ಚಿತ್ರದುರ್ಗ | ಬೆಂಕಿ ನಂದಿಸುವುದಕ್ಕಿಲ್ಲ ‘ಜಲವಾಹನ’
ಅಗ್ನಿ ಅವಘಡ; ತ್ವರಿತ ಕಾರ್ಯಾಚರಣೆಗೆ ತೊಡಕು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ
Published 8 ಏಪ್ರಿಲ್ 2024, 6:59 IST Last Updated 8 ಏಪ್ರಿಲ್ 2024, 6:59 IST ಚಿತ್ರದುರ್ಗದ ಅಗ್ನಿಶಾಮಕ ಠಾಣೆ ಅವರಣದಲ್ಲಿ ನಿಂತಿರುವ 16,000 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲವಾಹನ
ಚಿತ್ರದುರ್ಗ: ಪ್ರಸಕ್ತ ವರ್ಷದ ಮೊದಲ 3 ತಿಂಗಳಲ್ಲೇ ಜಿಲ್ಲೆಯಾದ್ಯಂತ 645 ಬೆಂಕಿ ಅವಘಡಗಳು ಸಂಭವಿಸಿವೆ. ಆದರೆ, ತ್ವರಿತ ಕಾರ್ಯಾಚರಣೆಗೆ ಅಗ್ನಿ ಶಾಮಕ ವಾಹನಗಳ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ.
‘15 ವರ್ಷ ಮೀರಿದ ವಾಹನ ಬಳಸುವಂತಿಲ್ಲ’ ಎಂಬ ಕೇಂದ್ರ ಸರ್ಕಾರದ ನಿಯಮದಿಂದಾಗಿ ಜಿಲ್ಲೆಯ 5 ತಾಲ್ಲೂಕು ಕೇಂದ್ರಗಳ ಅಗ್ನಿಶಾಮಕ ಠಾಣೆಯಲ್ಲಿ ತಲಾ ಒಂದೊಂದು ವಾಹನ ಕಾರ್ಯ ನಿರ್ವಹಿಸುತ್ತಿವೆ. ಉಳಿದವು ಎರಡು ತಿಂಗಳಿನಿಂದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಿವೆ.
ಜಿಲ್ಲಾ ಕೇಂದ್ರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ 4,500 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ 2 ಹಾಗೂ 16,000 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ 1 ಸೇರಿದಂತೆ ಒಟ್ಟು 3 ‘ಜಲವಾಹನ’ ಕಾರ್ಯಾಚರಣೆ ನಡೆಸುತ್ತಿವೆ. ಉಳಿದ 2 ವಾಹನಗಳು ಸಂಚಾರ ಸ್ಥಗಿತಗೊಳಿಸಿವೆ. ಇದರಿಂದ ಕೆಲವು ಬೆಂಕಿ ಅವಘಡ ಪ್ರಕರಣಗಳಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಲು ತೊಡಕಾಗುತ್ತಿದೆ.
‘ಐದು ವಾಹನಗಳಿದ್ದಾಗ ಎರಡ್ಮೂರು ಬೆಂಕಿ ಅವಘಡ ಸಂಭವಿಸಿದರೂ, ತ್ವರಿತವಾಗಿ ಘಟನಾ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಲು ಅನುಕೂಲವಾಗುತ್ತಿತ್ತು. 15 ವರ್ಷ ಮೀರಿದ ವಾಹನ ಬಳಸಬಾರದೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಎರಡು ವಾಹನ ಗುಜರಿ ಸೇರುತ್ತಿದ್ದು, ಮೂರು ಜಲವಾಹನಗಳಷ್ಟೇ ಬಳಕೆಯಾಗುತ್ತಿವೆ. ಏಕಕಾಲಕ್ಕೆ ಎರಡಕ್ಕಿಂತ ಹೆಚ್ಚು ಬೆಂಕಿ ಅನಾಹುತಗಳಾದಾಗ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ಅಗ್ನಿಶಾಮಕ ಠಾಣೆ ಸಿಬ್ಬಂದಿ.
