ಚಿತ್ರದುರ್ಗ: ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಅದು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಆದರೆ, ಮೊಬೈಲ್ ಮಾತ್ರ ತಲೆ ತಗ್ಗುವಂತೆ ಮಾಡುತ್ತದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ತಿಳಿಸಿದರು.
ನಗರದ ಜ್ಞಾನ ಭಾರತಿ ವಿದ್ಯಾಮಂದಿರದ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬೌದ್ಧಿಕ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮನಸ್ಸು ಚಂಚಲಗೊಳ್ಳಲು ಇಂದು ಅನೇಕ ಸಾಧನಗಳಿವೆ. ಅದರಲ್ಲಿ ಮೊಬೈಲ್ ಸಹ ಒಂದು. ಇದು ನಮ್ಮ ನೆನಪಿನ ಶಕ್ತಿಯನ್ನು ಕುಂದಿಸುತ್ತದೆ. ಆದ್ದರಿಂದ ಇದರ ಬಳಕೆಯಲ್ಲಿ ಎಚ್ಚರ ವಹಿಸಬೇಕು’ ಎಂದರು.
‘ನಾವು ಗುರುವಿನಿಂದ ವಿದ್ಯೆ ಎಂಬ ಭಿಕ್ಷೆಯನ್ನು ಬೇಡುತ್ತಿದ್ದೇವೆ. ಹಿಂದೆ ಗುರು, ಮುಂದೆ ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ. ಹಾಗಾಗಿ ಗುರುವಿನ ಅನುಗ್ರಹ ಸದಾ ಇರಬೇಕು’ ಎಂದು ತಿಳಿಸಿದರು.
‘ನಾವು ಯಂತ್ರ ಮಾನವರಾಗದೆ ಮಂತ್ರ ಮಾನವರಾಗಬೇಕು. ಮನುಷ್ಯ ಮನುಷ್ಯರ ನಡುವೆ ಪ್ರೀತಿ, ಅಂತಃಕರಣ, ಸೌಹಾರ್ದತೆ ಬೆಳೆಯಬೇಕು. ಭಾರತೀಯರೆಂಬ ಭಾವನೆ ಸಮಾಜದಲ್ಲಿ ಬರುವಂತೆ ಶಿಕ್ಷಿತರಾಗಬೇಕು. ಬ್ರಹ್ಮರಾಕ್ಷಸ ಮೊಬೈಲ್ ಅನ್ನು ಬಿಟ್ಟು ಜವಾಬ್ದಾರಿಯುತವಾದ ಪ್ರಜೆಗಳಾಗಿ’ ಎಂದು ಕಿವಿ ಮಾತು ಹೇಳೀದರು.
ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿರಬೇಕು ಎಂಬುದಕ್ಕೆ ಚಿನ್ನಾರಿಮುತ್ತ ಸಿನಿಮಾ ಕತೆಯನ್ನು ಹೇಳಿದರು. ಯಾವುದನ್ನು ಅರಿಯಬೇಕು ಹೇಗೆ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು.
ಶಾಲೆ ಕಾರ್ಯದರ್ಶಿ ರಾಜೀವಲೋಚನ, ಪ್ರಾಂಶುಪಾಲ ಬಿ.ಎಂ.ಪ್ರಜ್ವಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.