ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾದ ಕಾಂಗ್ರೆಸ್‌ನ ಟಿ.ರಘುಮೂರ್ತಿ ಅವರ ಹ್ಯಾಟ್ರಿಕ್ ಗೆಲುವಿಗೆ ಕಡಿವಾಣ ಹಾಕಲು ಬಿಜೆಪಿ ಹಾತೊರೆಯುತ್ತಿದೆ. ‘ಕೈ’ ಮಣಿಸುವ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ತನ್ನ ‘ಭದ್ರಕೋಟೆ’ಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿಯುವುದು ನಿಚ್ಚಳವಾಗಿದೆ. ಕ್ಷೇತ್ರದಲ್ಲಿ ಇವರಿಗೆ ಸ್ವಪಕ್ಷದಲ್ಲಿ ಪ್ರತಿಸ್ಪರ್ಧಿಗಳಿಲ್ಲ. ರಘುಮೂರ್ತಿ ಹೊರತುಪಡಿಸಿ ಬೇರಾರೂ ಟಿಕೆಟ್ ಕೇಳಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಂ.ರವೀಶ್‌ಕುಮಾರ್ ಅವರೇ ಪಕ್ಷದ ಅಭ್ಯರ್ಥಿ ಎಂಬುದಾಗಿ ಜೆಡಿಎಸ್ ಘೋಷಿಸಿದೆ. ತಾಲ್ಲೂಕಿನ ಪ್ರಭಾವಿ ಅಧಿಕಾರಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ತಾಲೀಮು ನಡೆಸುತ್ತಿದ್ದಾರೆ.
ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕ್ಷೇತ್ರದ ವ್ಯಾಪ್ತಿ ದೊಡ್ಡದು. ಚಿತ್ರದುರ್ಗ ಹಾಗೂ ಚಳ್ಳಕರೆ ತಾಲ್ಲೂಕಿನಲ್ಲಿ ಈ ಕ್ಷೇತ್ರ ಹರಡಿಕೊಂಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಕ್ಷೇತ್ರ ಹಲವು ಬಾರಿ ಬೆಂಬಲಿಸಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಮೂರು ಪಕ್ಷಗಳು ಪ್ರಬಲವಾಗಿವೆ. ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಮತಗಳಿಂದಾಗಿ ಬಿಜೆಪಿ ನೆಲೆ ವಿಸ್ತರಿಸಿಕೊಳ್ಳುವ ತವಕದಲ್ಲಿದೆ.
ಟಿ.ರಘುಮೂರ್ತಿ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರನ್ನು 2018ರಲ್ಲಿಯೂ ಕ್ಷೇತ್ರದ ಮತದಾರರು ಬೆಂಬಲಿಸಿದರು. ಪಕ್ಷ ಸಂಘಟನೆ, ಜನಸಂಪರ್ಕದ ಕಾರಣಕ್ಕೆ ಇವರು ಕ್ಷೇತ್ರವನ್ನು ಗಾಢವಾಗಿ ಪ್ರಭಾವಿಸಿದ್ದಾರೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಮತದಾರರ ಮನಗೆಲ್ಲುವ ನಿರಂತರ ಪ್ರಯತ್ನ ನಡೆಸಿದ್ದಾರೆ.
ದಶಕದ ಹಿಂದೆ ಈ ಕ್ಷೇತ್ರ ಜೆಡಿಎಸ್‌ಗೆ ನೆಲೆ ಕಲ್ಪಿಸಿತ್ತು. ಮಾಜಿ ಸಚಿವ ತಿಪ್ಪೇಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜೆಡಿಎಸ್‌ಗೆ ಇರುವ ಪಾರಂಪರಿಕ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನವನ್ನು ರವೀಶ್‌ಕುಮಾರ್ ಮಾಡುತ್ತಿದ್ದಾರೆ. ಮೂಲತಃ ಬೆಂಗಳೂರಿನ ಇವರು 2018ರ ಚುನಾವಣೆಯಲ್ಲಿ ರಘುಮೂರ್ತಿ ವಿರುದ್ಧ ಪರಾಭವಗೊಂಡಿದ್ದರು.
