ADVERTISEMENT

ತುಮರಿ ಭಾಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 7:26 IST
Last Updated 5 ಜನವರಿ 2024, 7:26 IST
ಶರಾವತಿ ಕಣಿವೆಯ ಮರಾಠಿ ಗ್ರಾಮದಲ್ಲಿರುವ ಒಂಟಿ ಮನೆಗಳು
ಶರಾವತಿ ಕಣಿವೆಯ ಮರಾಠಿ ಗ್ರಾಮದಲ್ಲಿರುವ ಒಂಟಿ ಮನೆಗಳು   

ತುಮರಿ: ಶರಾವತಿ ಹಿನ್ನೀರು ಭಾಗದ ಕರೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಕಳ್ಳತನ ಮತ್ತಿತರ ಅಪರಾಧ ಪ್ರಕರಣಗಳಿಂದ ಜನತೆ ಆಂತಕದಲ್ಲೇ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪೊಲೀಸರು ಪತ್ತೆ ಮಾಡದಿರುವುದು ನಾಗರಿಕರ ಅಸಹನೆಗೆ ಕಾರಣವಾಗಿದೆ. ಪೊಲೀಸ್ ತನಿಖೆಯ ವಿಳಂಬದ ಹಿಂದೆ ಕಾಣದ ಕೈಗಳ ಕೈವಾಡ ಇರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ನಡೆದ ವೃದ್ಧ ದಂಪತಿ ಹತ್ಯೆ ಘಟನೆ ನಡೆದು ಮೂರು ವರ್ಷಗಳೇ ಕಳೆದಿವೆ. ಈವರೆಗೂ ಹಂತಕರ ಪತ್ತೆ ಆಗಿಲ್ಲ. ಕಳೆದ ತಿಂಗಳು ಬ್ಯಾಕೋಡಿನ ಸಹಕಾರಿ ಬ್ಯಾಂಕ್ ಹಾಗೂ ಈಚೆಗೆ ಕಟ್ಟಿನಕಾರು ಸಮೀಪದ ಹಾಲೆಮನೆಯ ಜೈನ ಬಸದಿಯಲ್ಲಿ ನಡೆದ ಕಳ್ಳತನ ಪ್ರಕರಣಗಳು ದ್ವೀಪದ ಜನರಲ್ಲಿ ಭೀತಿ ಮೂಡಿಸಿವೆ. 

ADVERTISEMENT

ಬ್ಯಾಕೋಡಿನ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು ₹2 ಲಕ್ಷ ನಗದು ಕಳ್ಳನತವಾಗಿತ್ತು. ಜೈನ ಬಸದಿಯಲ್ಲಿ ಪಂಚಲೋಹದ ವಿಗ್ರಹಗಳು ಹಾಗೂ ನಗದು ಕಳ್ಳನತವಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ ಏಳೆಂಟು ಪ್ರಕರಣಗಳು ಈ ಭಾಗದಲ್ಲಿ ನಡೆದಿದ್ದರೂ, ಯಾವುದರಲ್ಲೂ ತನಿಖೆ ಪೂರ್ಣಗೊಂಡಿಲ್ಲ. 

ಈ ಎಲ್ಲ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಬಂಧಿಸುವುದಾಗಿ ನೀಡಿದ್ದ ಪೊಲೀಸರ ಭರವಸೆ ಹುಸಿಯಾಗಿದೆ. ಇಲಾಖೆಯ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಪರಮೇಶ್ವರ ಕರೂರು ವ್ಯಕ್ತಪಡಿಸಿದ್ದಾರೆ.

ಒಂಟಿಮನೆಗಳಲ್ಲಿ ಆತಂಕ: ಕಣಿವೆ ಪ್ರದೇಶದ ಭಾಗದಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ವೃದ್ಧ ದಂಪತಿ ಹತ್ಯೆ ನಡೆದಿದ್ದೂ ಒಂಟಿ ಮನೆಯಲ್ಲಿ ಎಂಬುದು ಗಮನಾರ್ಹ. ಒಂಟಿ ಮನೆ ಮೇಲೆ ದಾಳಿ ನಡೆಸುವ ದುಷ್ಕರ್ಮಿಗಳು ಯಾವುದೇ ಹೇಯ ಕೃತ್ಯ ಎಸಗಲೂ ಹಿಂಜರಿಯುವುದಿಲ್ಲ ವೃದ್ದ ದಂಪತಿ ಹತ್ಯೆಯಿಂದ ಸಾಬೀತಾಗಿದೆ ಎಂದು ಚಿಮಲೆ ಗ್ರಾಮದ ಜಯಂತ ಹೇಳಿದರು.

ಫಸಲು ರಕ್ಷಣೆಯೇ ಸವಾಲು: ಮಲೆನಾಡಿನಲ್ಲಿ ಈಗ ಅಡಿಕೆ ಕಟಾವು ಆರಂಭಿಕ ಹಂತದಲ್ಲಿದ್ದು, ಅಡಿಕೆ, ಭತ್ತ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಮನೆಯ ಎದುರು ಒಣಗಲು ಹಾಕುವುದು ಸಾಮಾನ್ಯ. ಇದನ್ನೇ ಕಾಯುತ್ತಿರುವ ಕಳ್ಳರು, ರಾತ್ರಿ ಕದಿಯುತ್ತಾರೆ. ಈ ಭಾಗದಲ್ಲಿ ಬಹುತೇಕ ಒಂಟಿ ಮನೆಗಳಲ್ಲಿ ಮಹಿಳೆಯರು, ಕೂಲಿ ಕಾರ್ಮಿಕರು ಹೆಚ್ಚಿರುವ ಕಾರಣ ಆತಂಕ ಮೂಡಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮದ ಹಿರಿಯ ಮಹಿಳೆ ಸುಶೀಲಾ ತೀವ್ರ ಬೇಸರ ವ್ಯಕ್ತಪಡಿಸಿದರು.

