ADVERTISEMENT

ಹೊಳಲ್ಕೆರೆ ಕ್ಷೇತ್ರ ಸ್ಥಿತಿ–ಗತಿ| ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ತೀವ್ರ ಪೈಪೋಟಿ

ಕಾಂಗ್ರೆಸ್‌ ಟಿಕೆಟ್‌ಗೆ 19 ಹುರಿಯಾಳು, ಸ್ಪರ್ಧೆಗೆ ಉತ್ಸುಕತೆ ತೋರಿದ ನಿವೃತ್ತ ಜಿಲ್ಲಾಧಿಕಾರಿ

ಜಿ.ಬಿ.ನಾಗರಾಜ್
Published 15 ಜನವರಿ 2023, 12:51 IST
Last Updated 15 ಜನವರಿ 2023, 12:51 IST
   

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ 19 ಹುರಿಯಾಳು ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್‌ ಖಚಿತವಾಗುವುದಕ್ಕೂ ಮುನ್ನವೇ ಮತದಾರರ ಮನೆಬಾಗಿಲು ತಟ್ಟುವಲ್ಲಿ ನಿರತರಾಗಿದ್ದಾರೆ. ನಿವೃತ್ತ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಸ್ಪರ್ಧೆಗೆ ಉತ್ಸುಕತೆ ತೋರಿರುವುದು ಕುತೂಹಲ ಮೂಡಿಸಿದೆ.

ಶಾಸಕ ಎಂ. ಚಂದ್ರಪ್ಪ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2008 ಹಾಗೂ 2018ರಲ್ಲಿ ಗೆಲುವು ಸಾಧಿಸಿದ ಅವರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅವರಿಗೆ ಪಕ್ಷದಲ್ಲಿ ಪ್ರಬಲ ಪೈಪೋಟಿ ನೀಡುವ ಹುರಿಯಾಳುಗಳಿಲ್ಲ. ವೈದ್ಯರೊಬ್ಬರು ಬಿಜೆಪಿ ಬಾಗಿಲು ಬಡಿಯುತ್ತಿರುವ ವದಂತಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಭಿನ್ನವಾದ ದಾಳ ಉರುಳಿಸಲು ಜೆಡಿಎಸ್‌ ಹಾಗೂ ಆಮ್‌ ಆದ್ಮಿ ಪಾರ್ಟಿ (ಎಎಪಿ) ತಂತ್ರಗಾರಿಕೆ ನಡೆಸುತ್ತಿವೆ.

ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಕ್ಷೇತ್ರ ಹರಡಿಕೊಂಡಿದೆ. ಕಾಂಗ್ರೆಸ್‌, ಜನತಾ ಪರಿವಾರ ಹಾಗೂ ಬಿಜೆಪಿ ಹಲವು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಕಳೆದ ಮೂರು ಚುನಾವಣೆಯಿಂದ ಈಚೆಗೆ ಕಾಂಗ್ರೆಸ್‌ನ ಎಚ್‌.ಆಂಜನೇಯ ಹಾಗೂ ಬಿಜೆಪಿಯ ಎಂ.ಚಂದ್ರಪ್ಪ ನಡುವೆಯೇ ನೇರ ಹಣಾಹಣಿ ನಡೆಯುತ್ತಿದೆ. ಕ್ಷೇತ್ರದಿಂದ ಈ ಬಾರಿ ಕಣಕ್ಕೆ ಇಳಿಯಲು ಹಲವರು ಉತ್ಸುಕತೆ ತೋರಿರುವುದು ನೇರ ಸ್ಪರ್ಧೆಯಲ್ಲಿ ಬದಲಾವಣೆಯಾಗುವ ಮುನ್ಸೂಚನೆಯಂತೆ ಭಾಸವಾಗುತ್ತಿದೆ.

ADVERTISEMENT

ಕಾಂಗ್ರೆಸ್‌ನ ಸ್ಥಳೀಯ ಕಾರ್ಯಕರ್ತರಿಂದ ರಾಜ್ಯ ನಾಯಕರವರೆಗೆ ಅನೇಕರು ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಶ್ರೀರಂಗಯ್ಯ ಟಿಕೆಟ್‌ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌ ಅವರೂ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಯುವ ಉತ್ಸಾಹ ತೋರಿದ್ದಾರೆ.

