ADVERTISEMENT

ಚಿತ್ರದುರ್ಗ: ಜಿಲ್ಲಾ ಕ್ರೀಡಾಂಗಣಕ್ಕೆ ಮೂಲಸೌಲಭ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 6:03 IST
Last Updated 5 ಡಿಸೆಂಬರ್ 2023, 6:03 IST
ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಚರಂಡಿಗೆ ಹಾಕಿದ ಸ್ಲ್ಯಾಬ್‌ ಕಿತ್ತುಹೋಗಿದ್ದು, ಆಸನದ ವ್ಯವಸ್ಥೆಯೂ ಸರಿಯಾಗಿಲ್ಲ
ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಚರಂಡಿಗೆ ಹಾಕಿದ ಸ್ಲ್ಯಾಬ್‌ ಕಿತ್ತುಹೋಗಿದ್ದು, ಆಸನದ ವ್ಯವಸ್ಥೆಯೂ ಸರಿಯಾಗಿಲ್ಲ   

ಚಿತ್ರದುರ್ಗ: ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಬೆಳೆದ ಹುಲ್ಲು. ಬೆಳಕು ಸೂಸದ ವಿದ್ಯುತ್‌ ದೀಪಗಳು. ಕ್ರೀಡಾಪಟುಗಳಿಗಿಂತ ಹೆಚ್ಚಾಗಿ ಕಾಣುವ ಜಾನುವಾರು, ನಾಯಿಗಳ ಹಿಂಡು. ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇಲ್ಲದೇ ಪರಿತಪಿಸುವ ಆಟಗಾರರು.

ಇದು ಜಿಲ್ಲಾ ಕೇಂದ್ರದಲ್ಲಿರುವ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಸ್ಥಿತಿ. ಮೂಲಸೌಲಭ್ಯ ಕೊರತೆ ಹಾಗೂ ನಿರ್ವಹಣೆ ಇಲ್ಲದೇ ಜಿಲ್ಲಾ ಕ್ರೀಡಾಂಗಣ ಸಂಪೂರ್ಣ ಸೊರಗಿ ಹೋಗಿದೆ. ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿ ಕ್ರೀಡಾಪಟುಗಳು ಹೈರಾಣಾಗಿದ್ದಾರೆ. ಕೊರತೆಗಳ ನಡುವೆ ವಾಯುವಿಹಾರಿಗಳು ಹೆಜ್ಜೆ ಹಾಕುತ್ತಿದ್ದಾರೆ.

19 ಎಕರೆ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣವನ್ನು 2002ರಲ್ಲಿ ನಿರ್ಮಿಸಲಾಗಿದೆ. ದಶಕದ ಹಿಂದೆ ಸಿಂಥೆಟಿಕ್‌ ಟ್ರ್ಯಾಕ್‌ ಕೂಡ ನಿರ್ಮಾಣವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಕೋಟೆನಾಡಿನ ಪ್ರತಿಭೆಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ರೂಪುತಳೆದ ಕ್ರೀಡಾಂಗಣದ ಮೂಲ ಧ್ಯೇಯವನ್ನು ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಮರೆತಿರುವಂತೆ ಕಾಣುತ್ತಿದೆ. ಕ್ರೀಡಾಂಗಣದ ಸುತ್ತ ಬಿದ್ದಿರುವ ಮದ್ಯದ ಬಾಟಲಿಗಳು ಅವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಿವೆ.

ADVERTISEMENT

ಕ್ರೀಡಾಂಗಣಕ್ಕೆ ಏಳು ಗೇಟುಗಳಿದ್ದರೂ ಯಾವ ಪ್ರವೇಶ ದ್ವಾರದಲ್ಲಿಯೂ ಕಾವಲುಗಾರ ಇರುವುದಿಲ್ಲ. ನಿಯೋಜನೆಗೊಂಡ ಒಬ್ಬ ಕಾವಲುಗಾರ ಇಡೀ ಕ್ರೀಡಾಂಗಣದ ಮೇಲೆ ನಿಗಾ ಇಡುವುದು ಕಷ್ಟ. ಮಧ್ಯಾಹ್ನದ ಬಳಿಕ ಕ್ರೀಡಾಂಗಣದಲ್ಲಿ ಜಾನುವಾರು ಕಾಣಿಸಿಕೊಳ್ಳುತ್ತವೆ. ಬೀದಿ ನಾಯಿಗಳ ಹಿಂಡು ಇಲ್ಲಿಯೇ ಠಿಕಾಣಿ ಹೂಡಿದಂತೆ ಕಾಣುತ್ತಿದೆ. ಕ್ರೀಡಾಂಗಣದಲ್ಲಿ ಹಲವರಿಗೆ ನಾಯಿ ಕಚ್ಚಿದ ನಿದರ್ಶನಗಳೂ ಇವೆ.

ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕ್ರೀಡಾಂಗಣಕ್ಕೆ ನೂರಾರು ಜನರು ಬರುತ್ತಾರೆ. ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಅಥ್ಲೀಟ್‌ಗಳು ಅಭ್ಯಾಸ ಮಾಡುತ್ತಾರೆ. 400 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್‌ ಅನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಲ್ಲಲ್ಲಿ ಹುಲ್ಲು ಬೆಳೆದಿದ್ದು, ಪದರಗಳು ಕಿತ್ತು ಬರುತ್ತಿವೆ. ಉಬ್ಬು–ತಗ್ಗು ಇದ್ದು, ಅಥ್ಲೀಟ್‌ಗಳಿಗೆ ಅಭ್ಯಾಸ ಮಾಡಲು ಸಮಸ್ಯೆಯಾಗುತ್ತಿದೆ. ಮಳೆ ಸುರಿದರೆ ಜಲಾವೃತವಾಗುತ್ತದೆ.