ಗಸ್ತು ವಾಹನಗಳು ಗ್ರಾಮೀಣ ಭಾಗದಲ್ಲಿ ಸಂಚರಿಸದೇ ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಪ ಮಾತ್ರಕ್ಕೆ ಸಂಚಾರ ನಡೆಸುತ್ತಿವೆ. ರಾತ್ರಿ ವೇಳೆ ಗ್ರಾಮೀಣ ಭಾಗದಲ್ಲೂ ಪೊಲೀಸ್ ಗಸ್ತು ವಾಹನ ಸಂಚರಿಸಿದರೆ ಕಳ್ಳತನ ತಡೆಯಬಹುದು ಎಂದು ಜನರು ಹೇಳಿದ್ದಾರೆ.

ಕೆಟ್ಟ ಕ್ಯಾಮೆರಾ: ಈ ಭಾಗದಲ್ಲಿನ ತುಮರಿ, ಬ್ಯಾಕೋಡು, ಹಾರಿಗೆ, ಸುಳ್ಳಳ್ಳಿ ಹಲವು ವೃತ್ತದಲ್ಲಿ ಆಳವಡಿಸಿರುವ ಕೆಲವು ಸಿ.ಸಿ.ಟಿವಿ ಕ್ಯಾಮೆರಾಗಳು ತಾಂತ್ರಿಕ ದೋಷದಿಂದ ಕೂಡಿದ್ದು ಇನ್ನೂ ದುರಸ್ತಿಯಾಗಿಲ್ಲ. ಹೀಗಾಗಿ ಕಳ್ಳರು  ಭಯವಿಲ್ಲದೆ ಸಲೀಸಾಗಿ ಕೃತ್ಯ ಎಸಗುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

ಕಟ್ಟಿನಕಾರು ಗ್ರಾಮದ ಹಾಲೆಮನೆ ಜೈನ ಬಸದಿಯಲ್ಲಿ ಈಚೆಗೆ ಕಳ್ಳತನ ನಡೆದಿದ್ದಾಗ ಶ್ವಾನದಳ ಪರಿಶೀಲನೆ ನಡೆಸಿತ್ತು
ಶರಾವತಿ ಎಡದಂಡೆಯ ಮರಾಠಿ ಗ್ರಾಮದ ಒಂಟಿಮನೆಗಳು
ಹಿನ್ನೀರಿನ ಒಂಟಿ ಮನೆ ವಾಸಿಗಳಿಗೆ ಭದ್ರತೆ ನೀಡುವ ಕೆಲಸ ತುರ್ತಾಗಿ ಆಗಬೇಕು. ಬ್ಯಾಕೋಡು ಪೊಲೀಸ್ ಉಪ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಶಾಸಕರು ಗಮನ ಹರಿಸಬೇಕು
ಪರಮೇಶ್ವರ ಕರೂರು ಹಿರಿಯ ಸಾಹಿತಿ
ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿದ್ದು ಶೀಘ್ರವೇ ಅಪರಾಧಿಗಳನ್ನು ಬಂಧಿಸಲಾಗುವುದು. ಈಗಾಗಲೇ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇವೆ. ಇನ್ನೂ ಕೆಲವು ಕಡೆ ಆಳವಡಿಸುವ ಚಿಂತನೆ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದಿಂದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಲಾಗುವುದು
ಹೊಳಿಬಸಪ್ಪ ಹೋಳಿ ಸಬ್ ಇನ್ಸ್‌ಪೆಕ್ಟರ್ ಕಾರ್ಗಲ್ ಪೊಲೀಸ್ ಠಾಣೆ
70 ಕಿ.ಮೀ. ದೂರದಲ್ಲಿ ಠಾಣೆ!
ಬ್ಯಾಕೋಡು ಉಪ ಪೊಲೀಸ್ ಠಾಣೆ ಕಟ್ಟಡವನ್ನು ತೆರವುಗೊಳಿಸಿ ವರ್ಷಗಳೇ ಕಳೆದರೂ ನೂತನ ಕಟ್ಟಡ ನಿರ್ಮಾಣವಾಗಿಲ್ಲ. ಸದ್ಯ ಶಾಲಾ ಅವರಣದ ಚಿಕ್ಕ ಕೊಠಡಿಯಲ್ಲಿ ತೆರೆದಿರುವ ಉಪ ಠಾಣೆ ಇದ್ದೂ ಇಲ್ಲದಂತಿದೆ. ಇದನ್ನು ಹೊರತುಪಡಿಸಿದರೆ ದೂರು ದಾಖಲಿಸಲು 70 ಕಿಲೋ ಮೀಟರ್ ದೂರದ ಕಾರ್ಗಲ್ ಪೋಲಿಸ್ ಠಾಣೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಒಂದೂವರೆ ದಶಕದಿಂದ ಠಾಣೆ ಮೇಲ್ದರ್ಜೆಗೇರಿಸುವ ಬೇಡಿಕೆ ಈಡೇರಿಲ್ಲ. ಸಿಗಂದೂರು ದೇವಸ್ಥಾನ ಹೊಳೆಬಾಗಿಲು ಪ್ರವಾಸಿಗರ ದೃಷ್ಟಿಯಿಂದ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯವಿದೆ ಎಂಬುದು ಜನರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.