ADVERTISEMENT

ಚಿಕ್ಕಜಾಜೂರು | ಮೆಕ್ಕೆಜೋಳಕ್ಕೆ ಲದ್ದಿಹುಳು: ನಿಯಂತ್ರಣಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 13:52 IST
Last Updated 18 ಜುಲೈ 2024, 13:52 IST
<div class="paragraphs"><p>ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದ ಮೆಕ್ಕೆಜೋಳ ಹೊಲಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ಮಂಜುನಾಥ ಹಾಗೂ ತಜ್ಞರು ಭೇಟಿ ನೀಡಿದರು</p></div>

ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದ ಮೆಕ್ಕೆಜೋಳ ಹೊಲಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ಮಂಜುನಾಥ ಹಾಗೂ ತಜ್ಞರು ಭೇಟಿ ನೀಡಿದರು

   

ಚಿಕ್ಕಜಾಜೂರು: ಮೆಕ್ಕೆಜೋಳಕ್ಕೆ ಲದ್ದಿಹುಳು ಕಾಟ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ಮಂಜುನಾಥ ಸಲಹೆ ನೀಡಿದರು.

ಸಮೀಪದ ಹಿರೇಎಮ್ಮಿಗನೂರು, ಚಿಕ್ಕಎಮ್ಮಿಗನೂರು ಸೇರಿದಂತೆ ಹಲವೆಡೆ ಮೆಕ್ಕೆಜೋಳದ ಹೊಲಗಳಿಗೆ ಗುರುವಾರ ತಜ್ಞರ ತಂಡದೊಂದಿಗೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಿದರು.

ADVERTISEMENT

ಮೆಕ್ಕೆಜೋಳಕ್ಕೆ ಪ್ರಮುಖವಾಗಿ ಲದ್ದಿ ಹುಳದ ಬಾಧೆ ಕಾಣಿಸಿಕೊಂಡಿದ್ದು, ಇದು ಬೆಳೆಯನ್ನು ಹಾಳು ಮಾಡುತ್ತದೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ. ಮೋಡ ಕವಿದ ವಾತಾವರಣದಲ್ಲಿ ಹುಳುಗಳ ಹಾವಳಿ ಹೆಚ್ಚಾಗುತ್ತದೆ. 20ರಿಂದ 40 ದಿನಗಳ ಬೆಳೆಗೆ ಹುಳುಗಳು ಹೆಚ್ಚು ಹಾನಿ ಮಾಡುತ್ತವೆ. ಮೊದಲ ಹಂತದ ಹುಳುವಿನ ತತ್ತಿಗಳು ಮತ್ತು ಮರಿಹುಳುಗಳನ್ನು ಕೈಯಿಂದ ನಾಶಪಡಿಸಬೇಕು. ತತ್ತಿಗಳ ಪರತಂತ್ರ ಜೀವಿಯಾದ ಟ್ರೈಕೊಗ್ರಾಮಪ್ರಿಟಿಯೋಸಮ್‌ ಅನ್ನು ಪ್ರತಿ ಎಕರೆಗೆ 3 ಟ್ರೈಕೋಕಾರ್ಡ್‌ಗಳನ್ನು ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿಡಬೇಕು. ಮೆಟರೈಜೀಂ ಅನಿಸೋಷ್ಕಿಯೆಯನ್ನು ಪ್ರತಿ ಲೀಟರ್‌ ನೀರಿಗೆ 5 ಗ್ರಾಂನಷ್ಟು ಅಥವಾ ನ್ಯೂಮೋರಿಯಾ ರಿಲೈ ಅನ್ನು ಪ್ರತಿ ಲೀಟರ್‌ ನೀರಿಗೆ 3 ಗ್ರಾಂ ಬೆರೆಸಿ ಸಿಂಪಡಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ಹುಳುಬಾಧೆಯಿಂದ ಶೇ 20ರಷ್ಟು ಪೈರು ಹಾನಿಯಾಗಿದ್ದಲ್ಲಿ ಎಮಾಮೆಕ್ಸಿನ್‌ಬೆಂಜೋಯೇಟ್‌ ಶೇ 5 ರಷ್ಟು, ಎಸ್‌.ಜಿಯನ್ನು 0.4 ಗ್ರಾಂನಂತೆ ಅಥವಾ ಥೈಯೋಡಿಕಾರ್ಬ್‌ ಅನ್ನು 2 ಗ್ರಾಂನಷ್ಟನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ಸಿಂಪಡಣೆ ಮಾಡಬೇಕು. 10 ಕೆ.ಜಿ. ತೌಡು, 1 ಕೆ.ಜಿ. ಬೆಲ್ಲವನ್ನು 3 ಲೀಟರ್ ನೀರಿನೊಂದಿಗೆ ಬೆರೆಸಿ 24 ಗಂಟೆಗಳ ಕಾಲ ಹುದುಗಿಸಿ ಇಡಬೇಕು. ಇದಕ್ಕೆ 100 ಗ್ರಾಂ ಥೈಯೋಡಿಕಾರ್ಬ್‌ ಅನ್ನು ಮಿಶ್ರಣ ಮಾಡಿ ಸುಳಿಗೆ ಹಾಕಬೇಕು. ಮಾಹಿತಿಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ವಲಯ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಕೀಟತಜ್ಞ ಎಲ್‌. ಹನುಮಂತರಾಯ, ಬೇಸಾಯ ತಜ್ಞ ಕುಮಾರ್‌ನಾಯ್ಕ್‌, ಕೃಷಿ ಅಧಿಕಾರಿ ಮಂಜುನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.