ಸಿಂಥೆಟಿಕ್‌ ಟ್ರ್ಯಾಕ್‌ ಜೊತೆಗೆ ಫುಟ್ಬಾಲ್‌ ಕ್ರೀಡಾಂಗಣವೂ ಇಲ್ಲಿದೆ. ಆಟಕ್ಕೆ ಅಗತ್ಯವಿರುವ ಪೂರಕ ವಾತಾವರಣ ಕ್ರೀಡಾಂಗಣದಲ್ಲಿ ಇಲ್ಲ. ಮೈದಾನದ ಸುತ್ತ ವಾಯುವಿಹಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸನದ ವ್ಯವಸ್ಥೆ ಕಲ್ಪಿಸಿದರೂ ಕುಳಿತುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಮಳೆ ನೀರು ಹರಿದುಹೋಗಲು ನಿರ್ಮಿಸಿದ ಚರಂಡಿಗೆ ಅಳವಡಿಸಿದ ಸಿಮೆಂಟ್‌ ನೆಲಹಾಸು ಒಡೆದು ಹೋಗಿವೆ. ವಾಯುವಿಹಾರಕ್ಕೆ ಬಂದ ಕೆಲವರು ಚರಂಡಿಯಲ್ಲಿ ಬಿದ್ದು, ಕೈಕಾಲು ಗಾಯ ಮಾಡಿಕೊಂಡ ಬಗ್ಗೆ ಬುದ್ಧ ನಗರದ ನಿವಾಸಿಗಳು ಮಾಹಿತಿ ನೀಡಿದರು.

ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಗಿಲು ತೆರೆಯದ ಶೌಚಾಲಯ
ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಅಥ್ಲೀಟ್‌ಗಳ ಅಭ್ಯಾಸ
ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣಗೊಂಡಿದ್ದರಿಂದ ಹೆಚ್ಚು ಸಂತಸವಾಗಿತ್ತು. ಆದರೆ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಅಥ್ಲೀಟ್‌ಗಳಿಗೆ ತೊಂದರೆ ಆಗುತ್ತಿದೆ.
ದೀಪಕ್‌ ನಗರಸಭಾ ಸದಸ್ಯ 31ನೇ ವಾರ್ಡ್‌
ಕ್ರೀಡಾಂಗಣದ ವಿದ್ಯುತ್‌ ದೀಪಗಳು ಬೆಳಕು ನೀಡುತ್ತಿಲ್ಲ. ಕತ್ತಲಾಗುತ್ತಿದ್ದಂತೆ ವಾಯುವಿವಹಾರ ಮಾಡುವುದು ಕಷ್ಟ. ಬೀದಿನಾಯಿ ಹಾವುಗಳ ಉಪಟಳ ಹೆಚ್ಚಾಗಿದೆ.
ಕಾಟಮಲ್ಲಪ್ಪ ವಾಯುವಿಹಾರಿ
ಬೆಳಗದ ವಿದ್ಯುತ್‌ ದೀಪ
ಕ್ರೀಡಾಂಗಣದ ಸುತ್ತ 14 ವಿದ್ಯುತ್ ಕಂಬಗಳಿದ್ದು ದೀಪಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಮೂರು ವಿದ್ಯುತ್‌ ದೀಪಗಳು ಮಾತ್ರ ಬೆಳಕು ಸೂಸುತ್ತವೆ. ಕತ್ತಲು ಆವರಿಸುತ್ತಿದ್ದಂತೆ ಕ್ರೀಡಾಂಗಣ ಅಂಧಕಾರದಲ್ಲಿ ಮುಳುಗುತ್ತದೆ. ನಸುಕಿನ 5.30ರಿಂದ ಕ್ರೀಡಾಪಟುಗಳು ಮೈದಾನಕ್ಕೆ ಬರುತ್ತಾರೆ. ಈಗ ಸಂಜೆ 6ಕ್ಕೇ ಕತ್ತಲಾಗುವುದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಸಮಯ ಸಾಕಾಗುತ್ತಿಲ್ಲ. ವಿದ್ಯುತ್‌ ದೀಪ ದುರಸ್ತಿ ಮಾಡುವಂತೆ ಸಲ್ಲಿಸಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪವಿದೆ.
ಬಾಗಿಲು ತೆರೆಯದ ಶೌಚಾಲಯ
ಕ್ರೀಡಾಂಗಣದಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಸೇವೆಗೆ ಮಾತ್ರ ಮುಕ್ತಗೊಂಡಿಲ್ಲ. ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುವ ಸ್ಥಿತಿ ಇಲ್ಲಿದೆ. ಕ್ರೀಡಾಂಗಣದಲ್ಲಿ ಎರಡು ಶೌಚಾಲಯಗಳಿವೆ. ಇದರಲ್ಲಿ ಒಂದು ಅಂಗವಿಕಲರಿಗೆ ಮೀಸಲಾಗಿದೆ. ಶೌಚಾಲಯ ಸುಸ್ಥಿತಿಯಲ್ಲಿ ಇದ್ದರೂ ಬಳಕೆಗೆ ನೀಡುತ್ತಿಲ್ಲ. ಶೌಚಾಲಯಕ್ಕೆ ನೀರು ಕೊರತೆ ಇದೆ ಎಂದು ಕ್ರೀಡಾಂಗಣದ ಸಿಬ್ಬಂದಿ ಸಬೂಬು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.