ADVERTISEMENT

ಹಿರಿಯೂರು | ಉದ್ಘಾಟನೆಗೊಳ್ಳದ ಕೆಎಸ್‌ಆರ್‌ಟಿಸಿ ಡಿಪೋ

ಹಿರಿಯೂರು; ವಿವಿಧ ಸಂಘಟನೆಗಳ ಹೋರಾಟ; ಜನರಲ್ಲಿ ನಿರಾಸೆ

ಸುವರ್ಣಾ ಬಸವರಾಜ್
Published 9 ಅಕ್ಟೋಬರ್ 2024, 7:36 IST
Last Updated 9 ಅಕ್ಟೋಬರ್ 2024, 7:36 IST
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಸಾರಿಗೆ ಸಂಸ್ಥೆ ಡಿಪೋ
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಸಾರಿಗೆ ಸಂಸ್ಥೆ ಡಿಪೋ   

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿ 2022ರ ಜೂನ್ 6ರಂದು ಶಂಕುಸ್ಥಾಪನೆಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕ (ಡಿಪೋ)ದ ಕಾರ್ಯಾರಂಭಕ್ಕೆ ವಿವಿಧ ಸಂಘ– ಸಂಸ್ಥೆಗಳು ಹೋರಾಟ ನಡೆಸುತ್ತ ಬಂದಿದ್ದರೂ ಇನ್ನೂ ಉದ್ಘಾಟನೆಗೆ ಕಾಲ ಕೂಡಿ ಬಾರದಿರುವುದು ತಾಲ್ಲೂಕಿನ ಜನರಲ್ಲಿ ನಿರಾಸೆ ಮೂಡಿಸಿದೆ.

ಜಿಲ್ಲೆಯಲ್ಲಿ ಚಿತ್ರದುರ್ಗ ಹೊರತುಪಡಿಸಿದರೆ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಹಿರಿಯೂರು. ಬೀದರ್– ಶ್ರೀರಂಗಪಟ್ಟಣ, ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ತಾಣವಾಗಿದೆ. ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳಲ್ಲಿ ಸಾರಿಗೆ ಸಂಸ್ಥೆ ಡಿಪೋಗಳು ಕಾರ್ಯಾರಂಭ ಮಾಡಿವೆ. ಆದರೆ, ಸಚಿವ ಸ್ಥಾನದ ಕ್ಷೇತ್ರ ಎಂಬ ಖ್ಯಾತಿಯ ಹಿರಿಯೂರಿಗೆ ಕೆ.ಎಚ್. ರಂಗನಾಥ್, ಡಿ.ಮಂಜುನಾಥ್, ಡಿ.ಸುಧಾಕರ್ ಸಚಿವರಾಗಿದ್ದರೂ ಡಿಪೋ ಭಾಗ್ಯ ಮಾತ್ರ ಸಿಕ್ಕಿಲ್ಲ.

ಡಿಪೋ ಆರಂಭಿಸಬೇಕೆಂಬ ಒತ್ತಾಯ 1998ರಲ್ಲಿ ನೂತನ ಕೆಎಸ್‌ಆರ್‌ಟಿಸಿ ನಿಲ್ದಾಣದ ಉದ್ಘಾಟನೆಗೆ ಬಂದಿದ್ದ ಸಚಿವ ಪಿ.ಜಿ.ಆರ್. ಸಿಂಧ್ಯಾ ಕಾಲದಲ್ಲೂ ಕೇಳಿಬಂದಿತ್ತು.

ADVERTISEMENT

2010ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತದ ವೇಳೆ ಸಚಿವರಾಗಿದ್ದ ಡಿ.ಸುಧಾಕರ್ ಅವರು ಸಾರಿಗೆ ಮಂತ್ರಿಯಾಗಿದ್ದ ಆರ್.ಅಶೋಕ್ ಅವರನ್ನು ಕರೆತಂದು ಹುಳಿಯಾರು ರಸ್ತೆಯಲ್ಲಿ ತಾಲ್ಲೂಕು ಕ್ರೀಡಾಂಗಣದ ಪಕ್ಕ ಸಾರಿಗೆ ಸಂಸ್ಥೆ ಡಿಪೋ ಕಾಮಗಾರಿಗೆ ಪೂಜೆ ಮಾಡಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಿಂದ ಡಿಪೋ ನಿರ್ಮಾಣ ನನೆಗುದಿಗೆ ಬಿದ್ದಿತ್ತು.

