ಚಳ್ಳಕೆರೆ: ನಗರದ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿ ಸೈಯದ್ ಫಯಾಜ್ ಕೆ. ಅವರು ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ 593 (ಶೇ 98.83) ಅಂಕ ಗಳಿಸಿ ಮೂರು ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇಲ್ಲಿನ ಗಾಂಧಿನಗರದ ಆಟೊ ಚಾಲಕ ಖದ್ದುಸ್ ಅವರ ಮಗ ಸೈಯದ್ ಫಯಾಜ್ ಈ ಸಾಧನೆ ಮಾಡಿದ್ದಾರೆ.
‘ತಂದೆ ಆಟೊ ಓಡಿಸಲು ದಿನವೂ ಬೆಳಿಗ್ಗೆ 4.30ಕ್ಕೆ ಹೋಗಿ ರಾತ್ರಿ 9.30ಕ್ಕೆ ಮನೆಗೆ ಬರುತ್ತಿದ್ದರು. ದಿನವೆಲ್ಲ ಆಟೊ ಓಡಿಸಿ ₹ 300ರಿಂದ ₹ 400 ತರುತಿದ್ದರು. ಇದರಿಂದ ಜೀವನ ಎಷ್ಟು ಕಷ್ಟ ಎಂದು ಅರಿತಿರುವೆ. ಹೀಗಾಗಿ, ಚನ್ನಾಗಿ ಓದಬೇಕು ಎಂದೆನಿಸಿತು. ತುಮಕೂರಿನಲ್ಲಿ ಎಂಜಿನಿಯರ್ ಪದವಿ ಓದುತ್ತಿರುವ ಅಕ್ಕ ಸಾನಿಯಾ ಮತ್ತು ತಾಯಿ ಇಬ್ಬರು ಆಗಾಗ್ಗೆ ನನಗೆ ನೀಡುತ್ತಿದ್ದ ಸಲಹೆ, ಮಾರ್ಗದರ್ಶದಿಂದ ಶ್ರದ್ಧೆಯಿಂದ ಓದಲು ಸಾಧ್ಯವಾಯಿತು’ ಎಂದು ಸೈಯದ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.
‘ಅಲ್ಲದೇ ಕಾಲೇಜಿನಲ್ಲಿ ಪ್ರತಿ ದಿನ ಸಂಜೆ 4.30ರಿಂದ 6.30ರವರೆಗೆ ಉಪನ್ಯಾಸಕರು ವಿಶೇಷ ತರಗತಿ ತೆಗೆದುಕೊಂಡು ಅವರು ನೀಡುತ್ತಿದ್ದ ಬೋಧನೆಯನ್ನು ಆಸಕ್ತಿಯಿಂದ ಆಲಿಸುವುದಲ್ಲದೇ ಅತಿ ಮುಖ್ಯ ಎನಿಸಿದ್ದನ್ನು ಟಿಪ್ಪಣಿ ರೂಪದಲ್ಲಿ ಬರೆದುಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಕೇಳಿದ ಪಾಠವನ್ನು ಪ್ರತಿ ದಿನ ತಪ್ಪದೇ ಮನನ ಮಾಡಿಕೊಂಡು ಮಲಗುತ್ತಿದ್ದೆ. ಪರೀಕ್ಷೆ ಹತ್ತಿರ ಬಂದರೂ ನನ್ನಲ್ಲಿ ಒಂದಿಷ್ಟು ಭಯ ಇರಲಿಲ್ಲ. ಆತ್ಮವಿಶ್ವಾಸ ಇತ್ತು. ಹಾಗಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆಯಲು ಸಾಧ್ಯವಾಯಿತು’ ಎಂದು ಖುಷಿ ಹಂಚಿಕೊಂಡರು.
‘ಮುಂದೆ ಬಿಸಿಎ ಓದಿದ ನಂತರ ಸಿಎ ಪದವಿ ಪಡೆದು ಉನ್ನತ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ವಿದ್ಯಾರ್ಥಿ ಸೈಯದ್ ಫಯಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.