ಚಿತ್ರದುರ್ಗ: ಭಾರತ ಎಂದಾಕ್ಷಣ ಥಟ್ ಅಂತ ಸ್ಮೃತಿಪಟಲದ ಮುಂದೆ ಹಾಜರಾಗುವುದು ಇಂಡಿಯಾ ಗೇಟ್, ಹುಲಿ ಸೇರಿದಂತೆ ವೈಭವದ ಬಿಡಿಬಿಡಿ ಚಿತ್ರಣ. ಭವ್ಯ ಭಾರತದ ಪರಿಕಲ್ಪನೆಯನ್ನು ಶ್ವೇತ ವರ್ಣದ ಕ್ಯಾನ್ವಾಸ್ ಮೇಲೆ ಹಿಡಿದಿಟ್ಟು ಭಾರತೀಯರಿಗೆ ಹೆಮ್ಮೆಯಿಂದ ಅರ್ಪಿಸಲು ಸಜ್ಜಾಗಿದ್ದಾರೆ ಚಿತ್ರ ಕಲಾವಿದ ಕ್ರಿಯೇಟಿವ್ ವೀರೇಶ್ ಎಂದೇ ಖ್ಯಾತಿಗಳಿಸಿರುವ ಟಿ.ಎಂ.ವೀರೇಶ್.
ನಗರದ ‘ಕ್ರಿಯೇಟಿವ್ ಆರ್ಟ್ ಗ್ಯಾಲರಿ’ಯಲ್ಲಿ ಕಳೆದ 15 ದಿನಗಳಿಂದ ಸದ್ದಿಲ್ಲದೆ ವೃತ್ತಾಕಾರದ ಸಂಯೋಜನೆಯಲ್ಲಿ ಮೂರ್ತ ರೂಪ ಪಡೆಯುತ್ತಿದೆ. ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ 18 ಅಂಶಗಳು ಒಂದೇ ಕ್ಯಾನ್ವಾಸ್ ಮೇಲೆ ಮೂಡಿ ಬಂದಿರುವುದು ಇದರ ವಿಶೇಷ.
ಪ್ರತಿ ದೇಶವು ತನ್ನದೇ ಆದ ಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ ಹೊಂದಿರುತ್ತದೆ. ರಾಷ್ಟ್ರದ ಪರಂಪರೆ, ಮಹತ್ವ, ಜೀವಾಳ, ಅಂತರಂಗ, ಅಂತಃಸತ್ವಗಳನ್ನು ಬಿಂಬಿಸುವಂತಹ ರಾಷ್ಟ್ರೀಯ ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿಹ್ನೆಗಳನ್ನು ಬಹು ಎಚ್ಚರಿಕೆ ಹಾಗೂ ವಿವೇಚನೆಯಿಂದ ಆಯ್ಕೆ ಮಾಡಲಾಗಿರುತ್ತದೆ. ಇವು ಒಂದು ದೇಶದ ಹೆಮ್ಮೆಯ ಪ್ರತೀಕ ಕೂಡ.
ಸಾಮಾನ್ಯವಾಗಿ ಚಿಹ್ನೆಗಳನ್ನು ಪ್ರತ್ಯೇಕವಾಗಿ ನೋಡಿರುತ್ತೇವೆ. ಆದರೆ ‘ನನ್ನ ದೇಶ’ ಕಲಾಕೃತಿ ಎಲ್ಲವನ್ನೂ ಒಂದೇ ಕಣ್ಣೋಟಕ್ಕೆ ತಂದಿಡುವ ಮೂಲಕ ಒಂದು ದೇಶ ಒಂದು ಚಿತ್ರವನ್ನು ಸಾಧ್ಯವಾಗಿಸಿದೆ. 6 ಅಡಿ ಎತ್ತರ 8 ಅಡಿ ಅಗಲದ ಲೆನಿನ್ ಕ್ಯಾನ್ವಾಸ್‌ನಲ್ಲಿ ಅರ್ಕಾಲಿಕ್ ಮಾಧ್ಯಮದಲ್ಲಿ ಕಲಾಕೃತಿ ಮೂಡಿ ಬಂದಿದೆ. ಹಳದಿ, ಕಿತ್ತಳೆ, ನೀಲಿ, ಲ್ಯಾವೆಂಡರ್, ಬಿಳಿ, ಕೇಸರಿ, ಕಪ್ಪು ಬಣ್ಣಗಳು ಕುಂಚದ ಬೀಸುಗಳಿಂದ ವೈಭವ ಸೃಷ್ಟಿಸಿವೆ.
ವಿಶ್ವದ ಮೂರನೇ ಅತಿ ಎತ್ತರದ ಶಿಖರ ಕಾಂಚನಜುಂಗಾ, ಕಾಶಿಯ ವೈಭವ, ಗಂಗಾ ನದಿ ಹರಿವು, ಡಾಲ್ಫಿನ್‌ಗಳ ಚಿನ್ನಾಟ, ಉತ್ಕೃಷ್ಟವಾಗಿ ನಳನಳಿಸುವ ಕಮಲ, ಭವ್ಯತೆ ಸಾರುವ ಇಂಡಿಯಾ ಗೇಟ್, ರಕ್ಕೆ ಬಿಚ್ಚಿ ಹಾರಲು ಸಿದ್ಧವಾಗಿರುವ ನವಿಲು, ವಿಜಯದ ನಗೆಯ ಹೊಸ್ತಿಲಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್, ಗರ್ಜಿಸುತ್ತಾ ಜಿಗಿಯುತ್ತಿರುವ ಹುಲಿ, ಶುಶ್ರಾವ್ಯ ಸಂಗೀತ ಹೊರ ಹೊಮ್ಮಿಸುವ ವೀಣೆ, ಹೆಮ್ಮಯ ತ್ರಿವರ್ಣ ಧ್ವಜವನ್ನು ಸೊಂಡಿಲಿನಲ್ಲಿ ಎತ್ತಿ ಹಿಡಿದಿರುವ ಗಜರಾಜ, ಇದರ ಕಾಲಿಗೆ ಜೋತು ಬಿದ್ದಿರುವ ಹಣ್ಣಿನ ರಾಜ ಮಾವು, ತಂಗಾಳಿ ಬೀಸುವ ಅರಳಿ ಮರ, ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹದ ರಾಷ್ಟ್ರ ಲಾಂಛನ, ಗಾಂಭೀರ್ಯದ ಕಿಂಗ್ ಕೋಬ್ರಾ, ಸಾರೋಟಿನ ಕಡಾಣಿಯಾಗಿರುವ ಭಾರತದ ರೂಪಾಯಿ ಒಂದೊಂದು ಸನ್ನಿವೇಶವನ್ನು ತೆರೆದಿಡುತ್ತಿವೆ.