ಮರುಚಾಲನೆ: 2017ರಲ್ಲಿ ಪೂರ್ಣಿಮಾ ಶ್ರೀನಿವಾಸ್ ಶಾಸಕಿಯಾಗಿದ್ದಾಗ ತಾಲ್ಲೂಕಿನ ಪಟ್ರೆಹಳ್ಳಿ ಸಮೀಪ ಆದಿವಾಲ ಗ್ರಾಮದ ಸರ್ವೆ ನಂಬರ್ 109ರಲ್ಲಿ ಎಂಟು ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಿರುವುದಾಗಿ ತಿಳಿಸಿ, ಡಿಪೋ ನಿರ್ಮಾಣಕ್ಕೆ ₹ 10 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿರುವುದಾಗಿ ತಿಳಿಸಿದ್ದರು. ಕೋವಿಡ್ ಕಾರಣದಿಂದ ಕಾಮಗಾರಿ ಆರಂಭವಾಗಲೇ ಇಲ್ಲ. 2022 ಜೂನ್ ತಿಂಗಳಲ್ಲಿ ಮತ್ತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಕರೆಯಿಸಿ 2010ರಲ್ಲಿ ಗುರುತಿಸಿದ್ದ ಹಳೆಯ ಜಾಗದಲ್ಲೇ ಅಂದಾಜು ₹ 6 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ಎರಡೂವರೆ ವರ್ಷ ಕಳೆದರೂ ಡಿಪೋ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ತಾಲ್ಲೂಕು ರೈತ ಸಂಘದ ಎರಡೂ ಬಣಗಳು, ಪ್ರಗತಿಪರ ಸಂಘಟನೆಗಳು ಡಿಪೋ ಉದ್ಘಾಟಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ್ದವು.

ಸೆ. 30ರಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿಗೆ ಮುಂದಾದಾಗ 2025 ಫೆಬ್ರುವರಿ ಒಳಗೆ ಡಿಪೋ ಉದ್ಘಾಟಿಸುವ ಭರವಸೆಯನ್ನೂ ಕೆಎಸ್ಆರ್‌ಟಿಸಿ ಅಧಿಕಾರಿಗಳು ನೀಡಿದ್ದರು.

ಹಿರಿಯೂರಿನ ಡಿಪೋವನ್ನು ತಕ್ಷಣ ಉದ್ಘಾಟಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.
–ಕೆ.ಸಿ. ಹೊರಕೇರಪ್ಪ, ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ
26 ವರ್ಷಗಳ ಹಿಂದೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನಿರ್ಮಾಣವಾದಾಗಿನಿಂದ ಡಿಪೋ ಕನಸು ಕಾಣುತ್ತಿದ್ದೇವೆ. ಡಿಪೋ ಆದರೆ ಈ ಭಾಗದ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸಿಗುತ್ತದೆ.
–ಕೆ.ಟಿ. ತಿಪ್ಪೇಸ್ವಾಮಿ, ರೈತ ಸಂಘ ಮತ್ತು ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ

ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣ

‘ಡಿಪೋ ಕಟ್ಟಡದ ಸಿವಿಲ್ ಮತ್ತು ಎಲೆಕ್ಟ್ರಿಕ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಡೀಸೆಲ್ ಬಂಕ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ನವೆಂಬರ್ ಅಂತ್ಯದ ಒಳಗೆ ಅದು ಪೂರ್ಣಗೊಳ್ಳಲಿದೆ. ಆದಷ್ಟು ಶೀಘ್ರ ಡಿಪೋವನ್ನು ಲೋಕಾರ್ಪಣೆ ಮಾಡುತ್ತೇವೆ’ ಎಂದು ಕೆಎಸ್ಆರ್‌ಟಿಸಿ ಸಹಾಯಕ ಎಂಜಿನಿಯರ್ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿತ್ರದುರ್ಗಕ್ಕಿಂತ ಹೆಚ್ಚು ಬಸ್‌ ‘ಹಿರಿಯೂರಿನಲ್ಲಿ ಬೀದರ್– ಶ್ರೀರಂಗಪಟ್ಟಣ ಪುಣೆ– ಬೆಂಗಳೂರು ಹೆದ್ದಾರಿಗಳು ಹಾದು ಹೋಗಿದ್ದು ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಇಲ್ಲಿನ ನಿಲ್ದಾಣಕ್ಕೆ ಚಿತ್ರದುರ್ಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತವೆ. ಇಲ್ಲಿ ಡಿಪೋ ಆರಂಭವಾದಲ್ಲಿ ತುಮಕೂರು ಚಿಕ್ಕಮಗಳೂರು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಲವು ಪ್ರಮುಖ ಸ್ಥಳಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಓಡಿಸಬಹುದು. ಇದು ಸಂಸ್ಥೆಗೆ ಲಾಭದಾಯಕ ಕೂಡ. ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಡಿ. ಸುಧಾಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.