ಚಿತ್ರದುರ್ಗ ಅಗ್ನಿಶಾಮಕ ಠಾಣೆ ಆವರಣದಲ್ಲಿರುವ ಒಂದು ಕೊಳವೆಬಾವಿಯಲ್ಲಿ ನೀರು ಬರುತ್ತಿದೆ. ಠಾಣೆಗೆ ವಾಹನ ಬಂದ ತಕ್ಷಣ ನೀರು ತುಂಬಿಸಲಾಗುತ್ತದೆ. ಆದರೆ, ಅವಘಡದ ಸ್ಥಳದಲ್ಲಿ ಹೆಚ್ಚು ನೀರು ಬೇಕಾದರೆ ಇಲ್ಲವೇ ಅದೇ ಮಾರ್ಗದಲ್ಲಿ ಬೇರೆ ಸ್ಥಳಕ್ಕೆ ಹೋಗಬೇಕಾದರೆ ನೀರು ಹುಡುಕಲು ಸಿಬ್ಬಂದಿ ಪರದಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ಈವರೆಗೂ ಬಹುತೇಕ ಬಣವೆ, ತೋಟಗಳಲ್ಲೇ ಹೆಚ್ಚು ಅವಘಡ ಸಂಭವಿಸುತ್ತಿವೆ ಎಂಬುದು ಆತಂಕಕಾರಿ ಸಂಗತಿ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ. ಬೆಳಿಗ್ಗೆ 8ರ ವೇಳೆಗೆ ಸೂರ್ಯ ಪ್ರಖರವಾಗುತ್ತಿದ್ದಾನೆ. ಜತೆಗೆ ಬಿಸಿ ಗಾಳಿಯ ವೇಗವೂ ಹೆಚ್ಚಾಗಿರುವ ಕಾರಣ ನೆಲಕ್ಕೆ ಬೀಳುವ ಒಂದು ಕಿಡಿಯಿಂದಲೂ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತಿದೆ.
‘ಚಿತ್ರದುರ್ಗ ತಾಲ್ಲೂಕಿನ ಗೋನೂರು, ಗುಡ್ಡದ ರಂಗವ್ವನಹಳ್ಳಿ, ಬೆಳಘಟ್ಟ, ಹಾಯ್ಕಲ್, ತಮಟಕಲ್ಲು, ಲಿಂಗದಹಳ್ಳಿ, ಐಮಂಗಲ, ಕ್ಯಾದಿಗೆರೆ, ಬುರುಜನರೊಪ್ಪ, ಮರಡಿಹಳ್ಳಿ ಭಾಗದಲ್ಲಿ ಹೆಚ್ಚು ಅವಘಡಗಳು ಸಂಭವಿಸಿವೆ. ಉಳಿದಂತೆ ತೋಟಗಳು ಹೆಚ್ಚಿರುವ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಭಾಗದಲ್ಲಿ ನಿತ್ಯವೂ ಅಗ್ನಿ ಅವಘಡದಂತಹ ಪ್ರಕರಣ ದಾಖಲಾಗುತ್ತಿವೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಅಗಡಿ.
