ADVERTISEMENT

ಚಿತ್ರದುರ್ಗ | ‘ಹೈಟೆಕ್‌ ಬಸ್‌ ನಿಲ್ದಾಣ’: ಆರಂಭವಾಗದ ಕಾಮಗಾರಿ!

ಮಳೆ ಕಾರಣಕ್ಕೆ ಕಾಮಗಾರಿ ಸ್ಥಗಿತ ; ಗಡುವು ಮುಗಿಯಲು 9 ತಿಂಗಳು ಬಾಕಿ

ಕೆ.ಪಿ.ಓಂಕಾರಮೂರ್ತಿ
Published 16 ಅಕ್ಟೋಬರ್ 2024, 7:41 IST
Last Updated 16 ಅಕ್ಟೋಬರ್ 2024, 7:41 IST
ಚಿತ್ರದುರ್ಗದ ಎಲ್‌ಐಸಿ ಕಚೇರಿ ಮುಂಭಾಗದ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಗೊಳ್ಳುವ ಸ್ಥಳ
ಚಿತ್ರದುರ್ಗದ ಎಲ್‌ಐಸಿ ಕಚೇರಿ ಮುಂಭಾಗದ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಗೊಳ್ಳುವ ಸ್ಥಳ   

ಚಿತ್ರದುರ್ಗ: ಅಶ್ವಮೇಧ, ಐರಾವತ, ಅಂಬಾರಿ ಉತ್ಸವ, ಇ.ವಿ. ಪವರ್‌ ಪ್ಲಸ್‌ (ಎಲೆಕ್ಟ್ರಿಕಲ್‌)... ಹೀಗೆ ನಿತ್ಯ 1,000ಕ್ಕೂ ಅಧಿಕ ಬಸ್‌ಗಳು ಚಿತ್ರದುರ್ಗಕ್ಕೆ ಬಂದು ಹೋಗುತ್ತವೆ. ಹಳೆಯ ಬಸ್‌ ನಿಲ್ದಾಣದಲ್ಲಿ ಕಂಡುಬರುವ ದಟ್ಟಣೆ ನೀಗಿಸಲು ಹೊಸದಾಗಿ ‘ಹೈಟೆಕ್‌ ಬಸ್‌ ನಿಲ್ದಾಣ’ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆ ಭೂಮಿ ಪೂಜೆ ಸಲ್ಲಿಸಲಾಗಿದ್ದು, ಈವರೆಗೆ ಕಾಮಗಾರಿ ಆರಂಭವಾಗಿಲ್ಲ.

ನಗರದ ಗಾಂಧಿ ವೃತ್ತದ ಬಳಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಿರಿದಾಗಿದೆ. ವರ್ಷವಿಡೀ ಹಗಲಿರುಳು ಬಸ್‌ಗಳು ನಿಲ್ದಾಣಕ್ಕೆ ಬರುವ ಕಾರಣ ಪ್ರಯಾಣಿಕರ ದಟ್ಟಣೆ ಸಾಮಾನ್ಯವಾಗಿದೆ. ನಗರವೂ ಬೆಳೆಯುತ್ತಿದ್ದು, ಪ್ರಯಾಣಿಕರ ದಟ್ಟಣೆ ತಪ್ಪಿಸಲೆಂದೇ ಹೊಸ ಬಸ್‌ ನಿಲ್ದಾಣ ಕಟ್ಟಲು ನಿರ್ಧರಿಸಲಾಗಿದೆ.

ಬಸ್‌ಗಳ ದಟ್ಟಣೆ:

ADVERTISEMENT

ಕೆಎಸ್‌ಆರ್‌ಟಿಸಿಯ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡ ಘಟಕಗಳಿವೆ. ಒಟ್ಟು 320 ಬಸ್‌ಗಳಿವೆ. ಬಸ್‌ಗಳು ಹಳೆ ಬಸ್‌ ನಿಲ್ದಾಣದೊಳಗೆ ಬಂದು ಹೊರ ಹೋಗುವುದು ಕಷ್ಟವಾಗುತ್ತದೆ. ಏತನ್ಮಧ್ಯೆ, ನಿಲ್ದಾಣದೊಳಗೆ ಆಟೊ, ಬೈಕ್‌ಗಳು ಎಗ್ಗಿಲ್ಲದೆ ಬರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.‌

ಇಲ್ಲಿಂದ ಅಷ್ಟ ದಿಕ್ಕುಗಳ ವಿವಿಧ ಭಾಗಗಳಿಗೆ ಬಸ್‌ ಸೌಲಭ್ಯ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ನಿಲ್ದಾಣದಲ್ಲಿ ಬೆರಳೆಣಿಕೆ ಪ್ಲಾಟ್‌ಫಾರ್ಮ್‌ಗಳು ಇರುವುದರಿಂದ ಬಸ್‌ ಚಾಲಕರು, ನಿರ್ವಾಹಕರು ಎಲ್ಲಿ ಬಸ್‌ ನಿಲುಗಡೆ ಮಾಡಬೇಕೆಂದು ಯೋಚಿಸಿದರೆ; ಪ್ರಯಾಣಿಕರು ಬಸ್‌ಗಳು ಎಲ್ಲಿ ನಿಲ್ಲುತ್ತವೆ ಎಂದು ತಡಕಾಡುವ ಸ್ಥಿತಿ ಎದುರಾಗಿದೆ.

ಪ್ರಯಾಣಿಕರು ಹಾಗೂ ಬಸ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದರೂ ನಿಲ್ದಾಣದ ಪರಿಸ್ಥಿತಿ ಬದಲಾಗಿಲ್ಲ. ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಸೇರಿ ಅನೇಕ ಸಮಸ್ಯೆಗಳು ಕಾಡುತ್ತಿವೆ.