ವಂದೇ ಮಾತರಂ, ಜನಗಣಮನ ಮೊಳಗಿಸುತ್ತಾ ಗಂಗಾನದಿಯಲ್ಲಿ ಮುನ್ನುಗುತ್ತಿರುವ ಅಶ್ವದ ಬಿರುಸು ಎದೆ ಝಲ್ಲೆನಿಸುವಂತಿದೆ. ಇಷ್ಟೆಲ್ಲ ಅಂಶಗಳನ್ನು ಬಣ್ಣದ ಲಹರಿಯಲ್ಲಿ ಚಿತ್ರಿಸಿ ಏಕರೂಪ ನೀಡಿರುವುದು ವೀರೇಶ್ ಅವರ ಸಾಧನೆ.
‘ಮಾರ್ಚ್ ತಿಂಗಳ ಅಂತ್ಯದಲ್ಲಿ ಎಂದಿನಂತೆ ತಿಮ್ಮಣ್ಣನಾಯಕನ ಕೆರೆ ಏರಿ ಮೇಲೆ ಮುಂಜಾನೆ ವಾಯವಿಹಾರ ಮುಗಿಸಿ ಕೋಡಿ ಆಂಜನೇಯಸ್ವಾಮಿ ದೇವಸ್ಥಾನದ ಅರಳಿಮರದ ಕೆಳಗೆ ಧ್ಯಾನಸ್ಥನಾದೆ. ಅರಳಿಮರದ ಒಂದು ಎಲೆ ಬೆರಳನ್ನು ಸ್ಪರ್ಶಿಸುತ್ತಿದ್ದಂತೆ ನವಿಲಿನ ನಿನಾದ ಕೇಳಿತು. ಆ ಭವ್ಯ ಕ್ಷಣವೇ ‘ನನ್ನ ದೇಶ’ದ ಹುಟ್ಟಿಗೆ ಕಾರಣ’ ಎಂದು ಚಿತ್ರದ ಪರಿಕಲ್ಪನೆ ಹುಟ್ಟಿದ ಕುರಿತು ವೀರೇಶ್ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.
‘ಈ ಪರಿಕಲ್ಪನೆಗೆ ಜೀವ ತುಂಬಲು ನಾಲ್ಕು ತಿಂಗಳು ನಿರಂತರ ಅಧ್ಯಯನ ನಡೆಸಿದೆ. ಈ ಹಿಂದೆ ಸಾವಿರಾರು ಕಲಾಕೃತಿ ರಚಿಸಿದ್ದರೂ ಹೊಸ ಕಲಾವಿದನಂತೆ ಗೆರೆ ಎಳೆದೆ. ಜೂನ್ 12ರ ಮುಂಜಾನೆ ಮನದಲ್ಲಿ ಭಾರತಾಂಬೆ ನೆನೆದು, ಕ್ಯಾನ್ವಾಸ್ ಹಿಡಿದು ನಿಂತೆ. ಮೂರೇ ದಿನದಲ್ಲಿ ಒಂದು ರೂಪ ಪಡೆಯಿತು’ ಎಂದರು.
ಸ್ವಾತಂತ್ರ ದಿನಾಚರಣೆ ದಿನದಂದು ಭವ್ಯ ಭಾರತದ ‘ನನ್ನ ದೇಶ’ ಕಲಾಕೃತಿ ದೇಶಕ್ಕೆ ಅರ್ಪಣೆಯಾಗಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರದ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ 18 ಅಂಶಗಳನ್ನು ಒಟ್ಟಾಗಿಸಿ ಸುಂದರ ಸನ್ನಿವೇಶ ಸೃಷ್ಟಿಸಲಾಗಿದೆ. ರಾಷ್ಟ್ರದ ಚಿತ್ರಕಲಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಆರ್ಟ್.ಕ್ರಿಯೇಟಿವ್ ವೀರೇಶ್, ಚಿತ್ರ ಕಲಾವಿದ
‘ನನ್ನ ದೇಶ’ ಕಲಾಕೃತಿಗೆ ಸಂಗೀತ ಸ್ಪರ್ಶ ನೀಡಲು ಕ್ರಿಯೇಟಿವ್ ವೀರೇಶ್ ಸಿದ್ದತೆ ನಡೆಸಿದ್ದು ಈಗಾಗಲೇ 2.45 ನಿಮಿಷದ ಹಾಡು ಸಿದ್ದವಾಗುತ್ತಿದೆ. ಪ್ರದೀಪ್ ಚಂದ್ರ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಹಾಡನ್ನು ಕೇಳುತ್ತಾ ಕಲಾಕೃತಿಯ ಮೇಕಿಂಗ್ ವಿಡಿಯೊವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ ಎಂದು ಕ್ರಿಯೇಟಿವ್ ವೀರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.