ಹೊಸದುರ್ಗ: ತಾಲ್ಲೂಕಿನಾದ್ಯಂತ ಸಿರಿಧಾನ್ಯ ಬಿತ್ತನೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲೇ ಅತೀಹೆಚ್ಚು ಸಿರಿಧಾನ್ಯ ಬೆಳೆಯುವ ಪ್ರದೇಶ ಎಂಬ ಖ್ಯಾತಿಗೆ ತಾಲ್ಲೂಕು ಪಾತ್ರವಾಗುತ್ತಿದೆ.
ಇಲ್ಲಿಯ ಮಣ್ಣಿನ ಗುಣಮಟ್ಟ ಹಾಗೂ ಹವಾಮಾನ ಯೋಗ್ಯವಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ರೈತರು ಸಿರಿಧಾನ್ಯಗಳತ್ತ ಹೊರಳುತ್ತಿದ್ದಾರೆ. ಈ ಬಾರಿ 25,000ಕ್ಕೂ ಅಧಿಕ ಹಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಮಾಡಿದ್ದು. ಇಡೀ ರಾಜ್ಯದಲ್ಲಿ ಹೊಸದುರ್ಗ ತಾಲ್ಲೂಕು ಅಗ್ರಸ್ಥಾನ ಪಡೆದಿದೆ.
ಮೊದಲು ತಾಲ್ಲೂಕಿನ ರೈತರು ಸ್ವಯಂ ಬಳಕೆಗೆ ಅಗತ್ಯದಷ್ಟು ಮಾತ್ರ ಸಿರಿಧಾನ್ಯ ಬೆಳೆಯುತ್ತಿದ್ದರು. ಇತ್ತೀಚೆಗೆ ಸಿರಿಧಾನ್ಯ ಬಳಕೆ ಕುರಿತು ಜಾಗೃತಿ ಹೆಚ್ಚಾದ ಪರಿಣಾಮ ಬಿತ್ತನೆ ಪ್ರಮಾಣ ಹೆಚ್ಚಾಗಿ ಈ ಪ್ರದೇಶ ‘ಸಿರಿಧಾನ್ಯದ ಕಣಜ’ ಆಗುವತ್ತ ಮುನ್ನಡೆಯುತ್ತಿದೆ.
2019ರಿಂದೀಚೆಗೆ ತಾಲ್ಲೂಕಿನಾದ್ಯಂತ ಸಿರಿಧಾನ್ಯ ಬಿತ್ತನೆ ಹೆಚ್ಚಾಗುತ್ತಿದೆ. ಪ್ರತಿ ವರ್ಷವೂ ಗುರಿಗಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿನ ಬಿತ್ತನೆಯಾಗುತ್ತಿತ್ತು. ಆದರೆ ಈ ವರ್ಷ ಗುರಿಗಿಂತ ಮೂರು ಪಟ್ಟು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ಬಾರಿ ಸಿರಿಧಾನ್ಯ ಬಿತ್ತನೆಗೆ 9,565 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿತ್ತು. ವಾಸ್ತವವಾಗಿ 25,150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಈ ಬಾರಿ ಮುಂಗಾರುಪೂರ್ವ ಮಳೆ ಚೆನ್ನಾಗಿ ಸುರಿದ ಪರಿಣಾಮ ರೈತರು ಭೂಮಿ ಸಿದ್ಧತೆ ಮಾಡಿಕೊಂಡಿದ್ದರು. ಅದು ಸಾಮೆ ಬಿತ್ತನೆಗೆ ಉತ್ತಮ ವಾತಾವರಣ ಕಲ್ಪಿಸಿತ್ತು. ಹೆಸರು ಬೆಳೆಗೆ ಮಳೆ ತಡವಾಗಿದ್ದರಿಂದ ಆ ಸ್ಥಳವನ್ನೂ ಸಿರಿಧಾನ್ಯಗಳೇ ಆಕ್ರಮಿಸಿದವು. ಕಡಿಮೆ ತೇವಾಂಶವು ಸಿರಿಧಾನ್ಯ ಹುಲುಸಾಗಿ ಬೆಳೆಯಲು ಕಾರಣವಾಯಿತು ಎಂದು ರೈತರು ತಿಳಿಸುತ್ತಾರೆ.
