ಚಿತ್ರದುರ್ಗ: ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗೆ ನೆರವಾಗಲೆಂದೇ ರೂಪಿಸಿರುವ ‘ಆಶಾಕಿರಣ’ ಎಂಬ ಅಭಿಯಾನವನ್ನು ಚಿತ್ರದುರ್ಗ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ₹ 21 ಕೋಟಿ ವೆಚ್ಚದಲ್ಲಿ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
‘ಆಶಾಕಿರಣ’ ಹೊರತುಪಡಿಸಿದರೆ ಜಿಲ್ಲೆಗೆ ಬಜೆಟ್‌ನಲ್ಲಿ ಹೊಸ ಕೊಡುಗೆಗಳೇನೂ ಸಿಕ್ಕಿಲ್ಲ. ದಶಕಗಳಿಂದ ಜಿಲ್ಲೆಯ ಜನರು ಮುಂದಿಡುತ್ತಿದ್ದ ಬೇಡಿಕೆಗಳಿಗೂ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಿದಂತೆ ಕಾಣುತ್ತಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭ, ಜಿಲ್ಲಾಡಳಿತ ಭವನ ಕಟ್ಟಡ ಕಾಮಗಾರಿ ಪೂರ್ಣ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ತರುವುದಾಗಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.
ಚಿತ್ರದುರ್ಗ– ದಾವಣಗೆರೆ– ತುಮಕೂರು ನೇರ ರೈಲು ಮಾರ್ಗ, ಈರುಳ್ಳಿ, ಸಿರಿಧಾನ್ಯ, ಶೇಂಗಾ ಬೆಳೆಗೆ ಉತ್ತೇಜನ, ವಾಣಿವಿಲಾಸ ಸಕ್ಕರೆ ಕಾರ್ಖಾನೆ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹೀಗೆ ಹಲವು ನಿರೀಕ್ಷೆಗಳನ್ನು ಮುಂದಿಟ್ಟುಕೊಂಡು ಬಜೆಟ್ ಎದುರು ನೋಡುತ್ತಿದ್ದ ಜನರು ನಿರಾಸೆಗೆ ಒಳಗಾಗಿದ್ದಾರೆ.
ಜಿಲ್ಲೆಯ ‘ಆಶಾಕಿರಣ’
ನೇತ್ರ ಸಂಬಂಧಿ ಸಮಸ್ಯೆಗಳ ಪತ್ತೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ‘ಆಶಾಕಿರಣ’ ಅಭಿಯಾನ ರೂಪಿಸಿದೆ. ನೇತ್ರ ತಪಾಸಣೆ ಶಿಬಿರಗಳನ್ನು ನಡೆಸಿ ಸಮಸ್ಯೆ ಪತ್ತೆ ಮಾಡಲು ಈ ಅಭಿಯಾನ ನೆರವಾಗಲಿದೆ. ಖಾಸಗಿ ಆಸ್ಪತ್ರೆಗಳು ನಡೆಸುವ ನೇತ್ರ ತಪಾಸಣಾ ಶಿಬಿರಗಳ ಮಾದರಿಯಲ್ಲಿ ‘ಆಶಾಕಿರಣ’ ಅಭಿಯಾನ ನಡೆಯಲಿದೆ.
ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುವವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಕನ್ನಡಕವನ್ನು ಕೊಟ್ಟು ಅವರ ಬಾಳಿಗೆ ಬೆಳಕಾಗುವ ಮಹಾತ್ವಕಾಂಕ್ಷೆಯನ್ನು ಈ ಅಭಿಯಾನ ಹೊಂದಿದೆ. ಚಿತ್ರದುರ್ಗ, ಮಂಡ್ಯ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಅಭಿಯಾನ ಆರಂಭಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಹಂತ, ಹಂತವಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಇದನ್ನು ವಿಸ್ತರಿಸುವ ಆಶ್ವಾಸನೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.
