ಹೊಸದುರ್ಗ: ಕಳೆದ ಒಂದು ತಿಂಗಳಿನಿಂದ ತಾಲ್ಲೂಕಿನಾದ್ಯಂತ ಹದ ಮಳೆಯಾಗುತ್ತಿದೆ. ಬರ ಹಾಗೂ ನೀರಿನ ಕೊರತೆಯಿಂದ ಕೃಷಿ ಸಹವಾಸ ಬೇಡ ಎನ್ನುತ್ತಿದ್ದ ರೈತರ ಮೊಗದಲ್ಲಿ ವರುಣದೇವ ಮಂದಹಾಸ ತಂದಿದ್ದಾನೆ. ತಾಲ್ಲೂಕಿನ ನರ್ಸರಿಗಳಲ್ಲಿ ತರಕಾರಿ ಸಸಿಗಳ ಖರೀದಿ ಜೋರಾಗಿ ನಡೆಯುತ್ತಿದೆ.
ಪ್ರಸ್ತುತ ತರಕಾರಿಗಳ ದರ ಅಧಿಕವಾಗಿದೆ. ಹೀಗಾಗಿ ಹೆಚ್ಚು ಆದಾಯ ಪಡೆಯುವ ಉದ್ದೇಶದಿಂದ ರೈತರು ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಟೊಮೆಟೊ, ಮೆಣಸಿನಕಾಯಿ, ಬದನೆ, ಎಲೆಕೋಸಿನ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಸಿಗಳ ಜೊತೆ ಹಾಗಲಕಾಯಿ, ಹಿರೇಕಾಯಿ, ಬೀನ್ಸ್ ಬಿತ್ತನೆ ಬೀಜಗಳ ಖರೀದಿಯೂ ಅಧಿಕವಾಗಿದೆ.
ಕ್ಯಾಪ್ಸಿಕಂ ₹7, ಮೆಣಸಿನಕಾಯಿ ₹1, ಟೊಮೆಟೊ ₹1, ಬದನೆ 60 ಪೈಸೆ, ಎಲೆ ಕೋಸು ಹಾಗೂ ಹೂಕೋಸು ತಲಾ 50 ಪೈಸೆ, ಚೆಂಡು ಹೂ ಸಸಿಗಳನ್ನು ₹2–₹4ಕ್ಕೆ ಮಾರಾಟ ಮಾಡಲಾಗುತ್ತಿದೆ. ತಳಿಗಳ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.
‘ಕಳೆದ ಬಾರಿ ಅಧಿಕ ಬಿಸಿಲು ಹಾಗೂ ಬರಗಾಲದಿಂದ ಸಸಿ ಮಾರಾಟ ಅಷ್ಟಾಗಿ ಇರಲಿಲ್ಲ. ಈ ಬಾರಿ ಬರಗಾಲ ಹಾಗೂ ನೀರಿನ ಕೊರತೆ ಇದ್ದರೂ ಸಸಿಗಳನ್ನು ಬೆಳೆಸಲಾಗಿದೆ. ಈಗ ಹದ ಮಳೆಯಾಗಿದ್ದು, ತರಕಾರಿ ಸಸಿಗಳ ಮಾರಾಟ ಜೋರಾಗಿ ನಡೆಯುತ್ತಿದೆ’ ಎಂದು ಬೀಸನಹಳ್ಳಿ ಜೆ.ಪಿ.ಡಿ ಫಾರಂನ ಜಗದೀಶ್ ಎಸ್. ಹೇಳಿದ್ದಾರೆ.
‘ಈವರೆಗೆ ಅಂದಾಜು 8–10 ಲಕ್ಷ ಸಸಿಗಳ ಮಾರಾಟ ಮಾಡಲಾಗಿದೆ. ಜೂನ್ ಆರಂಭದಿಂದ ಚೆಂಡು ಹೂ ಸಸಿಗಳ ಬೇಡಿಕೆ ಹೆಚ್ಚಾಗಿದೆ. 2004 ರಿಂದಲೂ ನರ್ಸರಿ ಕಾಯಕ ಮಾಡುತ್ತಿದ್ದು, ಈ ಬಾರಿ ಕಡಿಮೆ ಸಮಯದಲ್ಲಿ ಅಧಿಕ ಸಸಿಗಳ ಮಾರಾಟವಾಗಿವೆ. ರೈತರು ಉತ್ತಮ ಆದಾಯ ನಿರೀಕ್ಷೆ ಹೊಂದಿದ್ದಾರೆ. ಆರಂಭದಲ್ಲಿ ಇರುವಂತೆ ಮಳೆಯೂ ಕಾಲಕಾಲಕ್ಕೆ ಚೆನ್ನಾಗಿ ಆದರೆ ಸಾಕು’ ಎಂಬುದು ಅವರ ಆಶಯವಾಗಿದೆ.
ರೈತರಿಗೆ ಸಸಿಗಳನ್ನು ನೀಡುವುದರ ಜೊತೆಗೆ ಮಾರುಕಟ್ಟೆ ಸಸಿಗೆ ಬಾಧಿಸಬಹುದಾದ ರೋಗ ನಿಯಂತ್ರಣ ಕ್ರಮ ರಸಗೊಬ್ಬರದ ಬಗ್ಗೆ ಮಾಹಿತಿ ನೀಡುತ್ತೇನೆ. ರೈತರು ಇಚ್ಛಿಸಿದಲ್ಲಿ ಕ್ಷೇತ್ರ ವೀಕ್ಷಣೆ ಮಾಡಿ ಸಲಹೆ ನೀಡುತ್ತೇನೆ.– ಜಗದೀಶ್ ಎಸ್., ಜೆ.ಪಿ.ಡಿ ಫಾರಂ ಮಾಲೀಕ
ಫೆಬ್ರುವರಿ–ಮಾರ್ಚ್ ತಿಂಗಳಿನಲ್ಲಿ ಸಸಿ ನಾಟಿ ಮಾಡಿದರೆ ಮೇ ಮೊದಲ ವಾರದಲ್ಲಿ ಉತ್ತಮ ಆದಾಯ ಗಳಿಸಬಹುದಿತ್ತು. ಅತಿಯಾದ ಬಿಸಿಲು ಹಾಗೂ ನೀರಿನ ಅಭಾವವಿತ್ತು. ಹಾಗಾಗಿ ನಾಟಿ ಸಾಧ್ಯವಿಲ್ಲ.– ಈರಪ್ಪ ಗುತ್ತಿಕಟ್ಟೆ, ಗೊಲ್ಲರಹಟ್ಟಿ ನಿವಾಸಿ
ಚೆಂಡುಹೂ ಸಸಿಗೆ ಹೆಚ್ಚಿದ ಬೇಡಿಕೆ
ಈ ಬಾರಿ ಚೆಂಡು ಹೂ ಸಸಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಈ ಸಸಿಗಳು 45-50 ದಿನಗಳಲ್ಲಿ ಹೂ ಬಿಡಲು ಆರಂಭಿಸುತ್ತವೆ. ಆಗಸ್ಟ್‌ನಿಂದ ಶ್ರಾವಣ ದಸರಾ ದೀಪಾವಳಿ ಸೇರಿದಂತೆ ಸಾಲು ಹಬ್ಬಗಳಿದ್ದು ಚೆಂಡು ಹೂಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಕಡಿಮೆ ಸಮಯದಲ್ಲಿ ಅಧಿಕ ಆದಾಯ ನೀಡುವ ಚೆಂಡು ಹೂ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.