ಬಿಜೆಪಿಯಲ್ಲಿ ಟಿಕೆಟ್‌ಗೆ ಹಲವು ಆಕಾಂಕ್ಷಿಗಳು ಸಜ್ಜಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯಪಾಲಯ್ಯ, ನಿವೃತ್ತ ಉಪ ವಿಭಾಗಾಧಿಕಾರಿ ಅನಿಲ್‌ಕುಮಾರ್, ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಜಯರಾಮ್, ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕುಮಾರಸ್ವಾಮಿ, ಸಂಘ ಪರಿವಾರದ ಬಾಳೆಕಾಯಿ ರಾಮದಾಸ್, ಚಿತ್ರನಟ ಶಶಿಕುಮಾರ್ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಕೆಲವರು ಕ್ಷೇತ್ರದಲ್ಲಿ ಸಕ್ರಿಯವಾಗಿ ಮತದಾರರನ್ನು ಸಂಪರ್ಕಿಸುತ್ತಿದ್ದಾರೆ. ಟಿಕೆಟ್ ಕೈತಪ್ಪಿದರೆ ಆಕಾಂಕ್ಷಿಯೊಬ್ಬರು ಪಕ್ಷೇತರರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚಿಸಲು ಟಿ.ರಘುಮೂರ್ತಿ ಮುಂದಾಗಿದ್ದಾರೆ. ರಸ್ತೆ, ಚೆಕ್‌ಡ್ಯಾಂ, ಮೂಲಸೌಕರ್ಯ ಅಭಿವೃದ್ಧಿ, ಚಳ್ಳಕೆರೆ ನಗರದ ಬೆಳವಣಿಗೆಯ ಚಿತ್ರಣವನ್ನು ಜನರಿಗೆ ತೋರಿಸಿ ಮತ ಸೆಳೆಯುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಹೆಣೆಯುತ್ತಿದೆ. ಐದು ವರ್ಷಗಳಲ್ಲಿ ಅಪೂರ್ಣಗೊಂಡ ಕಾಮಗಾರಿ, ವಸತಿ ಸೌಲಭ್ಯದಲ್ಲಿ
ಉಂಟಾಗಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳ ಆಧಾರದಲ್ಲಿ ಮತದಾರರ ಮನವೊಲಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ.
***
ಅಧಿಕಾರಿಯ ನಡೆ ನಿಗೂಢ
ಚಳ್ಳಕೆರೆ ತಾಲ್ಲೂಕಿನ ಪ್ರಭಾವಿ ಅಧಿಕಾರಿಯೊಬ್ಬರು ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದಾರೆ. ಹುದ್ದೆ ತೊರೆದು ಚುನಾವಣಾ ಅಖಾಡಕ್ಕೆ ಧುಮುಖಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಅಧಿಕಾರಿ ನಡೆ ನಿಗೂಢವಾಗಿದೆ.
ಮೊಳಕಾಲ್ಮುರು ಅಥವಾ ಚಳ್ಳಕೆರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಅಧಿಕಾರಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಕೇಳಿದ್ದಾರೆ ಎಂಬ ವದಂತಿ ಕೂಡ ಹರಿದಾಡುತ್ತಿದೆ. ಈ ಅಧಿಕಾರಿ ವಿರುದ್ಧ ಕಾಂಗ್ರೆಸ್ ಜಿಲ್ಲಾಧಿಕಾರಿಗೆ ದೂರು ಕೂಡ ನೀಡಿದೆ.
***
ಕಾಂಗ್ರೆಸ್‌ಗೆ ಜೋಡೊ ಯಾತ್ರೆಯ ಬಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದುಹೋಗಿದ್ದು ಶಾಸಕ ಟಿ.ರಘುಮೂರ್ತಿ ಅವರಿಗೆ ಬಲತುಂಬಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆಯು ಎರಡು ದಿನ ಸಾಗಿತು. ಹಳ್ಳಿ, ನಗರ ಪ್ರದೇಶದ ಸಾವಿರಾರು ಜನರು ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿ, ಇಂದಿರಾ ಗಾಂಧಿ ಕೊಡುಗೆ ಸ್ಮರಿಸಿದರು. ಈ ಯಾತ್ರೆಗೆ ಸಿಕ್ಕ ಜನಬೆಂಬಲ ಚುನಾವಣೆಯಲ್ಲಿ ಅನುಕೂಲ ಆಗಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
***
ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ. ಕ್ಷೇತ್ರದ ಮತದಾರರು ಮೂರನೇ ಬಾರಿಗೆ ಕೈಹಿಡಿಯುವ ವಿಶ್ವಾಸವಿದೆ. ಅನುದಾನ ಹಂಚಿಕೆಯಲ್ಲಿ ಸರ್ಕಾರ ಮಾಡಿದ ತಾರತಮ್ಯವನ್ನು ಜನರ ಮುಂದೆ ಇಡಲಿದ್ದೇನೆ.
- ಟಿ.ರಘುಮೂರ್ತಿ, ಶಾಸಕ ಚಳ್ಳಕೆರೆ
***
ಬಿಜೆಪಿಯಲ್ಲಿ ಅಭ್ಯರ್ಥಿಗಿಂತ ಪಕ್ಷ ಮುಖ್ಯ. ಹಲವು ಮುಖಂಡರು ಸ್ಪರ್ಧಿಸುವ ಉತ್ಸುಕತೆ ತೋರಿದ್ದಾರೆ. ಪಕ್ಷ ಇದನ್ನು ಗಮನಿಸಿದೆ. ಟಿಕೆಟ್ ಹಂಚಿಕೆ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ.
- ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಮಂಡಲ ಅಧ್ಯಕ್ಷ
***
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರದ 19,000 ರೈತ ಕುಟುಂಬದ ₹ 160 ಕೋಟಿ ಸಾಲ ಮನ್ನ ಆಗಿದೆ. ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಅಪೇಕ್ಷೆ.
- ಎಂ.ರವೀಶ್‌ಕುಮಾರ್, ಜೆಡಿಎಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.