ADVERTISEMENT

ಹೊಸದುರ್ಗ | ಅಧಿಕ ಮಳೆ: ನೆಲಕಚ್ಚಿದ ಸಾವೆ

25,000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ

ಶ್ವೇತಾ ಜಿ.
Published 17 ಆಗಸ್ಟ್ 2024, 7:08 IST
Last Updated 17 ಆಗಸ್ಟ್ 2024, 7:08 IST
ಹೊಸದುರ್ಗದ ಮತ್ತೋಡಿನ ಜಮೀನೊಂದರಲ್ಲಿ ನೆಲಕ್ಕುರುಳಿರುವ ಸಾವೆ
ಹೊಸದುರ್ಗದ ಮತ್ತೋಡಿನ ಜಮೀನೊಂದರಲ್ಲಿ ನೆಲಕ್ಕುರುಳಿರುವ ಸಾವೆ   

ಹೊಸದುರ್ಗ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಹದ ಮಳೆಯಾಗುತ್ತಿದ್ದು, ಕಟಾವಿಗೆ ಬಂದಿದ್ದ ಸಾವೆ ಬೆಳೆ ನೆಲಕ್ಕುರುಳಿದೆ. ಇದರಿಂದ ರೈತರ ಮೊಗದಲ್ಲಿ ಆತಂಕದ ಛಾಯೆ ಆವರಿಸಿದೆ.

ಈ ಬಾರಿ ಹದ ಮಳೆಯಾಗಿದ್ದರಿಂದ ರೈತರು ಪೂರ್ವ ಮುಂಗಾರಿನಲ್ಲಿಯೇ ಸಾವೆ ಬಿತ್ತನೆಗೆ ಮುಂದಾಗಿದ್ದರು. 25,000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಕಾಲ ಕಾಲಕ್ಕೆ ಉತ್ತಮ ಮಳೆಯಾದ ಪರಿಣಾಮ ಸಾವೆ ಉತ್ಕೃಷ್ಟವಾಗಿ ಬೆಳೆದಿತ್ತು. ರೈತರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಇದ್ದರು.

ಸಾವೆ ಬೆಳೆ ಕೊಯ್ಲಿಗೆ ಬಂದಿದ್ದು, ತಾಲ್ಲೂಕಿನಾದ್ಯಂತ ಹಲವೆಡೆ ಯಂತ್ರಗಳ ಸಹಾಯದಿಂದ ಕಟಾವು ಬಿರುಸಿನಿಂದ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಆವರಿಸಿದ ಮಳೆಯಿಂದಾಗಿ ರೈತರು ನಿದ್ದೆಗೆಡುವಂತಾಗಿದೆ.

ADVERTISEMENT

‘2 ಎಕರೆ ಭೂಮಿಗೆ ಸಾವೆ ಹಾಕಲಾಗಿದೆ. ಅಧಿಕ ಮಳೆಯಿಂದಾಗಿ ಸಾವೆ ಕೊಳೆತು ಮಣ್ಣುಪಾಲು ಆಗಬಹುದು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಾವೆ ಬಿತ್ತನೆಗೆ ಎಕರೆಗೆ ₹ 10,000 ದಿಂದ 15,000 ವ್ಯಯಿಸಲಾಗಿದೆ. ಪ್ರಸ್ತುತ ದರ ₹3,200 ರಿಂದ ₹3,400 ಇದೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರೈತರಿಗೆ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡಬೇಕು’ ಎಂದು ನೀರಗುಂದದ ರೈತ ರಘು ಒತ್ತಾಯಿಸಿದರು.

‘10 ಎಕರೆಗೆ ಸಾವೆ ಹಾಕಿದ್ದು, ಸಂಪೂರ್ಣವಾಗಿ ಬಿದ್ದಿದೆ. ಕಟಾವಿಗೂ ತೊಂದರೆಯಾಗುತ್ತಿದೆ. ಮಳೆ ಬಿಡುವು ನೀಡಿದರೆ ಸಾಕು ಎನ್ನುವಂತಾಗಿದೆ. ಸಾವೆ ಕಟಾವಿಗೆ ಯಂತ್ರದ ಮಾಲೀಕರು ಎಕರೆಯೊಂದಕ್ಕೆ ಗಂಟೆಗೆ ₹2,300 ರಿಂದ ₹2,500 ದರ ಪಡೆಯುತ್ತಾರೆ. ಆದರೆ ಬಿದ್ದಿರುವ ಸಾವೆ ಕೊಯ್ಲಿಗೆ ಇನ್ನೂ ಹೆಚ್ಚಿನ ಸಮಯ ಹಿಡಿಯುವುದರಿಂದ ಎಕರೆಗೆ ₹5,500ಕ್ಕೂ ಹೆಚ್ಚು ಮೊತ್ತ ನೀಡಬೇಕಾಗಬಹುದು. ಮತ್ತೋಡು ಹೋಬಳಿಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಸಾವೆ ನೆಲಕಚ್ಚಿದೆ. ಸರ್ಕಾರ ಪರಿಹಾರ ನೀಡಬೇಕು. ನೊಂದ ರೈತರಿಗೆ ಸಹಾಯ ಮಾಡಬೇಕು’ ಎಂದು ದೊಡ್ಡಯ್ಯನಪಾಳ್ಯದ ರೈತ ಓಂಕಾರಪ್ಪ ಆಗ್ರಹಿಸಿದರು.

‘ಈಗಾಗಲೇ ಶೇ 15 ರಿಂದ 20 ರಷ್ಟು ಸಾವೆ ಕೊಯ್ಲು ಮುಗಿದಿದೆ. ಸಾವೆ ಅಲ್ಲಲ್ಲಿ ಬಿದ್ದಿದೆ. ಬಿಸಿಲು ಬಂದರೆ ಕಟಾವು ಮಾಡಬಹುದು. ಮಳೆ ಸ್ವಲ್ಪ ಬಿಡುವು ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಸಾವೆ ಬೀಜದ ಕವಚ ಗಟ್ಟಿಯಾಗಿದ್ದು, ನೆಲಕ್ಕುರುಳಿದ ಕೂಡಲೇ ಉದುರುವುದಿಲ್ಲ. ಯಂತ್ರಗಳ ಸಹಾಯದಿಂದ ಕಟಾವು ಮಾಡಬಹುದು. ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ ಎಸ್ ಈಶ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.