ADVERTISEMENT

ವಿಯೆಟ್ನಾಂನಲ್ಲಿ ತಲೆಮರೆಸಿಕೊಂಡಿದ್ದ ಕೋಡೆ ರಮಣಯ್ಯ ವಂಚಿಸಿದ್ದು ₹250 ಕೋಟಿ

‘ಕ್ರಿಪ್ಟೋ’ದಲ್ಲಿ ಹೂಡಿಕೆ

ಎಂ.ಎನ್.ಯೋಗೇಶ್‌
Published 28 ಜೂನ್ 2024, 4:52 IST
Last Updated 28 ಜೂನ್ 2024, 4:52 IST
ಕೋಡೆ ರಮಣಯ್ಯ
ಕೋಡೆ ರಮಣಯ್ಯ   

ಚಿತ್ರದುರ್ಗ: ದುಪ್ಪಟ್ಟು ಹಣದ ಆಮಿಷವೊಡ್ಡಿ ಜಿಲ್ಲೆಯಲ್ಲಿ ಕೆಲಸ ಮಾಡುವ ರೈಲ್ವೆ ಇಲಾಖೆಯ ನೌಕರರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ್ದ ಆರೋಪಿ ಕೋಡೆ ರಮಣಯ್ಯ ಜಿಲ್ಲೆ, ರಾಜ್ಯ ಮಾತ್ರವಲ್ಲದೇ ದೇಶದ ವಿವಿಧೆಡೆ ₹ 250 ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ ಎಂಬ ವಿಷಯ ತನಿಖೆಯಿಂದ ಪತ್ತೆಯಾಗಿದೆ.

ರೈಲ್ವೆ ಇಲಾಖೆಯ ನೌಕರರಿಂದ ₹ 4.80 ಕೋಟಿ ವಂಚಿಸಿ ವಿಯೆಟ್ನಾಂನಲ್ಲಿ ತಲೆಮರೆಸಿಕೊಂಡಿದ್ದ ಆಂಧ್ರಪ್ರದೇಶದ ‘ಕ್ರೌಡ್‌ ಕ್ಲಬ್‌ ಇಂಟರ್‌ ನ್ಯಾಷನಲ್‌ ಪ್ರೈವೆಟ್‌ ಲಿಮಿಟೆಡ್‌’ ಮುಖ್ಯಸ್ಥ ಕೋಡೆ ರಮಣಯ್ಯನನ್ನು ನಗರದ ಸಿಇಎನ್‌ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆ ಪೊಲೀಸರು ಜೂನ್‌ 11ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಕೇರಳದಲ್ಲೂ ವಂಚಿಸಿದ್ದಾಗಿ ತಿಳಿದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಚಿಕ್ಕಜಾಜೂರು, ಚಿತ್ರದುರ್ಗದಲ್ಲಿ ಕೆಲಸ ಮಾಡುವ ರೈಲ್ವೆ ಇಲಾಖೆ ನೌಕರರು, ಅವರ ಸಂಬಂಧಿಕರು ₹ 4.80 ಕೋಟಿ ಹಣ ಹೂಡಿಕೆ ಮಾಡಿದ್ದರು. ಆರೋಪಿ ಬಂಧಿತನಾದ ನಂತರ ಈತನ ಹಳೆಯ ಪ್ರಕರಣಗಳೂ ತೆರೆದುಕೊಂಡಿವೆ. ಚಿತ್ರದುರ್ಗದಲ್ಲೇ 2 ಪ್ರಕರಣ, ರಾಯಚೂರು ಸಿಇಎನ್‌ ಠಾಣೆಯಲ್ಲಿ ಇನ್ನೊಂದು ವಂಚನೆ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ.

