ಹೊಸದುರ್ಗ: ಹೊಸದುರ್ಗ ಮತ್ತು ಶ್ರೀರಾಂಪುರ ರಾಗಿ ಖರೀದಿ ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಬೆಂಬಲಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ರಾಗಿ ಖರೀದಿಗೆ ಸಂಬಂಧಿಸಿದಂತೆ ನಡೆದ ಅವ್ಯವಹಾರ ಕುರಿತು ಮೂರು ಜನರ ವಿರುದ್ಧ ಹೊಸದುರ್ಗ ಪೋಲಿಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.
ಚಿತ್ರದುರ್ಗ ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಕೆ.ಆರ್. ಶಿವಕುಮಾರ್, ಹೊಸದುರ್ಗ ರಾಗಿ ಖರೀದಿ ಕೇಂದ್ರದ ಕಿರಿಯ ಸಹಾಯಕ ಅಧಿಕಾರಿ ಎಸ್‌ಎನ್. ವೆಂಕಟೇಶ್ ಹಾಗೂ ರಾಗಿ ಖರೀದಿ ಕೇಂದ್ರದ ಅಧಿಕಾರಿ ಬಸವರಾಜಪ್ಪ ವಿರುದ್ಧ ಆಹಾರ ಶಿರಸ್ತೇದಾರ್ ಪಿ. ರಮೇಶ್ ಅವರು ಪ್ರಕರಣ ದಾಖಲಿಸಿದ್ದಾರೆ.
‘ಅವ್ಯವಹಾರ ಕುರಿತಂತೆ ಅಧಿಕಾರಿಗಳನ್ನು ವಿಚಾರಿಸಿದಾಗ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ತನಿಖೆ ವೇಳೆ ರೈತರು ನೀಡಿರುವ ಹೇಳಿಕೆ ಪ್ರಕಾರ, ರಾಗಿ ಖರೀದಿಗೆ ಅನುಸಾರ ಗ್ರೈನ್ ವೋಚರ್ ನೀಡದೆ, ಇಚ್ಚೆಯಾನುಸಾರ ಗ್ರೈನ್ ವೋಚರ್ ನೀಡಿದ್ದಾರೆ. ಸರ್ಕಾರ ನಿಗದಿಪಡಿಸಿದಂತೆ ಒಬ್ಬ ರೈತರಿಂದ 50.580 ಕೆ.ಜಿ. ರಾಗಿ ಖರೀದಿಸಬೇಕಿತ್ತು. ರೈತರಿಂದ ನಿಗದಿಗಿಂತ ಒಂದು ಕೆ.ಜಿ ಹೆಚ್ಚುವರಿ ರಾಗಿ ಪಡೆಯಲಾಗಿದೆ. 291 ರೈತರಿಗೆ ಗ್ರೈನ್ ವೋಚರ್ ನೀಡದಿರುವುದು ಕಂಡುಬಂದಿದೆ‘ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಅಲ್ಲದೆ ದಾಸ್ತಾನಿನಲ್ಲಿ 3,363 ಕ್ವಿಂಟಲ್ ರಾಗಿ ಕೊರತೆಯಿರುವುದು ಪತ್ತೆಯಾಗಿದೆ. ಇದರಲ್ಲಿ ಖರೀದಿ ಅಧಿಕಾರಿಗಳು ಶಾಮೀಲಾಗಿರುವುದು ಮತ್ತು ದಾಸ್ತಾನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಲ್ಲಿ ಭಾಗಿಯಾಗಿರುವ ಮೂವರು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು‘ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.