ಭದ್ರಾ ಮೇಲ್ದಂಡೆಗೆ ಆದ್ಯತೆ
ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
‘ಡಬಲ್ ಎಂಜಿನ್ ಎಂದು ಹೇಳಿಕೊಂಡಿದ್ದ ಸರ್ಕಾರ ಭದ್ರಾ ಮೇಲ್ದಂಡೆಯನ್ನು ಇನ್ನೂ ರಾಷ್ಟ್ರೀಯ ಯೋಜನೆಯಾಗಿ ಅಧಿಕೃತವಾಗಿ ಅನುಮೋದಿಸಿಲ್ಲ. 2023–24ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ₹ 5,300 ಕೋಟಿ ಅನುದಾನ ಮೀಸಲಿಟ್ಟರೂ ಬಿಡುಗಡೆಯಾಗಿಲ್ಲ. ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಬಜೆಟ್ ಮುಖ್ಯಮಂತ್ರಿ ಭಾಷಣದಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಕಟ್ಟಡ ಪೂರ್ಣ, ಕಾಲೇಜು ಆರಂಭ
‘ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಲಿದೆ’ ಎಂದಷ್ಟೇ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾಲೇಜು ಪ್ರಾರಂಭವಾದರೂ ಕಟ್ಟಡ ನಿರ್ಮಾಣದ ವಿಚಾರದಲ್ಲಿ ಸೃಷ್ಟಿಯಾದ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಎಷ್ಟು ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡವನ್ನು ಪೂರ್ಣಗೊಳಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಬಯಲುಸೀಮೆಯ 17 ಜಿಲ್ಲೆಗಳಲ್ಲಿ ಹಸಿರೀಕರಣಕ್ಕೆ ಮುಂದಿನ ಐದು ವರ್ಷಕ್ಕೆ ₹ 500 ಕೋಟಿ ಅನುದಾನ ನೀಡುವುದಾಗಿ ತಿಳಿಸಿದೆ. ಚಿತ್ರದುರ್ಗ ಸೇರಿ ಬಯಲುಸೀಮೆಯ ಜಿಲ್ಲೆಗಳಿಗೆ ಇದರಿಂದ ಅನುಕೂಲವಾಗಬಹುದು.
ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಘೋಷಣೆ ಮಾಡಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ. ಕೃಷಿ ಶಿಕ್ಷಣ ಆರೋಗ್ಯ ಕ್ಷತ್ರಕ್ಕೆ ಒತ್ತು ನೀಡಲಾಗಿದೆ.ಬಿ.ಎನ್.ಚಂದ್ರಪ್ಪ, ಕಾರ್ಯಾಧ್ಯಕ್ಷ ಕೆಪಿಸಿಸಿ
ನೂತನ ಬಜೆಟ್‌ನಿಂದ ಜಿಲ್ಲೆಗೆ ಯಾವುದೇ ಪ್ರಯೋಜನ ಇಲ್ಲ. ‘ಗ್ಯಾರಂಟಿ’ ಅನುಷ್ಠಾನಕ್ಕೆ ದೊಡ್ಡ ಮೊತ್ತ ನೀಡಲಾಗಿದೆ. ರಾಜ್ಯದ ಸಾಲ ಇನ್ನಷ್ಟು ಹೆಚ್ಚಾಗಲಿದೆ. ರಾಜ್ಯವನ್ನು ವಿನಾಶದತ್ತ ಕೊಂಡೊಯ್ಯುವ ಬಜೆಟ್.ಎಂ.ಜಯಣ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯೂರು
ಯಾವೊಂದು ಸಮುದಾಯಗಳಿಗೂ ಅನ್ಯಾಯ ಆಗದಂತೆ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಹಂಚಿಕೆ ಆದಾಯ ಕ್ರೋಢೀಕರಣ ಸಿದ್ದರಾಮಯ್ಯ ಅವರ ವಿತ್ತ ಜ್ಞಾನಕ್ಕೆ ಸಾಕ್ಷಿಯಾಗಿದೆ.ಎಚ್.ಆಂಜನೇಯ, ಮಾಜಿ ಸಚಿವ ಹೊಳಲ್ಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.