‘ಆರೋಪಿಯಿಂದ ವಶಕ್ಕೆ ಪಡೆದಿರುವ ಬಾಂಡ್‌ ಮೌಲ್ಯವೇ ₹ 206 ಕೋಟಿ ಮೀರುತ್ತಿದೆ. ಇನ್ನು ಹೂಡಿಕೆದಾರರ ಬಾಂಡ್‌ ಪರಿಶೀಲಿಸಿದರೆ ವಂಚನೆಯ ಮೌಲ್ಯ ₹ 250 ಕೋಟಿಗೂ ಹೆಚ್ಚಾಗಬಹುದು. ಆರೋಪಿಯ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಕಳೆದುಕೊಂಡಿದ್ದಾಗಿ ಆರೋಪಿ ತಿಳಿಸಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

60 ದಿನಗಳಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿದ್ದ ಆರೋಪಿ ಹೂಡಿಕೆದಾರರಿಗೆ 2 ಬಾರಿ ಕರಾರಿನಂತೆ ಹಣ ನೀಡಿದ್ದ. ಹೆಚ್ಚುವರಿಯಾಗಿ ಬಂದ ಎಲ್ಲಾ ಹಣವನ್ನೂ ಸೇರಿಸಿ ಜನರು ಮತ್ತೆ ಹೂಡಿಕೆ ಮಾಡಿದ್ದರು. 3ನೇ ಬಾರಿ ದುಪ್ಪಟ್ಟು ಹಣದ ನಿರೀಕ್ಷೆಯಲ್ಲಿದ್ದಾಗ ಆರೋಪಿ ತಲೆಮರೆಸಿಕೊಂಡಿದ್ದ. ರೈಲ್ವೆ ನೌಕರರು ದೂರು ನೀಡಲು ಹಿಂದೇಟು ಹಾಕಿದ್ದರು. ಗುತ್ತಿಗೆ ನೌಕರರೊಬ್ಬರು ಧೈರ್ಯಮಾಡಿ ಚಿಕ್ಕಜಾಜೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಇಎನ್‌ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

‘ಆರೋಪಿ ಕೆಲವರಿಗೆ ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿದ್ದ. ವಾಟ್ಸ್‌ಆ್ಯಪ್‌ನ ಡೇಟಾ– ಐಪಿ ಹುಡುಕಿದಾಗ ಆತ ವಿಯೆಟ್ನಾಂನಲ್ಲಿರುವ ವಿಷಯ ಗೊತ್ತಾಯಿತು. ಆತನ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಹೊರಡಿಸಲಾಗಿತ್ತು. ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆಯೂ ಆರಂಭವಾಗಿತ್ತು. ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆರೋಪಿಯನ್ನು ಬಂಧಿಸಿ ಕರೆತರಲಾಯಿತು’ ಎಂದು ಪೊಲೀಸರು ತಿಳಿಸಿದರು.

ಸದ್ಯ ಸಿಕ್ಕಿರುವ ದಾಖಲೆಗಳ ಅನುಸಾರ ಆರೋಪಿಯ ವಂಚನೆ ₹ 200 ಕೋಟಿ ಮೀರಿದೆ. ಪ್ರಕರಣ ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ವಹಿಸಲು ಡಿಜಿ ಕಚೇರಿಗೆ ಮನವಿ ಮಾಡಲಾಗಿದೆ
ಧರ್ಮೇಂದ್ರ ಕುಮಾರ್‌ ಮೀನಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಐಎಂಎ ಮಾದರಿ ಹಣ ವಾಪಸ್‌ ಕೊಡಿಸಿ

ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ಆ ಹಣವನ್ನು ಹೂಡಿಕೆದಾರರಿಗೆ ವಾಪಸ್‌ ನೀಡಲಾಗಿದೆ. ಅದೇರೀತಿ ಕೋಡೆ ರಮಣಯ್ಯನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಮ್ಮ ಹಣ ವಾಪಸ್‌ ಕೊಡಿಸಿ’ ಎಂದು ಹಣ ಕಳೆದುಕೊಂಡವರು ಒತ್ತಾಯಿಸಿದರು. ‘ಆರೋಪಿಯನ್ನು ಬಂಧಿಸಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಹಣ ಹೋಯಿತು ಎಂಬ ಆತಂಕದಲ್ಲಿದ್ದ ನಮಗೆ ಭರವಸೆ ಮೂಡಿದೆ’ ಎಂದು ದೂರುದಾರ ಪಿ.ರಮೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.