ಒಂದೇ ಕುಟುಂಬದ ಇಬ್ಬರು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸವಿತಾ ಹಾಗೂ ಅವರ ಪತಿ ರಘು ಟಿಕೆಟ್‌ ಕೇಳಿದ್ದಾರೆ. ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ಟಿ.ತಿಪ್ಪೇಸ್ವಾಮಿ ಹಾಗೂ ಅವರ ಪುತ್ರ ಟಿ.ಅನಿಲ್ ಕುಮಾರ್‌ ಟಿಕೆಟ್‌ಗೆ ಕೋರಿಕೆ ಸಲ್ಲಿಸಿದ್ದಾರೆ. ಪಕ್ಷದ ಟಿಕೆಟ್‌ ಕೈತಪ್ಪಿದರೆ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತವನ್ನು ಕೆಲವರು ಮತದಾರರ ಮುಂದೆ ವ್ಯಕ್ತಪಡಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತಯಾಚನೆಗೆ ಸಜ್ಜಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ, ವಿದ್ಯುತ್‌ ಮಾರ್ಗ, ಕೆರೆ, ಜಲಮೂಲಗಳ ಪುನಶ್ಚೇತನ ಹೀಗೆ ಹಲವು ಅಂಶಗಳನ್ನು ಜನರ ಮುಂದಿಟ್ಟು ಮತಯಾಚನೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಶಾಸಕ ಎಂ.ಚಂದ್ರಪ್ಪ ಅವರ ಬೆಂಬಲಿಗರೊಬ್ಬರು ಚಿಕ್ಕಜಾಜೂರಿನಲ್ಲಿ ಮಾಡಿಕೊಂಡ ಗಲಾಟೆ ಚುನಾವಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಕಾಂಗ್ರೆಸ್‌ ಮುಂದಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಅತಿವೃಷ್ಟಿ ಸಂದರ್ಭದಲ್ಲಿ ಸರ್ಕಾರ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸಿಲ್ಲ ಎಂಬುದನ್ನು ಪ್ರಮುಖವಾಗಿ ಇಟ್ಟುಕೊಂಡು ಚುನಾವಣೆ ಎದುರಿಸುವ ಆಲೋಚನೆಯಲ್ಲಿದೆ. ಎರಡೂ ಪಕ್ಷದ ಅಭ್ಯರ್ಥಿಗಳು ಅಧಿಕೃತವಾಗಿ ಘೋಷಣೆಯಾದ ಬಳಿಕ ಕ್ಷೇತ್ರದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಮಾಜಿ ಸಂಸದರ ಮನವೊಲಿಕೆಗೆ ಪ್ರಯತ್ನ

ಮಾಜಿ ಸಂಸದರೊಬ್ಬರನ್ನು ಹೊಳಲ್ಕೆರೆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಎಎಪಿ ಪ್ರಯತ್ನಿಸುತ್ತಿದೆ. ಅವರೊಂದಿಗೆ ಎರಡು ಸುತ್ತಿನ ಮಾತುಕತೆ ಕೂಡ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಬಿಜೆಪಿ ಜೊತೆ ಮುನಿಸಿಕೊಂಡಿರುವ ಅವರು ವಿಧಾನಸಭಾ ಚುನಾವಣೆಗೆ ಇಳಿದರೆ ಕಣದ ಚಿತ್ರಣ ಬದಲಾಗಲಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರತಿಯಾಗಿ ಜೆಡಿಎಸ್‌ ಕೂಡ ತಂತ್ರಗಾರಿಕೆ ಹೆಣೆಯುತ್ತಿದೆ. ಲಂಬಾಣಿ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಆಲೋಚನೆಯಲ್ಲಿದೆ.

****
ಬಿಜೆಪಿಯ ಜನವಿರೋಧಿ ನೀತಿ, ಬೆಲೆ ಏರಿಕೆಯಿಂದ ಬಡವರು ತತ್ತರಿಸಿಹೋಗಿದ್ದಾರೆ. 2013–18ರಲ್ಲಿ ಕಾಂಗ್ರೆಸ್‌ ನೀಡಿದ ಅಧಿಕಾರದ ಆಧಾರದ ಮೇರೆಗೆ ಮತಯಾಚಿಸುತ್ತೇವೆ. ಮತ ಕೇಳುವ ನೈತಿಕತೆ ಇರುವುದು ಕಾಂಗ್ರೆಸ್‌ಗೆ ಮಾತ್ರ.
ಎಚ್.ಆಂಜನೇಯ, ಮಾಜಿ ಸಚಿವ


ವಿ.ವಿ.ಸಾಗರದಿಂದ ಶಾಶ್ವತ ಕುಡಿಯುವ ನೀರು, ಕೆರೆ ತುಂಬಿಸುವುದು, ವಿದ್ಯುತ್, ಶಾಲಾ ಕಾಲೇಜುಗಳು ನಿರ್ಮಾಣ ಮಾಡಿದ್ದೇನೆ. ಹೊಸ ಕೆರೆ, ಚೆಕ್ ಡ್ಯಾಂ ನಿರ್ಮಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಮತದ ರೂಪದಲ್ಲಿ ಕೂಲಿ ಕೇಳುವೆ.
ಎಂ. ಚಂದ್ರಪ್ಪ, ಶಾಸಕ, ಹೊಳಲ್ಕೆರೆ

ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಮೂರೂವರೆ ವರ್ಷ ಕೆಲಸ ಮಾಡಿದ್ದೇನೆ. ನಿವೃತ್ತಿಯ ಬಳಿಕ ಜನಸೇವೆ ಮುಂದುವರಿಸುವ ಕಾಳಜಿಯಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದೇನೆ. ಅವಕಾಶ ಸಿಗುವ ನಿರೀಕ್ಷೆ ಇದೆ.
– ಎಂ.ಕೆ.ಶ್ರೀರಂಗಯ್ಯ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.