ADVERTISEMENT

ಹೊಸದುರ್ಗ | ಕನ್ನಡದಲ್ಲಿ ಮಾತ್ರೆ ಚೀಟಿ ಬರೆಯುವ ಡಾ. ಸಂಜಯ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 15:51 IST
Last Updated 15 ಸೆಪ್ಟೆಂಬರ್ 2024, 15:51 IST
ಡಾ. ಸಂಜಯ್
ಡಾ. ಸಂಜಯ್   

ಹೊಸದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೀಲು, ಮೂಳೆ ತಜ್ಞ ಡಾ. ಸಂಜಯ್ ಅವರಿಗೆ ವ್ಯಾಪಕ ಜನಮನ್ನಣೆ ದೊರೆಯುತ್ತಿದೆ. ಅವರು ಕನ್ನಡದಲ್ಲಿ ಬರೆದಿರುವ ಔಷಧ ಚೀಟಿ ‌ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರೋಗದ ವಿವರ, ಮಾತ್ರೆಯ ವಿವರಗಳನ್ನು ಕನ್ನಡದಲ್ಲಿ ಬರೆದು, ಪ್ರತಿ ರೋಗಿಗಳಿಗೂ ರೋಗ ಹಾಗೂ ಮಾತ್ರೆಗಳ ಬಗ್ಗೆ ಮಾಹಿತಿ ತಿಳಿಯುವಂತೆ ಮಾಡುತ್ತಿದ್ದಾರೆ. ಗುರುವಾರ ಅವರ ಆರಂಭಿಸಿದ ಈ ವಿನೂತನ ಯತ್ನದಿಂದ ಪ್ರೇರಣೆ ಪಡೆದ ಮತ್ತೊಬ್ಬ ವೈದ್ಯ, ಕಿವು ಮೂಗು, ಗಂಟಲು ತಜ್ಞ ಡಾ.ಶಿವಪ್ರಕಾಶ್ ಕನ್ನಡದಲ್ಲೇ ಔಷಧ ಚೀಟಿ ಬರೆಯುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ. ಸಂಜಯ್ ಅವರು, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ವೈದ್ಯರು ಚೀಟಿಯನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭಿಸಿದೆ. ಕನ್ನಡ ಸ್ವಲ್ಪ ತೊಡಕಾಯಿತು. ಔಷಧಗಳ ಬಗ್ಗೆ ಸರಾಗವಾಗಿ ಬರೆಯಬಹುದು. ಆದರೆ ರೋಗದ ಲಕ್ಷಣಗಳು ಇಂಗ್ಲಿಷ್‌ನಲ್ಲಿದ್ದು, ಕನ್ನಡದಲ್ಲಿ ಬರೆಯುವುದು ಸ್ವಲ್ಪ ಕಷ್ಟ. ಹಾಗಾಗಿ ಇಂಗ್ಲಿಷ್‌ ಹೆಸರನ್ನೇ ಕನ್ನಡದಲ್ಲಿ ಬರೆದು, ರೋಗಿಗಳಿಗೆ ತಿಳಿಸಿಕೊಡುವ ಸಣ್ಣ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯಲು ಆರಂಭಿಸಿದ್ದೇವೆ. ಸರ್ಕಾರದ ಆದೇಶ ಬಂದ ನಂತರ ಇತರೆ ವೈದ್ಯರು ಸಹ ಈ ಕಾರ್ಯ ಆರಂಭಿಸಲಿದ್ವಾರೆ’ ಎಂದರು. 

ADVERTISEMENT

‘ಈ ಮೊದಲು ವೈದ್ಯರು ಬರೆಯುತ್ತಿದ್ದ ಔಷಧಿ ಚೀಟಿಗಳು ಮೆಡಿಕಲ್ ಸ್ಟೋರ್‌ನವರಿಗೆ ಮಾತ್ರ ಅರ್ಥವಾಗುತ್ತಿದ್ದವು. ಮನೆಗೆ ಬಂದು ನೋಡಿದರೆ, ಯಾವ ರೋಗ, ಯಾವ ಮಾತ್ರೆ  ಎಂಬುದೇ ಗೊತ್ತಾಗುತ್ತಿರಲಿಲ್ಲ. ಒಮ್ಮೊಮ್ಮೆ ನರ್ಸಿಂಗ್ ವಿದ್ಯಾರ್ಥಿಗಳೂ ಔಷಧದ ಹೆಸರು ಗೊತ್ತಾಗದೆ ಪರಿತಪಿಸಿದ್ದನ್ನು ಕಂಡಿದ್ದೇನೆ. ಡಾ. ಸಂಜಯ್ ಅವರ ಈ ಕಾರ್ಯ ರೋಗಿಗಳ ಸಮಸ್ಯೆ ನಿವಾರಣೆ ಜೊತೆಗೆ ವೈದ್ಯರ ಕನ್ನಡಾಭಿಮಾನವನ್ನು ಹೆಚ್ಚಿದೆ. ಹಳ್ಳಿಗಳಿಂದ ಕೂಡಿದ ನಮ್ಮ ದೇಶದಲ್ಲಿ ಪ್ರತಿಯೊಬ್ಬ ವೈದ್ಯರೂ ಕನ್ನಡದಲ್ಲೇ ಔಷಧ ಚೀಟಿ, ರೋಗದ ಮಾಹಿತಿ ನೀಡುವಂತಾಗಬೇಕು’ ಎಂದು ಸ್ಥಳೀಯರಾದ ಮಾಡದಕೆರೆ ಕರಿಯಪ್ಪ ಅಭಿಪ್ರಾಯಪಟ್ಟಿದ್ದಾರೆ. 

ಎಲ್ಲ ಆಸ್ಪತ್ರೆಗಳಲ್ಲೂ ಕನ್ನಡದಲ್ಲಿ ಔಷಧ ಚೀಟಿ ಬರೆಯುವುದರ ಜೊತೆಗೆ ವೈದ್ಯರು ರೋಗಿಗಳ ಬಳಿ, ಕನ್ನಡದಲ್ಲೇ ಸಂವಹನ ನಡೆಸಬೇಕು. ಸೌಜನ್ಯದಿಂದ ವರ್ತಿಸಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.

ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಕನ್ನಡದಲ್ಲಿ ಔಷಧ ಚೀಟಿ ಬರೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.