ADVERTISEMENT

ಹೊಸದುರ್ಗ: ರೈತರ ಬದುಕು ಹಸನಾಗಿಸಿದ ಬಾಳೆ

ಶ್ವೇತಾ ಜಿ.
Published 26 ಜೂನ್ 2024, 6:43 IST
Last Updated 26 ಜೂನ್ 2024, 6:43 IST
<div class="paragraphs"><p>ಹೊಸದುರ್ಗದ ಮಾವಿನಕಟ್ಟೆಯಲ್ಲಿ ಆರ್. ನಾಗೇಂದ್ರಪ್ಪ ಅವರು ಜಮೀನಿನಲ್ಲಿ ಬೆಳೆದ ಬಾಳೆ ಗಿಡಗಳೊಂದಿಗೆ ಇದ್ದಾರೆ</p><p><br></p></div>

ಹೊಸದುರ್ಗದ ಮಾವಿನಕಟ್ಟೆಯಲ್ಲಿ ಆರ್. ನಾಗೇಂದ್ರಪ್ಪ ಅವರು ಜಮೀನಿನಲ್ಲಿ ಬೆಳೆದ ಬಾಳೆ ಗಿಡಗಳೊಂದಿಗೆ ಇದ್ದಾರೆ


   

ಹೊಸದುರ್ಗ: ಓದು ಮುಗಿದ ಬಳಿಕ ನೌಕರಿ ಹುಡುಕಿ ಪಟ್ಟಣ ಸೇರುವ ಜನರ ನಡುವೆ, ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ಆರ್. ನಾಗೇಂದ್ರಪ್ಪ ಊರಲ್ಲೇ ನೆಲೆನಿಂತು, ಸಮೃದ್ಧ ಬಾಳೆ ಬೆಳೆದು ಮಾದರಿಯಾಗಿದ್ದಾರೆ.

ADVERTISEMENT

ಒಂದೂವರೆ ಎಕರೆ ಭೂಮಿಯಲ್ಲಿ ಮೂರು ವರ್ಷಗಳಿಂದ ಅಡಿಕೆ ಜೊತೆ ಅಂತರ ಬೆಳೆಯಾಗಿ ಬಾಳೆ ಬೆಳೆಯುತ್ತಿರುವ ಇವರು ಇದೀಗ ಉತ್ಕೃಷ್ಟ ಇಳುವರಿ ಪಡೆದಿದ್ದು ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಡಿ.ಇಡಿ ಓದಿರುವ ಇವರು ಉದ್ಯೋಗ ಅರಸಿ ಬೇರೆಡೆ ಹೋಗದೆ ಕೆಲ ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸುಗಂಧರಾಜ ಹೂ, ದಾಳಿಂಬೆ, ಚೆಂಡು ಹೂ, ಅಡಿಕೆ ಜೊತೆ ಬಾಳೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಮಿಶ್ರ ಕೃಷಿಯಲ್ಲಿ ಆದಾಯ ಕಂಡುಕೊಂಡಿದ್ದಾರೆ. 

‘ಅಂಗಾಂಶ ಕೃಷಿ ವಿಧಾನದಲ್ಲಿ ಸಿದ್ಧಪಡಿಸಿದ ಬಾಳೆ ಸಸಿಗಳನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ತರಿಸಿದ್ದೆ. ಭೂಮಿ ಸಿದ್ಧತೆ ಮಾಡಿಕೊಂಡ ನಂತರ ಗಿಡಗಳನ್ನು ನೆಡಲು 1.5 ಅಡಿ ಆಳದ ಗುಂಡಿ ತೆಗೆಯಬೇಕು. ಗುಂಡಿಯಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಮೇಲೆ ಮಣ್ಣು ಮುಚ್ಚಬೇಕು. ಇದಾದ 15ರಿಂದ 20 ದಿನಗಳ ನಂತರ ಗಿಡಗಳನ್ನು ನಾಟಿ ಮಾಡಬೇಕು. ತೋಟಗಾರಿಕೆ ಇಲಾಖೆಯವರ ಸಹಕಾರ ಪಡೆದು ಕಾಲ ಕಾಲಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಬೇಕು’ ಎಂದು ನಾಗೇಂದ್ರಪ್ಪ ವಿವರಿಸಿದರು.

‘ನಾಟಿ ಮಾಡಿದ 11 ತಿಂಗಳಿಗೆ ಕಟಾವಿಗೆ ಬರುತ್ತದೆ. ಸಮೃದ್ಧವಾಗಿ ಬೆಳೆದ 1,100 ಗಿಡಗಳಿಂದ ಅಂದಾಜು 35 ಟನ್‌ನಷ್ಟು ಬಾಳೆ ಕೈಗೆ ಬಂದಿದೆ. ಇದಾದ 6ರಿಂದ 7 ತಿಂಗಳ ಅವಧಿಯಲ್ಲಿ 2ನೇ ಫಸಲು ಶುರುವಾಗುತ್ತದೆ. ಆಗ ಸುಮಾರು 40 ಟನ್ ಬಾಳೆ ದೊರೆಯುತ್ತದೆ. ಬಾಳೆ ಬೆಳೆಯಲು ₹ 2 ಲಕ್ಷ ವೆಚ್ಚ ಆಗಿದೆ. ಎರಡೂ ಫಸಲಿನಿಂದ ಸೇರಿ ಅಂದಾಜು ₹13ರಿಂದ ₹14 ಲಕ್ಷ ಆದಾಯದ ನಿರೀಕ್ಷೆಯಿದೆ’ ಎಂದು ಹೇಳುತ್ತಾರೆ.

