ADVERTISEMENT

ಹೊಳಲ್ಕೆರೆ: 80,000 ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ

ಕೆಡಿಪಿ ಫೌಂಡೇಷನ್ ನಿಂದ ಸರ್ಕಾರಿ ಶಾಲೆಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:31 IST
Last Updated 11 ಜುಲೈ 2024, 12:31 IST
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೆಡಿಪಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೆಡಿಪಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು    

ಹೊಳಲ್ಕೆರೆ: ಕೆಡಿಪಿ (ಕರುಣೆ– ದಯೆ–ಪರೋಪಕಾರಿ) ಫೌಂಡೇಷನ್‌ನಿಂದ 80,000 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್ ಸೇರಿ ಲೇಖನ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಟ್ರಸ್ಟ್‌ನ ವ್ಯವಸ್ಥಾಪಕ ತಿಪ್ಪೇಶ್ ಹೇಳಿದರು.

ತಾಲ್ಲೂಕಿನ ಹೊರಕೆರೆ ದೇವರಪುರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಹಾಗೂ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

‘ಕೆಡಿಪಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕಿರಣ್ ಕುಮಾರ್ ಕೆಮ್ಮಣ್ಣು ಅವರು ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ ಅಮೆರಿಕಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿದರು. ನಂತರ ಅಲ್ಲಿನ ಪ್ರತಿಷ್ಠಿತ ಕಂಪನಿಯಲ್ಲಿ 15 ವರ್ಷ ಕೆಲಸ ಮಾಡಿ ತಮ್ಮ ಸ್ವಂತ ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಭಾರತಕ್ಕೆ ಮರಳಿದರು. ಇಲ್ಲಿ ಸ್ವಂತ ಕಂಪನಿ ಸ್ಥಾಪಿಸಿ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶ ನೀಡಿದ್ದಾರೆ’ ಎಂದು ತಿಪ್ಪೇಶ್‌ ತಿಳಿಸಿದರು.

ADVERTISEMENT

‘ಕಿರಣ್ ಕುಮಾರ್ ಅವರು ಪತ್ನಿ ಅನಿತಾ ರಾವ್ ಅವರೊಂದಿಗೆ ಆರಂಭಿಸಿರುವ ಕೆಡಿಪಿ ಫೌಂಡೇಷನ್‌ನಿಂದ 12 ವರ್ಷಗಳಲ್ಲಿ ಸುಮಾರು 80,000 ವಿದ್ಯಾರ್ಥಿಗಳಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. ಪ್ರಸಕ್ತ ವರ್ಷ 21,796 ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಿಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ನಿವಾರಿಸಲು ಪರೋಪಕಾರಿ.ಕಾಮ್ (Paropakari.com) ಎಂಬ ವೆಬ್ ಸೈಟ್ ಆರಂಭಿಸಿದ್ದಾರೆ’ ಎಂದರು.

ಗ್ರಾಮದ ಎಸ್ಎಲ್ಎನ್ಎಸ್ ಗ್ರಾಮಾಂತರ ಪ್ರೌಢಶಾಲೆ, ಪಂಪಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಲೇಖನ ಸಾಮಗ್ರಿ ವಿತರಿಸಲಾಯಿತು.

ಕೆಡಿಪಿ ಫೌಂಡೇಷನ್‌ನ ಶಶಿ ಕುಮಾರ್, ಸಂತೋಷ್, ರಂಗನಾಥ್, ಮುಖ್ಯಶಿಕ್ಷಕ ಮಾರುತಿ, ಕುಮಾರಸ್ವಾಮಿ, ರಾಮಚಂದ್ರಪ್ಪ ರಂಗನಾಥ್, ಶ್ರೀನಿವಾಸ್, ಪಂಪಾಪುರ ಶಾಲೆಯ ಮುಖ್ಯಶಿಕ್ಷಕ ಟಿ.ಜಿ.ರಂಗಸ್ವಾಮಿ, ಸಹಶಿಕ್ಷಕಿ ದಾಕ್ಷಾಯಣಮ್ಮ, ರಾಮಕೃಷ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶಿವಮೂರ್ತಿ ಇದ್ದರು.

ಪರೋಪಕಾರಿ.ಕಾಮ್ (Paropakari.com) ವೆಬ್ ಸೈಟ್‌ನಲ್ಲಿ ಲಾಗಿನ್ ಆಗಿ ನಿಮ್ಮ ಅವಶ್ಯಕತೆಗಳನ್ನು ಪೋಸ್ಟ್ ಮಾಡಿದರೆ ಕಂಪನಿಯಿಂದ ನೆರವು ನೀಡಲಾಗುವುದು.

-ತಿಪ್ಪೇಶ್ ಕೆಡಿಪಿ ಫೌಂಡೇಷನ್ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.