ಚುನಾವಣೆ ವೇಳೆ ಭೂಮಿ ಪೂಜೆ:

ಹೊಸ ಬಸ್‌ ನಿಲ್ದಾಣ ನಿರ್ಮಾಣದ ಮೂಲಕ ಎಲ್ಲ ಸಮಸ್ಯೆಗಳಿಗೂ ಪೂರ್ಣವಿರಾಮ ಹಾಕಲು 2023ರ ಮಾರ್ಚ್‌ 24ರಂದು ಬಿ.ಡಿ ರಸ್ತೆಯ ಎಲ್‌ಐಸಿ ಕಚೇರಿ ಮುಂಭಾಗದ 6 ಎಕರೆ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿಯ ಅಧ್ಯಕ್ಷರಾಗಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ₹ 45 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ವಿಳಂಬವಾದ ಕಾಮಗಾರಿಗೆ 2024ರ ಫೆಬ್ರುವರಿ 1ರಂದು ಚಾಲನೆ ನೀಡಲಾಯಿತು.

ಇಂಗ್ಲಿಷ್‌ನ ‘ಟಿ’ ಅಕ್ಷರದ ವಿನ್ಯಾಸದಲ್ಲಿ ನೆಲಮಹಡಿಯೂ ಸೇರಿದಂತೆ, ‘ಜಿ’+2 ಮಾದರಿಯಲ್ಲಿ ನಿಲ್ದಾಣದ ಕಟ್ಟಡ ನಿರ್ಮಿಸಲಾಗುತ್ತಿದೆ. ಏಕಕಾಲಕ್ಕೆ 42 ಬಸ್‌ ನಿಲುಗಡೆ ಮಾಡಬಹುದು. ಜತೆಗೆ ನೆಲ ಮಹಡಿಯಲ್ಲಿ ಸಾರ್ವಜನಿಕರ ವಾಹನ ನಿಲುಗಡೆ ಹಾಗೂ ಇ.ವಿ. ಪ್ಲವರ್‌ ಪ್ಲಸ್‌ ಬಸ್‌ಗಳಿಗೆ ಚಾರ್ಜಿಂಗ್‌ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮೊದಲು ಬಸ್‌ ನಿಲ್ದಾಣ, ಮೊದಲ ಮಹಡಿಯಲ್ಲಿ ವಾಣಿಜ್ಯ ಮಳಿಗೆ ಹಾಗೂ ಎರಡನೇ ಮಹಡಿಯನ್ನು ಕಚೇರಿ ಬಳಕೆಗೆ ಮೀಸಲಿಡಲಾಗಿದೆ. ಪ್ರತಿ ಮಹಡಿಯಲ್ಲೂ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತದೆ ಎಂದು ನಿಲ್ದಾಣದ ‘ನೀಲನಕ್ಷೆ’ಯಲ್ಲಿ ತೋರಿಸಲಾಗಿದೆ.

ಭೂಮಿಪೂಜೆ ನೆರವೇರಿಸಿದ ಜಾಗದ ಸುತ್ತಲೂ ಈವರೆಗೆ ತಡೆಗೋಡೆ ಮಾದರಿಯಲ್ಲಿ ಶೀಟ್‌ಗಳನ್ನು ಆಳವಡಿಸಲಾಗಿದೆ. ಒಳ ಭಾಗದಲ್ಲಿ ಬೃಹತ್‌ ಗುಂಡಿ ತೆಗೆಯಲಾಗಿದ್ದು ಮಳೆ ನೀರು ನಿಂತು ಕೆರೆಯಂತಾಗಿದೆ. ಆದರೆ ಕಾಮಗಾರಿ ಮಾತ್ರ ನಡೆಯುತ್ತಿಲ್ಲ.

‘ಕಾಮಗಾರಿ ಟೆಂಡರ್‌ ಪಡೆದ ಕಂಪನಿಯವರು ಮಳೆಯ ಕಾರಣ ಜೂನ್‌ನಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ. ಮಳೆ ಸಂಪೂರ್ಣ ಬಿಡುವು ನೀಡಿದ ಬಳಿಕ ಪುನಃ ಆರಂಭಿಸುವುದಾಗಿ ಹೇಳಿದ್ದಾರೆ. 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ನಿಗಮದ ಎಇಇ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿಯೇ 18 ತಿಂಗಳು ಕಳೆದಿದೆ. ಅಧಿಕೃತವಾಗಿ ಕಾಮಗಾರಿ ಪ್ರಾರಂಭವಾಗಿ 9 ತಿಂಗಳು ಆಗಿದ್ದು, ಗಡುವಿನ ಪ್ರಕಾರ ಇನ್ನೂ 9 ತಿಂಗಳು ಮಾತ್ರ ಉಳಿದಿದೆ. ಆದರೆ, ಹೈಟೆಕ್‌ ಬಸ್‌ ನಿಲ್ದಾಣಕ್ಕೆ ಮಾತ್ರ ಅಡಿಪಾಯವನ್ನೇ ಹಾಕದ್ದರಿಂದ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಹಳೆ ಬಸ್‌ ನಿಲ್ದಾಣ ಕಿರಿದಾಗಿರುವ ಕಾರಣ ₹ 45 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಮಳೆಯ ಕಾರಣಕ್ಕೆ ಕೆಲಸಕ್ಕೆ ಬಿಡುವು ನೀಡಲಾಗಿದೆ.
ಶ್ರೀನಿವಾಸ ಮೂರ್ತಿ, ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.