ADVERTISEMENT

ಚಿತ್ರದುರ್ಗ | ಫೆ. 2, 3ರಂದು ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 5:45 IST
Last Updated 27 ಜನವರಿ 2024, 5:45 IST
ಸಾಹಿತ್ಯ ಸಮ್ಮೇಳನದ ಲೋಗೊ
ಸಾಹಿತ್ಯ ಸಮ್ಮೇಳನದ ಲೋಗೊ   

ಚಿತ್ರದುರ್ಗ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಫೆ. 2 ಮತ್ತು 3ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.

‘ರಾಜ್ಯದಲ್ಲಿಯೇ ಇದೊಂದು ವಿನೂತನ ಪ್ರಯತ್ನ. ಭೌಗೋಳಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾಮ್ಯತೆ ಮತ್ತು ಭಿನ್ನತೆ ಹೊಂದಿರುವ ಎರಡು ಜಿಲ್ಲೆಗಳು ಒಂದೆಡೆ ಸಮ್ಮೇಳನ ನಡೆಸುತ್ತಿರುವುದು ಇದೇ ಮೊದಲು. ಎರಡು ಜಿಲ್ಲೆಯ ಬಾಂಧವ್ಯ ವೃದ್ಧಿಗೆ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ಸಮ್ಮೇಳನ ನೆರವಾಗಲಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಡಿ. 30 ಮತ್ತು 31ಕ್ಕೆ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿನಾಂಕ ಹೊಂದಾಣಿಕೆ ಆಗದ ಕಾರಣಕ್ಕೆ ಫೆಬ್ರುವರಿಗೆ ಮುಂದೂಡಲಾಯಿತು. ಸಮ್ಮೇಳನಕ್ಕೆ ಬರಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಶಾಸಕ ಬಸವರಾಜ ಬೊಮ್ಮಾಯಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಸಾಹಿತಿ ಗೋ.ರು.ಚನ್ನಬಸಪ್ಪ ಅವರು ಫೆ. 2ರಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ‘ಬೆಳಕಿನೆಡೆಗೆ’ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ವಿವರಿಸಿದರು.

‘ಕವಿಗೋಷ್ಠಿಗೆ 15 ಜನರನ್ನು ಆಯ್ಕೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ 9 ಹಾಗೂ ಚಿತ್ರದುರ್ಗ ಜಿಲ್ಲೆಯ 6 ಕವಿಗಳು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮೇಳನಾಧ್ಯಕ್ಷರ ಜೊತೆಗೆ ಸಂವಾದ ಹಾಗೂ ಬಹಿರಂಗ ಅಧಿವೇಶನ ನಡೆಯಲಿವೆ. ರಾಜ್ಯದ ವಿವಿಧೆಡೆಯಿಂದ ಸಾಹಿತಿಗಳು, ವಿದ್ವಾಂಸರು ಹಾಗೂ ರಾಜಕಾರಣಿಗಳು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ’ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಕೋಶಾಧ್ಯಕ್ಷ ಆರ್‌.ಮಲ್ಲಿಕಾರ್ಜುನಯ್ಯ, ಕೆ.ಪಿ.ಎಂ.ಗಣೇಶಯ್ಯ, ಎಚ್‌.ಆರ್‌.ಚಂದ್ರಪ್ಪ, ಶ್ರೀನಿವಾಸ್‌ ಮಳಲಿ ಇದ್ದರು.

4 ಸಾವಿರ ಪ್ರತಿನಿಧಿಗಳ ನಿರೀಕ್ಷೆ

ಸಮ್ಮೇಳನಕ್ಕೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ನಾಲ್ಕು ಸಾವಿರ ಸಾಹಿತ್ಯಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸೂರಿ ಶ್ರೀನಿವಾಸ್‌ ತಿಳಿಸಿದರು. ‘ಪ್ರತಿನಿಧಿಗಳಿಗೆ ₹ 300 ಶುಲ್ಕ ನಿಗದಿಪಡಿಸಲಾಗಿದೆ. ಊಟ ವಸತಿ ಸೌಲಭ್ಯ ಕಲ್ಪಿಸಿ ಕಿಟ್‌ ನೀಡಲಾಗುತ್ತದೆ. ಶಿಕ್ಷಕರಿಗೆ ಒಒಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಾಲ್ವರಿಗೆ ‘ಸಾಹಿತ್ಯ ಸಿರಿ’ ಹಾಗೂ 17 ಜನರಿಗೆ ‘ಕನ್ನಡ ಸಿರಿ’ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಸಾಹಿತ್ಯ ಮತ್ತು ಇತಿಹಾಸ ಮಠಗಳ ಕೊಡುಗೆ ರಂಗಭೂಮಿ ಸಾಂಸ್ಕೃತಿಕ ರಾಜಕಾರಣ ವಚನ ಸಾಹಿತ್ಯ ಪುಸ್ತಕ ಸಂಸ್ಕೃತಿ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಕೆ.ಎಂ.ಶಿವಸ್ವಾಮಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಸಾಹಿತ್ಯ ಸಮ್ಮೇಳನದ ಲೋಗೊ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.