ADVERTISEMENT

ಬಿಜೆಪಿಗೆ ಅಧಿಕಾರ ನೀಡಿದರೆ ರಾಜ್ಯವೇ ಲೂಟಿ: ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 29 ಮೇ 2024, 16:22 IST
Last Updated 29 ಮೇ 2024, 16:22 IST
ಚಿತ್ರದುರ್ಗದ ಡಾನ್‌ ಬಾಸ್ಕೋ ಶಾಲೆಯಲ್ಲಿ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ ಪರ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮತಯಾಚಿಸಿದರು
ಚಿತ್ರದುರ್ಗದ ಡಾನ್‌ ಬಾಸ್ಕೋ ಶಾಲೆಯಲ್ಲಿ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ ಪರ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮತಯಾಚಿಸಿದರು   

ಚಿತ್ರದುರ್ಗ: ‘ಬಿಜೆಪಿಯವರು ಪದೇ ಪದೇ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥವರ ಕೈಯಲ್ಲಿ ಅಧಿಕಾರ ನೀಡಿದರೆ ರಾಜ್ಯವನ್ನೇ ಲೂಟಿ ಮಾಡುತ್ತಾರೆ’ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ದೂರಿದರು.

ನಗರದ ಡಾನ್‌ ಬಾಸ್ಕೋ ಶಾಲೆಯಲ್ಲಿ ಬುಧವಾರ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ ಪರ ಮತಯಾಚಿಸಿ ಮಾತನಾಡಿದ ಅವರು, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸಿ ಕಾಂಗ್ರೆಸ್‌ ಆಡಳಿತ ನಡೆಸಲು ಸ್ಪಷ್ಟ ಬಹುಮತ ನೀಡಿದರು. ಇದರಿಂದ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಲು ಪಣತೊಟ್ಟಿರುವ ಪಕ್ಷ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ’ ಎಂದರು.

‘ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೀನ ದಲಿತರು, ಬಡವರು, ಅಲ್ಪಸಂಖ್ಯಾತರು ಸೇರಿದಂತೆ ಸರ್ವಜನಾಂಗದ ಹಿತ ಕಾಯುವ ಐದು ಗ್ಯಾರೆಂಟಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ಅವರು ಸ್ವಾವಲಂಬನೆ ಸಾಧಿಸಲು ಅನುಕೂಲವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜಾತಿ ಬೇಧ, ತಾರತಮ್ಯ ತಂದು ಸಮಾಜವನ್ನು ಹೊಡೆದಾಳುವ ನೀತಿ ಬಿಜೆಪಿಯವರು ಅನುಸರಿಸುತ್ತಿದ್ದಾರೆ. ಹಿಂದೂ, ಮುಸ್ಲಿಂ ಒಂದೇ ಎಂಬ ತತ್ವ, ಸಿದ್ಧಾಂತ, ಸಂವಿಧಾನ ಸಂರಕ್ಷಣೆಯೊಂದಿಗೆ ಆಡಳಿತ ನಡೆಸುವ ಪಕ್ಷ ಎಂದರೆ ಕಾಂಗ್ರೆಸ್‌ ಮಾತ್ರ. ಆದರೆ ಹತ್ತು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೇವಲ ಬಂಡವಾಳಶಾಯಿಗಳ ಹಿತ ಕಾಯುತ್ತಿದೆ. ಈ ಬಾರಿ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಪೂರ್ಣಿಮಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಾಜಿ ಅಧ್ಯಕ್ಷ ಫಾತ್ಯರಾಜನ್‌, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎನ್‌.ಮೈಲಾರಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್‌, ಮುಖಂಡರಾದ ಎನ್‌.ಡಿ.ಕುಮಾರ್‌, ವೆಂಕಟೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.