ADVERTISEMENT

ಎಸ್‌.ನಿಜಲಿಂಗಪ್ಪರ ಚಿತ್ರದುರ್ಗ ನಿವಾಸವನ್ನು ಖರೀದಿಸಲು ಕೆಪಿಸಿಸಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 20:28 IST
Last Updated 2 ಸೆಪ್ಟೆಂಬರ್ 2024, 20:28 IST
ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮನೆಯ ಒಳಾಂಗಣದ ಸ್ಥಿತಿ
ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮನೆಯ ಒಳಾಂಗಣದ ಸ್ಥಿತಿ   

ಚಿತ್ರದುರ್ಗ: ನಗರದ ವಿ.ಸಿ. ಬಡಾವಣೆಯಲ್ಲಿರುವ, ಅಭಿವೃದ್ಧಿ ಕಾಣದೇ ಪಾಳು ಬಿದ್ದ ಸ್ಥಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ, ದಿವಂಗತ  ಎಸ್‌.ನಿಜಲಿಂಗಪ್ಪ ಅವರ ನಿವಾಸವನ್ನು ಕೆಪಿಸಿಸಿ ಖರೀದಿ ಮಾಡಲು ಮುಂದಾಗಿದೆ.

ಇದಕ್ಕೆ ಪೂರ್ವಭಾವಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್‌ ಹಾಲಪ್ಪ ನೇತೃತ್ವದ ನಿಯೋಗ ಸೋಮವಾರ ನಿಜಲಿಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮುಖಂಡರು ನಿಜಲಿಂಗಪ್ಪ ಅವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.

‘ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ನಾವು ನಿಜಲಿಂಗಪ್ಪ ಅವರ ಮನೆ ಪರಿಶೀಲನೆ ನಡೆಸಿದ್ದೇವೆ. ನಿಜಲಿಂಗಪ್ಪ ಅವರು ಬಾಳಿ ಬದುಕಿದ ಮನೆಯನ್ನು ಪಕ್ಷದ ವತಿಯಿಂದಲೇ ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ADVERTISEMENT

‘ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ನಿವಾಸ ಖರೀದಿ ಮಾಡಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ ಪೀರ್‌ ಹೇಳಿದರು.

₹ 5 ಕೋಟಿ ಬಿಡುಗಡೆ

2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರದ ವತಿಯಿಂದಲೇ ಖರೀದಿಸಲು ₹ 4.24 ಕೋಟಿ ನಿಗದಿಪಡಿಸಲಾಗಿತ್ತು. ಸ್ಮಾರಕ ಅಭಿವೃದ್ಧಿಗೆ ₹ 76 ಲಕ್ಷ ಸೇರಿ ಒಟ್ಟು ₹ 5 ಕೋಟಿಯನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಗಿತ್ತು. ಕಾರ್ಯನಿರ್ವಾಹಕ ಎಂಜಿನಿಯರ್‌ ಖಾತೆಯಲ್ಲಿ ಆ ಹಣವಿದೆ. ಆಸ್ತಿ ನೋಂದಣಿಗೆ ನಿಜಲಿಂಗಪ್ಪ ಅವರ ಮಕ್ಕಳು, ಮೊಮ್ಮಕ್ಕಳ ಸಹಿ ಬೇಕು ಎಂದು ಉಪ ನೋಂದಣಾಧಿಕಾರಿ ಕೋರಿದ್ದರು. ಕೆಲ ತಾಂತ್ರಿಕ ತೊಂದರೆಗಳು ಎದುರಾದ ಕಾರಣ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಎಸ್‌.ನಿಜಲಿಂಗಪ್ಪ ಅವರ ಮನೆಯ ಹೊರಾವರಣ

ಸರ್ಕಾರಕ್ಕೆ ಮನೆ ಕೊಡಲ್ಲ

ನಿಜಲಿಂಗಪ್ಪ ಪುತ್ರ ‘ನಮ್ಮ ಮನೆಯ ವಿಚಾರವಾಗಿ ಸರ್ಕಾರ ಹಲವು ಬಾರಿ ನಮಗೆ ಅವಮಾನ ಮಾಡಿದೆ. ನಾನೇ ಹಲವು ಬಾರಿ ಪತ್ರ ಬರೆದರೂ ಯಾರೂ ಪ್ರತಿಕ್ರಿಯೆ ನೀಡಿಲ್ಲ ಕಚೇರಿಯಿಂದ ಕಚೇರಿಗೆ ಅಲೆಸಿದ್ದಾರೆ. ಹೀಗಾಗಿ ನಾವು ಸರ್ಕಾರಕ್ಕೆ ನಮ್ಮ ಕೊಡದಿರಲು ನಿರ್ಧರಿಸಿದ್ದೇವೆ. ಕೆಪಿಸಿಸಿಗೆ ಮಾರಾಟ ಮಾಡಲು ತಯಾರಿದ್ದು ಅವರು ಕಚೇರಿಯನ್ನಾದರೂ ಮಾಡಿಕೊಳ್ಳಲಿ ಏನೂ ಬೇಕಾದರೂ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ’ ಎಸ್‌.ನಿಜಲಿಂಗಪ್ಪ ಅವರ ಪುತ್ರ ಕಿರಣ್‌ ಶಂಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.