ಹಿರಿಯೂರಿನ ಅಗ್ನಿಶಾಮಕ ಠಾಣೆಯಲ್ಲಿರುವ ವಾಹನ
ನಾಯಕನಹಟ್ಟಿ ಸಮೀಪದ ಕಾವಲುಬಸವೇಶ್ವರ ನಗರ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಜಮೀನು ಕಾಯ್ದಿರಿಸಿರುವುದು
ಜಿಲ್ಲೆಯಲ್ಲಿ ಜಲವಾಹನಗಳ ಕೊರತೆ ಇದೆ. ಅನಿವಾರ್ಯ ಸಮಯದಲ್ಲಿ ದಾವಣಗೆರೆಯಿಂದ ವಾಹನ ಕರೆಯಿಸಿಕೊಳ್ಳುತ್ತೇವೆ. ಬರದ ಕಾರಣಕ್ಕೆ ನೀರಿನ ಸಮಸ್ಯೆಯೂ ಎದುರಾಗಿದೆ. ಹೆಚ್ಚುವರಿ ವಾಹನಗಳನ್ನು ನೀಡಿದರೆ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ಸೋಮಶೇಖರ್ ವಿ.ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಬೇಕು ಎಂದು ಸ್ಥಳ ಪರಿಶೀಲನೆ ನಡೆಸಿ ಒಂದು ಹಂತದ ಸಿದ್ಧತೆ ಪೂರ್ಣಗೊಳಿಸಲಾಗಿತ್ತು. ಸಚಿವ ಸಂಪುಟದ ಒಪ್ಪಿಗೆ ಮತ್ತು ಅನುದಾನ ಮಂಜೂರಾದ ಕೂಡಲೇ ಹಸಿರು ನಿಶಾನೆ ದೊರೆಯಲಿದೆ.
ಪಿ.ಎಸ್.ಜಯರಾಮಯ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗನಾಯಕನಹಟ್ಟಿ ತಳಕು ಹೋಬಳಿಯ ಗಡಿಗ್ರಾಮಗಳಲ್ಲಿ ಅಗ್ನಿಅವಘಡ ಸಂಭವಿಸಿದರೆ ಚಳ್ಳಕೆರೆಯಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬಣವೆಗಳು ಸುಟ್ಟಿರುತ್ತವೆ. ಇದರಿಂದ ರೈತರಿಗೆ ನಷ್ಟ ಹೆಚ್ಚು. ಎರಡು ಹೋಬಳಿಗೆ ಒಂದರಂತೆ ಠಾಣೆ ನಿರ್ಮಿಸಿದರೆ ಅನುಕೂಲ.
ಟಿ.ಕೃಷ್ಣಮೂರ್ತಿ ಗ್ರಾಮಸ್ಥ ತಳಕುಬೆಂಕಿ ಅವಘಡಗಳು (ಜ.1 ರಿಂದ ಏ 6)
ತಾಲ್ಲೂಕು ಪ್ರಕರಣ ಚಿತ್ರದುರ್ಗ 141 ಚಳ್ಳಕೆರೆ 76 ಹಿರಿಯೂರು 170 ಹೊಸದುರ್ಗ 159 ಹೊಳಲ್ಕೆರೆ 83 ಮೊಳಕಾಲ್ಮುರು 36 (ಮಾಹಿತಿ: ಅಗ್ನಿಶಾಮಕ ಠಾಣೆ )
ಒಂದು ವಾಹನ ಕಾಯ್ದಿರಿಸಬೇಕು
‘ಈಗ ನಮ್ಮ ಬಳಿ ಮೂರು ಜಲವಾಹನಗಳಿವೆ. ಚುನಾವಣೆ ಸಮಯವಾದ್ದರಿಂದ ಮುಖ್ಯಮಂತ್ರಿ ಕೇಂದ್ರ ಮತ್ತು ರಾಜ್ಯ ಸಂಪುಟದ ಸಚಿವರು ಸೇರಿದಂತೆ ಹಲವು ಗಣ್ಯರು ಆಗಾಗ ಭೇಟಿ ನೀಡುತ್ತಾರೆ. ಅವರು ಪಾಲ್ಗೊಳ್ಳುವ ಕಾರ್ಯಕ್ರಮದ ಸ್ಥಳದ ಬಳಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಒಂದು ಜಲವಾಹನ ಕಾಯ್ದಿರಿಸಬೇಕು. ಹಾಗಾಗಿ ಎರಡು ವಾಹನವಷ್ಟೇ ನಿಯಮಿತವಾಗಿ ಸೇವೆಗೆ ಲಭ್ಯವಾಗುತ್ತಿವೆ. ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಬೆಂಕಿ ಅನಾಹುತಗಳಾದರೆ ಸಮೀಪದ ತಾಲ್ಲೂಕು ಇಲ್ಲವೇ ನೆರೆಯ ಜಿಲ್ಲೆಗಳಿಂದ ವಾಹನ ತರಿಸುವಂತಾಗಿದೆ’ ಎನ್ನುತ್ತಾರೆ ಸಿಬ್ಬಂದಿ.
