ADVERTISEMENT

ಸಕಾರಾತ್ಮಕ ಸಂಸ್ಕಾರದ ಕೊರತೆಯಿದ್ದರೆ ಬದುಕಿನಲ್ಲಿ ವಿಫಲ: ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:30 IST
Last Updated 28 ಜೂನ್ 2024, 16:30 IST
ಹೊಸದುರ್ಗದ ಸಾಣೇಹಳ್ಳಿಯಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಹೊಸದುರ್ಗದ ಸಾಣೇಹಳ್ಳಿಯಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು   

ಹೊಸದುರ್ಗ: ‘ದೊಡ್ಡ ಸ್ಥಾನದಲ್ಲಿರುವವರೇ ಅಡ್ಡದಾರಿ ಹಿಡಿದು ಬದುಕಿನಲ್ಲಿ ವಿಫಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಮನೆ ಮತ್ತು ಶಾಲೆಗಳಲ್ಲಿ ಸಕಾರಾತ್ಮಕವಾದ ಸಂಸ್ಕಾರ ದೊರೆಯದೇ ಇರುವುದು. ಮನೆಯಲ್ಲಿ ತಂದೆ, ತಾಯಿ, ಬಂಧುಗಳು ಮತ್ತು ಶಾಲೆಯಲ್ಲಿ ಶಿಕ್ಷಕರು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವನ್ನೂ ಮಾಡಬೇಕು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ‘ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ಓದಿನ ಜೊತೆ ಶಿಸ್ತು ಮೈಗೂಡಿಸಿಕೊಳ್ಳಬೇಕು. ಕೇವಲ ಶಾಲೆಯಲ್ಲಿ ಓದುವುದು ಮುಖ್ಯವಲ್ಲ. ಹೊರಗಡೆ ನಮ್ಮ ನಡವಳಿಕೆಗಳು ಹೇಗಿವೆ ಎನ್ನುವುದೂ ಮುಖ್ಯ. ನಡವಳಿಕೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆ. ಇದು ಸರಿಯಾದ ದಾರಿಯಲ್ಲಿ ಹೋಗಲಿಕ್ಕೆ ಒಂದು ಮಾರ್ಗ ಹಾಕಿದೆ ಎಂದು ಹಿರಿಯೂರು ಬಿಇಒ ಸಿ.ಎಂ. ತಿಪ್ಪೇಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಕುಮಾರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ.ವಿ.ಗಂಗಾಧರಪ್ಪ, ಗಣ್ಯರಾದ ಕೆ.ಸಿ. ಶಿವಮೂರ್ತಿ, ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎ.ಸಿ ಚಂದ್ರಣ್ಣ, ಮುಖ್ಯ ಶಿಕ್ಷಕ ಕೆ.ಆರ್ ಬಸವರಾಜ, ಬಿ.ಎಸ್. ಶಿವಕುಮಾರ್ ಮತ್ತು ಎ.ಎಸ್. ಶಿಲ್ಪಾ ಉಪಸ್ಥಿತರಿದ್ದರು.

ಹೊಸದುರ್ಗದ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.