ADVERTISEMENT

ಕಾರ್ಮಿಕರು ಕೆಲಸ ಮಾಡದಿದ್ದರೆ ದೇಶದ ಅಭಿವೃದ್ಧಿ ಕುಂಠಿತ: ನ್ಯಾಯಾಧೀಶೆ ಶಿಲ್ಪಾ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 14:10 IST
Last Updated 14 ನವೆಂಬರ್ 2024, 14:10 IST
ಹಿರಿಯೂರಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ಜಿ. ತಿಮ್ಮಾಪುರ ಉದ್ಘಾಟಿಸಿದರು
ಹಿರಿಯೂರಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ಜಿ. ತಿಮ್ಮಾಪುರ ಉದ್ಘಾಟಿಸಿದರು    

ಹಿರಿಯೂರು: ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವವಾದುದಾಗಿದ್ದು, ಅವರು ಕೆಲಸ ಮಾಡದಿದ್ದರೆ ದೇಶದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ಜಿ. ತಿಮ್ಮಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳು ಹಾಗೂ ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸ್ವಾತಂತ್ರ್ಯದ ನಂತರ ಜಾರಿಗೆ ತಂದ ಮೊದಲ ಎರಡು ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ನಂತರದ ಯೋಜನೆಗಳಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡಲಾಗಿದೆ. ಕಾರ್ಮಿಕರು ಇಲ್ಲದೆ ಕೈಗಾರಿಕಾ ಪ್ರಗತಿ ಸಾಧ್ಯವಿಲ್ಲ. ಹೀಗಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಕಾರ್ಮಿಕರ ಸುರಕ್ಷತೆ ಕುರಿತು ಕಾಯ್ದೆಗಳನ್ನು ರೂಪಿಸಿವೆ ಎಂದು ತಿಳಿಸಿದರು.

ADVERTISEMENT

ಸರ್ಕಾರ ವಿತರಿಸುವ ಗುರುತಿನ ಚೀಟಿಯನ್ನು ಕಾರ್ಮಿಕರು ಕಡ್ಡಾಯವಾಗಿ ಪಡೆದಿರಬೇಕು. ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವಾಗ ಅಕಸ್ಮಾತ್ ಅವಘಡಗಳು ಸಂಭವಿಸಿದರೆ ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕೆಗಳಿಂದ ನೆರವು ದೊರೆಯುತ್ತದೆ. ತಾವು ಅಸುರಕ್ಷಿತ ಎಂಬ ಭಾವನೆ ಕಾರ್ಮಿಕರಿಗೆ ಬರಬಾರದು. ಕಾರ್ಮಿಕ ಕಾಯ್ದೆಗಳ ಬಗ್ಗೆ ತಾವೂ ತಿಳಿದು, ತಮ್ಮ ಜೊತೆಯವರಿಗೂ ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕು. ಕೆಲಸ ಮಾಡುವಾಗ ತಮ್ಮ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಿಲ್ಪಾ ತಿಮ್ಮಾಪುರ ಸಲಹೆ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಚಿತ್ರಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಸ್. ಸತೀಶ್ ಕುಮಾರ್, ಕಾರ್ಮಿಕ ನಿರೀಕ್ಷಕ ಅಲ್ಲಾಭಕ್ಷ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.