ಹೊಸದುರ್ಗ: ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಜ. 7ರಂದು ಬೆಳಿಗ್ಗೆ 10.30ಕ್ಕೆ ‘ಕನಕಮಾರ್ಗ’ ಚಲನಚಿತ್ರ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಚಲನಚಿತ್ರ ವೀಕ್ಷಿಸಬಹುದು ಎಂದು ಕನಕಮಾರ್ಗ ಚಲನಚಿತ್ರ ನಿರ್ದೇಶಕ ವಿಶಾಲ್ ರಾಜ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಲನಚಿತ್ರದಲ್ಲಿ ಶಾಲಾ ವಿದ್ಯಾರ್ಥಿಗಳ ನಟನೆ ಅದ್ಭುತವಾಗಿದೆ. ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ಹಲವರ ನಟನೆಯನ್ನು ಇಲ್ಲಿ ಕಾಣಬಹುದು. ಚಿತ್ರೀಕರಣ ಕಾಗಿನೆಲೆ, ಬಾಡಾ, ಬೆಂಗಳೂರು ಮತ್ತು ಹಾವೇರಿಗಳಲ್ಲಿ ನಡೆಸಲಾಗಿದೆ. ಭಕ್ತ ಕನಕದಾಸ ಚಿತ್ರಕ್ಕಿಂತ ಇದು ಭಿನ್ನವಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಕನಕದಾಸರನ್ನು ಪಠ್ಯಕ್ಕೆ ಅಥವಾ ಒಂದು ಜಾತಿಗೆ ಸೀಮಿತಗೊಳಿಸಬಾರದು. ಕನಕದಾಸರ ಬಗ್ಗೆ ಹಲವು ನೈಜತೆಗಳನ್ನು ಚಲನಚಿತ್ರ ಬಿಂಬಿಸುತ್ತದೆ. ಹಲವಾರು ಜನರ ಬದಲಾವಣೆಗೂ ಈ ಚಲನಚಿತ್ರ ಕಾರಣವಾಗಿದೆ. ಸಂಪೂರ್ಣ ಮಕ್ಕಳೇ ಅಭಿನಯಿಸಿರುವ ಚಲನಚಿತ್ರ ತನ್ನದೇ ವಿಶೇಷತೆ ಹೊಂದಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್, ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಆಯ್ಕೆಯಾಗಿ ಅದ್ದೂರಿ ಪ್ರದರ್ಶನ ಕಂಡಿದೆ ಎಂದು ಹೇಳಿದರು.
ಕೆಂಪೇಗೌಡ ಪಾಟೀಲ್ ಅವರು ನಿರ್ಮಾಪಕರಾಗಿದ್ದು, ಚಲನಚಿತ್ರ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಹೆಚ್ಚಾಗಿ ವಿದ್ಯಾರ್ಥಿಗಳು ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು.
ಅಂದಿನ ಕಾರ್ಯಕ್ರಮವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸುವರು. ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮಾಜದ ಹಲವು ಗಣ್ಯರು ಭಾಗವಹಿಸುವರು. ಚಲನಚಿತ್ರ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.