ADVERTISEMENT

ಗತವೈಭವ ಅರಿಯಲು ‘ಜ್ಯೋತಿ ರಥಯಾತ್ರೆ’ ಸಹಕಾರಿ: ಗೋಪಾಲಕೃಷ್ಣ

ರಥಯಾತ್ರೆಗೆ ಪೂರ್ಣಕುಂಭಗಳ ಅದ್ದೂರಿ ಸ್ವಾಗತ ಕೋರಿದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 13:34 IST
Last Updated 11 ಜುಲೈ 2024, 13:34 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇಗುಲದ ಮುಂಭಾಗದಲ್ಲಿ ಗುರುವಾರ ಶಾಸಕ ಎನ್.ವೈ.ಗೋಪಾಲಕೃಷ್ಣ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಹಸಿರು ನಿಶಾನೆ ತೋರಿದರು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇಗುಲದ ಮುಂಭಾಗದಲ್ಲಿ ಗುರುವಾರ ಶಾಸಕ ಎನ್.ವೈ.ಗೋಪಾಲಕೃಷ್ಣ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಹಸಿರು ನಿಶಾನೆ ತೋರಿದರು.   

ನಾಯಕನಹಟ್ಟಿ: ಕರ್ನಾಟಕ ಜ್ಯೋತಿ ರಥಯಾತ್ರೆಯ ಸಂಚಾರ ಪಟ್ಟಣದಲ್ಲಿರುವ ಸಾವಿರಾರು ಶಾಲಾ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು– ನುಡಿ, ಇತಿಹಾಸ ಗತವೈಭವವನ್ನು ತಿಳಿಯಲು ಸಹಕಾರಿಯಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇಗುಲದ ಮುಂಭಾಗ ಗುರುವಾರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಅದ್ದೂರಿಯಾಗಿ ನಡೆದ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮತ್ತು ಯುವಜನರಲ್ಲಿ ನಮ್ಮ ರಾಜ್ಯದ ನೆಲ, ಜಲ, ಭಾಷೆ, ಗಡಿ, ಕರ್ನಾಟಕದ ಗತ ವೈಭವದ ಇತಿಹಾಸದ ಜ್ಞಾನ ಕಡಿಮೆಯಾಗುತ್ತಿದೆ. ಕನ್ನಡ ನಾಡು ದೇಶದಲ್ಲಿಯೇ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಜ್ಯವಾಗಿದ್ದು, ಇಲ್ಲಿನ ಗತೈಭವವನ್ನು ಅರಿತುಕೊಳ್ಳಲು ಕರ್ನಾಟಕ ಜ್ಯೋತಿ ರಥಯಾತ್ರೆಯು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಈ ರಥಯಾತ್ರೆಯಿಂದ ಮಕ್ಕಳಲ್ಲಿ ಇಂದು ಹಬ್ಬದ ಸಂಭ್ರಮ ಮನೆಮಾಡಿದ್ದು, ಕರ್ನಾಟಕದ ದರ್ಶನವೇ ಸಿಗುತ್ತಿದೆ. ‘ಮೈಸೂರು’ ಎಂಬ ಹೆಸರಿನಿಂದ ‘ಕರ್ನಾಟಕ’ ಎಂದು ಬದಲಾಗಿ ಪ್ರಸಕ್ತ ವರ್ಷಕ್ಕೆ 50 ವತಂತ ತುಂಬಿವೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಅಪರೂಪದ ರಥಯಾತ್ರೆಯಾಗಿದ್ದು, ಕನ್ನಡಿಗರೆಲ್ಲರೂ ಹೆಮ್ಮೆಪಡುವ ಮತ್ತು ಸಂಭ್ರಮಿಸುವ ಕಾರ್ಯಕ್ರಮವಾಗಿದೆ’ ಎಂದರು.

ಕರ್ನಾಟಕ ಜ್ಯೋತಿ ರಥಯಾತ್ರೆಯು ಗುರುವಾರ ಬೆಳಿಗ್ಗೆ ಚಿತ್ರದುರ್ಗದಿಂದ 11 ಗಂಟೆಗೆ ಹೋಬಳಿಯ ಗಡಿ ಗ್ರಾಮವಾದ ನೆಲಗೇತನಹಟ್ಟಿಗೆ ಆಗಮಿಸಿತು. ಅಲ್ಲಿಗೆ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಶಿಷ್ಠಾಚಾರದ ಪ್ರಕಾರ ರಥಯಾತ್ರೆ ವಾಹನವನ್ನು ಬರಮಾಡಿಕೊಂಡರು. ನಂತರ ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇಗುಲದ ಆವರಣದಲ್ಲಿ ರಥಯಾತ್ರೆಗೆ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪೂರ್ಣಕುಂಭ ಸ್ವಾಗತ ಕೋರಿದರು.

ನಂತರ ರಥಯಾತ್ರೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹಟ್ಟಿಮಲ್ಲಪ್ಪನಾಯಕ ವೃತ್ತ, ತೇರುಬೀದಿ, ವಾಲ್ಮೀಕಿ ವೃತ್ತ, ಬಸ್‌ ನಿಲ್ದಾಣ, ಪಾದಗಟ್ಟೆ, ಜೆ.ಸಿ.ರಸ್ತೆ, ಅಂಬೇಡ್ಕರ್ ವೃತ್ತ, ನಾಗರಕಟ್ಟೆಗೆ ರಥಯಾತ್ರೆ ಸಾಗಿತು. ದಾರಿಯುದ್ದಕ್ಕೂ ಪಟ್ಟಣದ ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯ ಕಳೆ ಹೆಚ್ಚಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಹಶೀಲ್ದಾರ್ ರೇಹಾನ್‌ಪಾಷಾ, ಮುಖ್ಯಾಧಿಕಾರಿ ಪಿ.ಪಾಲಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ತಾಲ್ಲೂಕು ಸಿಡಿಪಿಒ ಹರಿಪ್ರಸಾದ್, ಉಪ ತಹಶೀಲ್ದಾರ್ ಬಿ.ಶಕುಂತಲಾ, ಕಂದಾಯ ನಿರೀಕ್ಷಕ ಚೇತನ್‌ಕುಮಾರ್, ಬೆಸ್ಕಾಂ ಶಾಖಾಧಿಕಾರಿ ಎನ್.ಬಿ.ಬೋರಣ್ಣ ಇದ್ದರು.

ನಾಯಕನಹಟ್ಟಿ ಪಟ್ಟಣಕ್ಕೆ ಗುರುವಾರ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಂಡ ಜನಸ್ಥೋಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.