ನನೆಗುದಿಗೆ ಬಿದ್ದ ಅಗ್ನಿಶಾಮಕ ಠಾಣೆ ವಿ.ವೀರಣ್ಣ
ಧರ್ಮಪುರ: ಒಂದು ಕಡೆ ಬಿಸಿಲ ಬೇಗೆ ಬತ್ತಿದ ಜಲಮೂಲ ಒಣಗಿದ ತೋಟಗಳು..ಈ ಮಧ್ಯೆ ಸಂಭವಿಸುತ್ತಿರುವ ಅಗ್ನಿ ಅವಘಡಗಳಿಗೆ ರೈತರು ಹೈರಾಣಾಗಿದ್ದಾರೆ. ಜಿಲ್ಲೆಯ ಗಡಿಭಾಗದ ದೊಡ್ಡ ಹೋಬಳಿ ಧರ್ಮಪುರ. ಹಿರಿಯೂರು ತಾಲ್ಲೂಕು ಕೇಂದ್ರದಿಂದ 40ಕಿ.ಮೀ. ದೂರದಲ್ಲಿದೆ. ಹೋಬಳಿಯ ಗಡಿ ಗ್ರಾಮಗಳಾದ ಮದ್ದಿಹಳ್ಳಿ ಹಲಗಲದ್ದಿ ಹೊಸಕೆರೆ ಬೇತೂರು ಪಾಳ್ಯ ಕಣಜನಹಳ್ಳಿ ಸಕ್ಕರ ಕೋಡಿಹಳ್ಳಿ ಅರಳೀಕೆರೆ ಬೆಟ್ಟಗೊಂಡನಹಳ್ಳಿ ಗ್ರಾಮಗಳು ಇನ್ನೂ ದೂರ. ಹೋಬಳಿ ವ್ಯಾಪ್ತಿಯಲ್ಲಿ ಬೆಂಕಿ ಅವಘಡಗಳು ನಡೆದಾಗ ದೂರದ ಹಿರಿಯೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಇಲ್ಲಿಗೆ ಬರಲು ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಇದರಿಂದ ಸಾಕಷ್ಟು ಹಾನಿ ಸಂಭವಿಸುವುದು ಸಾಮಾನ್ಯವಾಗಿದೆ. ಹಿರಿಯೂರು ಅಗ್ನಿಶಾಮಕ ಠಾಣೆಯಲ್ಲಿ ಎರಡು ವಾಹನಗಳಿವೆ. ಅದರಲ್ಲಿ ಒಂದು ತಾಂತ್ರಿಕ ದೋಷದಿಂದ ನಿಂತಲ್ಲಿಯೇ ಇದೆ. ಕೆಲವು ಸಂದರ್ಭದಲ್ಲಿ ಚಿತ್ರದುರ್ಗದಿಂದ ವಾಹನ ಕರೆಸಿಕೊಳ್ಳುವಂತ ಪರಿಸ್ಥಿತಿ ಇದೆ. ‘ಕಳೆದ ವರ್ಷ ತಾಲ್ಲೂಕಿನಲ್ಲಿ 394 ಅಗ್ನಿ ಅವಘಡಗಳು ನಡೆದಿವೆ. ಈ ವರ್ಷ ಈಗಾಗಲೇ 170 ಬೆಂಕಿ ಅವಘಡಗಳು ನಡೆದಿವೆ. ಇದರ ಜತೆಗೆ ವೇದಾವತಿ ನದಿಯಲ್ಲಿ ನೀರಿಗೆ ಬಿದ್ದಿರುವ 25 ಪ್ರಕರಣಗಳು ನಡೆದಿವೆ’ ಎನ್ನುತ್ತಾರೆ ಹಿರಿಯೂರು ಅಗ್ನಿಶಾಮಕ ಠಾಣಾಧಿಕಾರಿ ಜಿ. ಸುಭಾನ್ ಸಾಬ್. ದೂರದ ಹಿರಿಯೂರಿನಿಂದ ವಾಹನ ಬರಲು ವಿಳಂಬವಾಗುವುದನ್ನು ತಪ್ಪಿಸಲು ಧರ್ಮಪುರದಲ್ಲಿಯೇ ಅಗ್ನಿಶಾಮಕ ಠಾಣೆ ಪ್ರಾರಂಭಿಸಲು 2021-22ರಲ್ಲಿ ಚಿಂತನೆ ನಡೆಸಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದವು. ಕೃಷ್ಣಾಪುರದಲ್ಲಿ ಎರಡು ಎಕರೆ ಸರ್ಕಾರಿ ಜಾಗ ಜೊತೆಗೆ ಪಕ್ಕದಲ್ಲಿಯೇ ಇದ್ದ ಖಾಸಗಿಯವರಿಂದ ಒಂದು ಎಕರೆ ಸೇರಿ ಮೂರು ಎಕರೆ ಜಾಗ ಸಹ ಗುರುತಿಸಲಾಗಿತ್ತು. ಸ್ಥಳ ವೀಕ್ಷಣಗೆ ಬಂದ ಅಧಿಕಾರಿಗಳು ಮೌಕಿಕವಾಗಿ ಒಪ್ಪಿಗೆ ಸಹ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣರು ಸಿಹಿ ಹಂಚಿ ಸಂಭ್ರಮಿಸಿದ್ದರು. ಆದರೆ ಅದು ಮರೀಚಿಕೆಯಾಗಿಯೇ ಉಳಿಯಿತು. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಬೇಕಿದೆ. ಈ ಮೂಲಕ ಅನಾಹುತ ತಪ್ಪಿಸಬೇಕಿದೆ ಎಂಬುದು ಗ್ರಾಮೀಣರ ಒತ್ತಾಯ.
ಸ್ಥಳಕ್ಕೆ ತಲುಪಲು ಹರಸಾಹಸ ಶ್ವೇತಾ.ಜಿ
ಹೊಸದುರ್ಗ: ಪ್ರತಿ ವರ್ಷ ಜನವರಿಯಿಂದ ಮೇವರೆಗೆ ಅಗ್ನಿ ಅವಘಡಗಳ ಸಂಭವ ಸಾಮಾನ್ಯ. ಬರಗಾಲದ ಕಾರಣಕ್ಕೆ ಈ ಸಮಸ್ಯೆ ಈಗ ತೀವ್ರವಾಗಿದೆ. 2001ರಲ್ಲೇ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಠಾಣೆ ಆರಂಭಿಸಲಾಯಿತು. ಠಾಣೆಯಲ್ಲಿ 20 ಸಿಬ್ಬಂದಿಗಳಿದ್ದು ಅಗತ್ಯವಾದ ನೀರಿನ ಸೌಲಭ್ಯವೂ ಇದೆ. ಆದರೆ ಠಾಣೆಯಲ್ಲಿ ಒಂದೇ ವಾಹನವಿದ್ದು ಸಿಬ್ಬಂದಿಗಳು ಅಗ್ನಿ ಅವಘಡ ಸ್ಥಳಕ್ಕೆ ತಲುಪಲು ಹರಸಾಹಸ ಪಡುವಂತಾಗಿದೆ. ಜನವರಿಯಿಂದ ಏಪ್ರಿಲ್ 5ರವರೆಗೂ ಒಟ್ಟು 139 ಬೆಂಕಿ ಅವಘಡಗಳು ಸಂಭವಿಸಿವೆ. ನಿತ್ಯ ಠಾಣೆಯಲ್ಲಿನ ಕೊಳವೆಬಾವಿ ಮೂಲಕ ನೀರು ತುಂಬಿಸಲಾಗುತ್ತಿದೆ. ಸದ್ಯ ನೀರಿಗೆ ಕೊರತೆಯಿಲ್ಲ. ತುರ್ತು ಸಂದರ್ಭದಲ್ಲಿ ಕೆರೆ ಕಾಲುವೆಗಳಲ್ಲಿನ ನೀರು ತುಂಬಿಸಲಾಗುತ್ತದೆ. ಆದರೆ ಬರದ ಪರಿಸ್ಥಿತಿಯಿಂದಾಗಿ ನೀರಿನ ಹುಡುಕಾಟ ಹೆಚ್ಚಾಗಿದೆ. ಠಾಣೆಯಲ್ಲಿ ಈ ಹಿಂದೆ ಎರಡು ಜಲವಾಹನ ಇದ್ದವು. ಒಂದು ವಾಹನ 15 ವರ್ಷ ಹಳೆಯದಾಗಿದ್ದದು ಸಂಚಾರಕ್ಕೆ ಅವಕಾಶವಿಲ್ಲ. ತಾಲ್ಲೂಕಿನಾದ್ಯಂತ ಒಂದೇ ವಾಹನ ಸಂಚರಿಸುತ್ತದೆ. ‘ಒಂದು ಕಡೆ ಬೆಂಕಿ ನಂದಿಸಲು ಹೋದಾಗ ಮತ್ತೊಂದು ಕಡೆ ಅವಘಡ ನಡೆದಿರುತ್ತದೆ. ನಾವು ಸ್ಥಳ ತಲುಪುವಷ್ಟರಲ್ಲಿ ಅರ್ಧಭಾಗ ನಷ್ಟ ಆಗಿರುತ್ತದೆ. ಶ್ರೀರಾಂಪುರ ಭಾಗದಲ್ಲಿ ಬೆಂಕಿ ಅವಘಡ ನಡೆದರೆ ಅಲ್ಲಿಗೆ ಹೋಗಲು 30 ನಿಮಿಷ ಬೇಕು. ಒಂದೇ ವಾಹನದ ಕಾರಣಕ್ಕೆ ಅವಘಟದ ಸ್ಥಳಕ್ಕೆ ಸೂಕ್ತ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಅಗ್ನಿಶಾಮಕ ಠಾಣೆ ಸಹಾಯಕ ಅಧಿಕಾರಿ ಬಿ.ವೈ. ಗುಡಗನಟ್ಟಿ. ಬೆಂಕಿ ಅವಘಡದ ಸಂದರ್ಭ ಅಂತರಘಟ್ಟೆ ಅಜ್ಜಂಪುರ ಹೊಳಲ್ಕೆರೆ ಚಿಕ್ಕನಾಯಕನಹಳ್ಳಿ ಹಿರಿಯೂರು ಚಿತ್ರದುರ್ಗ ಕಡೆಗಳಿಂದಲೂ ವಾಹನ ಹಾಗೂ ಸಿಬ್ಬಂದಿ ಕರೆಯಿಸಲಾಗುತ್ತಿದೆ. ಚುನಾವಣೆ ಸೇರಿದಂತೆ ಹಲವು ಕೆಲಸಗಳ ಸಮಯದಲ್ಲಿ ಹಗಲು– ರಾತ್ರಿ ಕೆಲಸ ಮಾಡಲಾಗುತ್ತದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.