ಮುಂಗಾರಿನಲ್ಲಿ ಗುಡುಗು ಮಳೆಯಿಂದಾಗಿ ಬಾಳೆ ಗಿಡಗಳು ನೆಲಕ್ಕುರುಳುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆಚ್ಚು ಗಮನಹರಿಸಿ, ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಇತರೆ ಬೆಳೆ ಬೆಳೆದು ನಷ್ಟ ಅನುಭವಿಸುವುದಕ್ಕಿಂತ, ಒಮ್ಮೆ ಬಾಳೆ ಬೆಳೆದರೆ ಮೂರು ವರ್ಷ ಫಸಲು ಪಡೆಯಬಹುದು. ಹೊಸದುರ್ಗದಿಂದ ವ್ಯಾಪಾರಿಗಳು ಜಮೀನಿಗೇ ಬಂದು ಬಾಳೆ ಖರೀದಿಸುತ್ತಾರೆ. ಒಳ್ಳೆಯ ಮಾರುಕಟ್ಟೆ ವ್ಯವಸ್ಥೆ ದೊರೆತರೆ ಇನ್ನೂ ಅಧಿಕ ಆದಾಯ ಪಡೆಯಬಹುದು ಎಂಬುದು ಅವರ ಅಭಿಪ್ರಾಯ.

ಉತ್ತಮ ದರ, ಸಂತಸ: ಹಿಂದೊಮ್ಮೆ ಕೆ.ಜಿ. ಬಾಳೆಹಣ್ಣಿಗೆ ₹10ರಂತೆ, ವ್ಯಾಪಾರಿಗಳು ಜಮೀನಿಗೆ ಬಂದು ಖರೀದಿಸುತ್ತಿದ್ದರು. ಬರದಿಂದಾಗಿ ಬೇಡಿಕೆಯಷ್ಟು ಬಾಳೆ ದೊರೆಯದ ಕಾರಣ ಕೆ.ಜಿ.ಗೆ ₹ 16ರಂತೆ ಖರೀದಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಪಚ್ಚಬಾಳೆ ದರ ಕೆ.ಜಿಗೆ ₹ 30ರಿಂದ ₹ 40 ಇದೆ. ಆಗಸ್ಟ್ ತಿಂಗಳಿನಿಂದ ವರಮಹಾಲಕ್ಷ್ಮಿ ಹಬ್ಬ, ಶ್ರಾವಣ ಮಾಸ, ಮಂಗಳಗೌರಿ ಪೂಜೆ, ದಸರಾ, ದೀಪಾವಳಿ ಹೀಗೆ ಸಾಲುಸಾಲು ಹಬ್ಬಗಳಿದ್ದು, ಬೇಡಿಕೆ ಹೆಚ್ಚಾಗಲಿದ್ದು, ಅಧಿಕ ಆದಾಯ ಗಳಿಸಬಹುದು ಎಂದೂ ಅವರು ಸಲಹೆ ನೀಡುತ್ತಾರೆ.

ತೋಟಗಾರಿಕೆ ಇಲಾಖೆ ಸಹಾಯಧನ

ಮಾವಿನಕಟ್ಟೆ ನಾಗೇಂದ್ರಪ್ಪ ಅವರು ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ಪಡೆದಿದ್ದಾರೆ. ಬನಾನಾ ಸ್ಪೆಷಲ್ ಸಿಂಪರಣೆ ಹಾಗೂ ಅರ್ಕ ಮೈಕ್ರೋಬಿಯಲ್ ಕನ್ಸಾರ್ಶಿಯಂ ಜೀವಾಣುಗಳನ್ನು ಇಲಾಖೆಯಿಂದ ಪಡೆದು ಸಮೃದ್ಧಿ ಬಾಳೆ ಬೆಳೆದಿದ್ದಾರೆ. ಆಸಕ್ತ ರೈತರು ಇಲಾಖೆ ಸಹಾಯ ಪಡೆದು ಉತ್ಕೃಷ್ಟ ಗುಣಮಟ್ಟದ ಬೆಳೆಗಳನ್ನು ಬೆಳೆಯಬಹುದು ಎಂದು ಕಸಬಾ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಪುಟ್ಟಣ್ಣ ಸಿ. ಹೇಳಿದರು. 

ಕೃಷಿಯನ್ನು ಶ್ರದ್ಧೆಯಿಂದ ಮಾಡುವುದರ ಜೊತೆಗೆ ಆ ಕಾಯಕವನ್ನು ಗೌರವಿಸಬೇಕು. ಯಾವುದೇ ಬೆಳೆಯಾದರೂ ಸರಿ, ಆಸಕ್ತಿಯಿಂದ ಉಪಚಾರ ಮಾಡಿದರೆ ನೀರಿಕ್ಷೆಗೂ ಮೀರಿದ ಆದಾಯ ಗಳಿಸಬಹುದು.
ಆರ್.ನಾಗೇಂದ್ರಪ್ಪ, ರೈತ, ಮಾವಿನಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.