ನಾಯಕನಹಟ್ಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ತೆರೆಯಲು ಸರ್ಕಾರದ ಆದೇಶವಿದ್ದರೂ ಮಳಿಗೆ ತೆರೆಯಲು ಗುತ್ತಿಗೆದಾರರು ವಿಳಂಬನೀತಿ ಅನುಸರಿಸುತ್ತಿದ್ದಾರೆ.
ನಾಯಕನಹಟ್ಟಿ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು, ಸುಮಾರು 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಹೋಬಳಿಯು ದಶಕದಿಂದ ನಿರಂತರ ಬರಗಾಲದಿಂದ ತತ್ತರಿಸಿ ಹೋಗಿದೆ. ಈ ಭಾಗದ ಜನರ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದೆ. ಇಲ್ಲಿನ ಜನರ ಆರೋಗ್ಯ ಸಮಸ್ಯೆಗಳಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವೇ ಆಸರೆ.
ನಾಯಕನಹಟ್ಟಿ ಹೋಬಳಿಯು ಜಿಲ್ಲಾ ಆಸ್ಪತ್ರೆಯಿಂದ 35 ಕಿ.ಮೀ ದೂರದಲ್ಲಿದ್ದು, ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಗೆ ತೆರಳಲು ಹರಸಾಹಸ ಪಡುತ್ತಾರೆ. ಆದ್ದರಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ವಾರ್ಡ್‌ಗಳ ವ್ಯವಸ್ಥೆ, ಪ್ರಯೋಗಾಲಯ, ಎಕ್ಸ್‌ರೇ, ಇಸಿಜಿ ಸೇರಿದಂತೆ ಅತ್ಯಾಧುನಿಕ ಸಲಕರಣೆಗಳನ್ನು ಅಲವಡಿಸಲಾಗಿದೆ.
‘ಇಲ್ಲಿನ ಆರೋಗ್ಯ ಕೇಂದ್ರಕ್ಕೆ ನಿತ್ಯ ನೂರಾರು ರೋಗಿಗಳು ಎಡತಾಕುತ್ತಾರೆ. ಅವರಿಗೆ ರಿಯಾಯಿತಿ ದರದಲ್ಲಿ ಔಷಧ ದೊರೆಯಲು ಜನರಿಕ್ ಔಷಧ ಮಳಿಗೆ ಅಗತ್ಯವಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಟಿ.ಬಸಣ್ಣ, ಎನ್.ಐ.ಮಹಮ್ಮದ್ ಮನ್ಸೂರ್ ಒತ್ತಾಯಿಸುತ್ತಾರೆ.
‘ಜನೌಷಧ ಕೇಂದ್ರ ತೆರೆಯಲು ಸಾರ್ವಜನಿಕರು 2020ರ ಜನವರಿಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಸಚಿವರು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜನೌಷಧ ಮಳಿಗೆ ತೆರೆಯಲು ಸೂಚಿಸಿದ್ದರು. ಅದರಂತೆ ಜಿಲ್ಲಾ ಆರೋಗ್ಯಾಧಿಕಾರಿ 2020ರ ಜೂನ್ ತಿಂಗಳಲ್ಲಿ ಮಳಿಗೆ ತೆರೆಯಲು ಕೊಠಡಿ ನೀಡುವಂತೆ ಸೂಚಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೊಠಡಿಯನ್ನು ಸಹ ನೀಡಲಾಗಿದೆ. ಆದರೆ, 6 ತಿಂಗಳು ಕಳೆದರೂ ಮಳಿಗೆ ತೆರೆಯಲು ಗುತ್ತಿಗೆ ಪಡೆದ ವ್ಯಕ್ತಿಗಳು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಹೋಬಳಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.