ವಿಚಾರಸಂಕಿರಣ ಇಂಡೋನೇಷ್ಯಾದಲ್ಲಿ ನಡೆಯಬೇಕು’ ಎಂದು ಇಂಡೋನೇಷ್ಯಾದ ರಮೇಶ ಶಾಸ್ತ್ರಿ ಮನವಿ ಮಾಡಿದರು.

ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಿವಕುಮಾರ ಕಲಾಸಂಘದ ಕಲಾವಿದರು ‘ಉರಿಲಿಂಗ ಪೆದ್ದಿ’ ನಾಟಕ ಪ್ರದರ್ಶಿಸಿದರು.

ಚಿಂತಕ ರಂಜಾನ್ ದರ್ಗಾ, ಸಿದ್ದು ಯಾಪಲಪರ್ವಿ, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಬೆಟ್ಟಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಇಂಡೋನೇಷ್ಯಾದ ರಾಜ ಮನೆತನದ ವೇದಾಂತ, ಪ್ರವಾಸೋದ್ಯಮ ಇಲಾಖೆಯ ಸಚಿವ ಇಗ್ನೋನಾ, ಧಾರ್ಮಿಕ ಇಲಾಖೆಯ ಅಧಿಕಾರಿ ಕೊರಾಸನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.