ADVERTISEMENT

ಸಾರ್ವಜನಿಕ ಆಸ್ಪತ್ರೆಗಳಲ್ಲೂ 20 ಹಾಸಿಗೆ ಮೀಸಲು-ಡಾ.ರಂಗನಾಥ್

ಕೋವಿಡ್ ಮೂರನೇ ಅಲೆ ಕುರಿತ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 14:16 IST
Last Updated 25 ಜೂನ್ 2021, 14:16 IST
ಡಾ. ರಂಗನಾಥ್
ಡಾ. ರಂಗನಾಥ್   

ಚಿತ್ರದುರ್ಗ: ‘ಕೋವಿಡ್ ಮೂರನೇ ಅಲೆಯು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ 10ರಿಂದ 20 ಹಾಸಿಗೆ ಮೀಸಲಿಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್ ತಿಳಿಸಿದರು.

ಇಲ್ಲಿ ಶುಕ್ರವಾರ ಕೋವಿಡ್ ಮೂರನೇ ಅಲೆಯ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಮೊದಲ ಮತ್ತು ಎರಡನೇ ಅಲೆಯಲ್ಲಿ ಸಮಸ್ಯೆ ಎದುರಿಸಲಾಗಿದೆ. ಆದ್ದರಿಂದ ಕೆಲ ಮಾರ್ಪಾಟುಗಳೊಂದಿಗೆ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ’ ಎಂದರು.

‘6 ವರ್ಷದ ಒಳಗಿನ ಮಕ್ಕಳಿಗೆ ತಾಲ್ಲೂಕಿಗೆ 30 ಹಾಸಿಗೆ, ಅದೇ ವಯೋಮಾನದ ಅಂಗವಿಕಲ ಮಕ್ಕಳಿಗೆ ತಾಲ್ಲೂಕಿಗೆ 10, 7ರಿಂದ 18 ವರ್ಷದ ಬಾಲಕರಿಗೆ 25, ಬಾಲಕಿಯರಿಗೆ 25 ಪ್ರತ್ಯೇಕ ಹಾಸಿಗೆ, ಅದೇ ವಯೋಮಾನದ ಅಂಗವಿಕಲ ಮಕ್ಕಳಿಗೆ 10 ಹಾಸಿಗೆ ಹಂಚಿಕೆ ಮಾಡಲಾಗುವುದು’ ಎಂದು ಸಭೆಗೆ ಮಾಹಿತಿ ನೀಡಿದರು.

ADVERTISEMENT

‘ಮಕ್ಕಳಿಗೆ ಕೋವಿಡ್ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ಗುರುತಿಸಿ, ಅಂಥವರಿಗೆ ಅಗತ್ಯವಿರುವ ತರಬೇತಿಯನ್ನು ಆನ್‍ಲೈನ್ ಮೂಲಕ ಈಗಿನಿಂದಲೇ ನೀಡಬೇಕಾದ ಅಗತ್ಯವಿದೆ. ಇದರಿಂದ ಚಿಕಿತ್ಸೆಯ ಸಂದರ್ಭದಲ್ಲಿ ಆಗುವ ಸಮಸ್ಯೆ ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

35 ಸಾವಿರ ವಿದ್ಯಾರ್ಥಿಗಳು

‘ಜಿಲ್ಲೆಯಾದ್ಯಂತ 155 ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿ 35 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ’ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾಹಿತಿ ನೀಡಿದರು.

‘ಕಾಲೇಜಿನ ಪ್ರಾಂಶುಪಾಲರೊಂದಿಗೆ ಮೊದಲು ಚರ್ಚಿಸಬೇಕು. ಆಯಾ ಕಾಲೇಜಿಗೆ ಹೋಗಿ ಲಸಿಕಾ ಅಭಿಯಾನ ಕೈಗೊಳ್ಳಬೇಕು. ಇದರಿಂದ ನಿಗದಿತ ಗುರಿ ಸುಲಭವಾಗಿ ತಲುಪಬಹುದು’ ಎಂದು ಕವಿತಾ ಎಸ್.ಮನ್ನಿಕೇರಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ಬಸವೇಶ್ವರ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ.ಫಾಲಾಕ್ಷಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.