250ಕ್ಕೂ ಹೆಚ್ಚು ಗ್ರಾಮಕ್ಕೆ ಒಂದೇ ಠಾಣೆ ವಿ.ಧನಂಜಯ
ನಾಯಕನಹಟ್ಟಿ: ಚಳ್ಳಕೆರೆ ತಾಲ್ಲೂಕು ಕೇಂದ್ರದಲ್ಲಿರುವ ಅಗ್ನಿಶಾಮಕ ಠಾಣೆ ಸುಮಾರು 250ಕ್ಕೂ ಹೆಚ್ಚು ಗ್ರಾಮಗಳ ಕಾರ್ಯಕ್ಷೇತ್ರವನ್ನು ಹೊಂದಿದೆ. ಇಲ್ಲಿನ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಕಾರ್ಯಭಾರದ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ತಾಲ್ಲೂಕು ಕೇಂದ್ರವು ಕಸಬಾ ಸೇರಿದಂತೆ ನಾಯಕನಹಟ್ಟಿ ತಳಕು ಪರಶುರಾಂಪುರ ಹೋಬಳಿ ಕೇಂದ್ರ ಹೊಂದಿದೆ. ಚಳ್ಳಕೆರೆಯ ನಗರಸಭೆ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸೇರಿ ತಾಲ್ಲೂಕಿನ ಕಸಬಾ ಮತ್ತು ಪರಶುರಾಂಪುರ ಹೋಬಳಿಗಳಿಂದ 20 ನಾಯಕನಹಟ್ಟಿ ತಳಕು ಹೋಬಳಿಗಳಿಂದ 20 ಗ್ರಾಮ ಪಂಚಾಯಿತಿಗಳಿವೆ. ಚಳ್ಳಕೆರೆಯಿಂದ ಚಿತ್ರದುರ್ಗ ತಾಲ್ಲೂಕಿನ ಗಡಿಗೆ 20 ಕಿ.ಮೀ. ಹಿರಿಯೂರು ಗಡಿಗೆ 25 ಪಾವಗಡಕ್ಕೆ 50 ಮೊಳಕಾಲ್ಮುರು 40 ಹಾಗೂ ಜಗಳೂರು ಗಡಿಗೆ 35 ಕಿ.ಮೀ. ದೂರ ಇದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಸುಮಾರು 230ರಿಂದ 250 ಹಳ್ಳಿಗಳಲ್ಲಿ ಎಲ್ಲಿಯೇ ಅಗ್ನಿ ಅವಘಡಗಳು ಸಂಭವಿಸಿದರೂ ಇರುವುದೊಂದೇ ಚಳ್ಳಕೆರೆಯ ಅಗ್ನಿಶಾಮಕ ಠಾಣೆ. ಪರಶುರಾಂಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ 5 ಎಕರೆ ಮತ್ತು ನಾಯಕನಹಟ್ಟಿ ಸಮೀಪದ ಕಾವಲು ಬಸವೇಶ್ವರ ನಗರದ ಬಳಿ 5 ಎಕರೆ ಜಾಗವನ್ನು ಅಗ್ನಿಶಾಮಕ ಠಾಣೆಗೆ ಅಧಿಕಾರಿಗಳು ಗುರುತಿಸಿದ್ದಾರೆ. ಆದರೆ ಠಾಣೆ ಸ್ಥಾಪನೆಗೆ ಸರ್ಕಾರದಿಂದ ಅನುದಾನ ಮತ್ತು ತಾಂತ್ರಿಕ ಅನುಮೋದನೆ ದೊರೆಯುತ್ತಿಲ್ಲ. ಹಲವು ವರ್ಷಗಳಿಂದ ಪರಶುರಾಂಪುರ ನಾಯಕನಹಟ್ಟಿ ಹೋಬಳಿ ಕೇಂದ್ರದ ರೈತರು ಪ್ರಗತಿಪರರು ಹೋರಾಟಗಾರರು ಜನಪ್ರತಿನಿಧಿಗಳ ಮೂಲಕ ಅಗ್ನಿಶಾಮಕ ಠಾಣೆ ಸ್ಥಾಪಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ. 15 ವರ್ಷಗಳಿಂದ ಈ ಬೇಡಿಕೆಗೆ ಗೃಹ ಇಲಾಖೆ ಮತ್ತು ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಸಕಾಲಕ್ಕೆ ಬೆಂಕಿ ನಂದಿಸಲು ಸೇವೆ ಲಭಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.