25,000 ಹಕ್ಟೇರ್‌ನಲ್ಲಿ ಸಾಮೆ ಬೆಳೆಯೇ 20,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಉಳಿದಂತೆ ಕೊರ್ಲೆ, ಹಾರಕ, ನವಣೆ, ಊದಲು, ಬರಗು ಬಿತ್ತಲಾಗಿದೆ. ರೋಗ ಬಾಧೆಯಿಲ್ಲದೇ ಸಾಮೆ ಬೆಳೆ ಹುಲುಸಾಗಿ ಬೆಳೆದಿದೆ. ಕಡಿಮೆ ಖರ್ಚಿನ ಬೇಸಾಯವಾಗಿದ್ದು ಜಾನುವಾರುಗಳಿಗೆ ಉತ್ತಮ ಮೇವು ದೊರೆಯುತ್ತದೆ. ಸಿರಿಧಾನ್ಯಗಳು ಪೌಷ್ಟಿಕಾಂಶದ ಆಗರವಾಗಿದ್ದು ಬೇಡಿಕೆಯೂ ಸೃಷ್ಟಿಯಾಗಿದೆ.
‘ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದ ರೈತರು ಅಧಿಕ ಇಳುವರಿ ಪಡೆಯುತ್ತಿದ್ದಾರೆ. ರೈತರು ಮೌಲ್ಯವರ್ಧನೆಗೆ ಮುಂದಾಗಬೇಕು. ಅವರ ಮನವಿಗೆ ಸ್ಪಂದಿಸಿದ ಸರ್ಕಾರ ಪಟ್ಟಣ ಸೇರಿದಂತೆ ಕಂಗುವಳ್ಳಿ, ಶ್ರೀರಾಂಪುರ ಹಾಗೂ ಲಕ್ಕಿಹಳ್ಳಿಗಳಲ್ಲಿ ಸಿರಿಧಾನ್ಯ ಮೌಲ್ಯವರ್ಧನಾ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ಹೇಳಿದರು.
‘ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಿರಿಧಾನ್ಯಗಳು ಸಹಾಯ ಮಾಡುತ್ತದೆ. ಇನ್ಸುಲಿನ್ ಅವಲಂಬಿತ ಮಧುಮೇಹಿಗಳಿಗೆ ವರದಾನವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಅಸ್ತಮಾ ನಿವಾರಣೆಗೂ ಸಿರಿಧಾನ್ಯ ಔಷಧಿಯಾಗಿದೆ’ ಎಂಬುದು ಗ್ರಾಹಕರೊಬ್ಬರ ಅನಿಸಿಕೆ.
‘5 ವರ್ಷಗಳ ಹಿಂದೆ ಕೃಷಿ ಇಲಾಖೆ ಸಹಕಾರದೊಂದಿಗೆ ಕೊರ್ಲೆ ಬೆಳೆದಿದ್ದೆ. ಅಧಿಕ ಇಳುವರಿ ಮತ್ತು ಆದಾಯ ಸಿಕ್ಕ ಪರಿಣಾಮ 8 ಎಕರೆಯಲ್ಲೂ ಸಿರಿಧಾನ್ಯ ಬೆಳೆಯುತ್ತಿದ್ದೇನೆ’ ಎಂದು ದೊಡ್ಡತೇಕಲವಟ್ಟಿ ಗ್ರಾಮದ ರೈತ ಬಿ.ಮೂರ್ತೇಶ್ ತಿಳಿಸಿದರು.
ಸರ್ಕಾರ ಕ್ಷೇತ್ರ ಮಟ್ಟದಲ್ಲಿ ತರಬೇತಿ ಕೃಷಿ ಯಂತ್ರೋಪಕರಣಗಳ ಸೌಲಭ್ಯ ಸುಸ್ಥಿರ ಮಾರುಕಟ್ಟೆ ಒದಗಿಸುತ್ತಿದೆ. ಹವಾಮಾನ ವೈಪರೀತ್ಯ ಎದುರಾದಾಗ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಬಹುದು– ಸಿ.ಎಸ್.ಈಶ ಕೃಷಿ ಸಹಾಯಕ ನಿರ್ದೇಶಕ ಹೊಸದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.