ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಸಮಾಧಿ ಸ್ಥಳ, ತಾಲ್ಲೂಕಿನ ಸೀಬಾರದಲ್ಲಿರುವ 'ಪುಣ್ಯಭೂಮಿ' ನಿರ್ವಹಣೆ ಕೊರತೆಯಿಂದ ರೂಪ ಕಳೆದುಕೊಂಡಿದೆ. 4 ಎಕರೆ ಜಾಗದಲ್ಲಿ ವಿಶೇಷ ವಿನ್ಯಾಸದೊಂದಿಗೆ ತಲೆಎತ್ತಿದ್ದ ಸ್ಮಾರಕ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲಗೊಂಡಿದೆ.
ನಗರದ ವಿ.ಪಿ ಬಡಾವಣೆಯಲ್ಲಿರುವ ನಿಜಲಿಂಗಪ್ಪ ನಿವಾಸವನ್ನು ರಾಜ್ಯಸರ್ಕಾರ ಖರೀದಿಸುತ್ತಿದ್ದು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಇದೇ ವೇಳೆ ನಿಜಲಿಂಗಪ್ಪ ಅವರ ಸಮಾಧಿ ಸ್ಥಳಕ್ಕೂ ಕಾಯಕಲ್ಪ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ನಿಜಲಿಂಗಪ್ಪ ಅವರು 2000ದಲ್ಲಿ ದೇಹತ್ಯಾಗ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಬದಿಯ ಸೀಬಾರ ಬಳಿ ಮುರುಘಾಮಠ 4 ಎಕರೆ ಜಾಗ ನೀಡಿದ್ದು ಸ್ಮಾರಕ ನಿರ್ಮಾಣಕ್ಕೆ 2001ರಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ 2004ರಲ್ಲಿ ಕಾಮಗಾರಿ ವಿಧ್ಯುಕ್ತವಾಗಿ ಆರಂಭವಾಗಿ 2010ರಲ್ಲಿ ಕಾಮಗಾರಿ ಪೂರ್ಣಗೊಂಡಿತು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿಜಲಿಂಗಪ್ಪ ಒಡನಾಡಿಗಳನ್ನು ಒಳಗೊಂಡ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ರಚಿಸಿ, ಅದಕ್ಕೆ ಸ್ಮಾರಕ ನಿರ್ಮಿಸುವ ಜವಾಬ್ದಾರಿ ನೀಡಲಾಯಿತು. ಸರ್ಕಾರದ ₹ 2 ಕೋಟಿ ಅನುದಾನ ಸೇರಿ ವಿವಿಧ ದಾನಿಗಳ ಧನಸಹಾಯದಿಂದ ಒಟ್ಟು ₹ 3.50 ಕೋಟಿ ವೆಚ್ಚದೊಂದಿಗೆ ಸ್ಮಾರಕ ನಿರ್ಮಾಣ ಮಾಡಲಾಯಿತು. ಅದಕ್ಕೆ 'ಪುಣ್ಯಭೂಮಿ'ಎಂದು ನಾಮಕರಣ ಮಾಡಲಾಯಿತು.
4 ಬೃಹತ್ ಪಿಲ್ಲರ್ ಒಳಗೊಂಡಂತೆ ವಿಶೇಷ ವಿನ್ಯಾಸ, ತಾವರೆ ಹೂವಿನ ಆಕೃತಿಯಲ್ಲಿ ಸಮಾಧಿ ಸ್ಥಳಕ್ಕೆ ಆಕರ್ಷಕ ರೂಪ ನೀಡಲಾಯಿತು. ಸುತ್ತಲೂ ಸುಂದರ ಉದ್ಯಾನ, ನಿಜಲಿಂಗಪ್ಪ ಅವರ ಹೋರಾಟದ ಬದುಕು ನೆನಪಿಸುವ ಪ್ರತಿಮೆ ನಿರ್ಮಾಣ ಮಾಡಲಾಯಿತು. ಜೊತೆಗೆ ನಿಜಲಿಂಗಪ್ಪ ಅವರ ಅಪರೂಪದ ಛಾಯಚಿತ್ರಗಳ ಪ್ರದರ್ಶನಾಲಯ, ಸಭಾಂಗಣ, ಕಚೇರಿ, ಅತಿಥಿ ನಿಲಯ, ಸಭಾಕೊಠಡಿಗಳನ್ನು ನಿರ್ಮಿಸಲಾಯಿತು. ಜನಾಕರ್ಷಣೆಗಾಗಿ ಸಮಾಧಿ ಮುಂದೆ ಕಾರಂಜಿಗಳನ್ನೂ ನಿರ್ಮಿಸಲಾಯಿತು.
ಪುಣ್ಯಭೂಮಿ ನಿರ್ಮಾಣವಾಗಿ 14 ವರ್ಷವಾಗುತ್ತಿದ್ದರೂ ಅದನ್ನೊಂದು ಪ್ರವಾಸಿ ತಾಣವನ್ನಾಗಿ ರೂಪಿಸಲು ಸಾಧ್ಯವಾಗಿಲ್ಲ. ಟ್ರಸ್ಟ್ ಸೇರಿದಂತೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪುಣ್ಯಭೂಮಿಯತ್ತ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ.
ಬಣ್ಣಕಳಚಿದ ಸ್ಮಾರಕ: ಸದ್ಯ ಸ್ಮಾರಕದ ಸುತ್ತಲೂ ರೂಪಿಸಲಾಗಿದ್ದ ಉದ್ಯಾನ ನಿರ್ವಹಣೆ ಕೊರತೆಯಿಂದ ಹಾಳಾಗಿದೆ. ಎಲ್ಲೆಡೆ ಗಿಡ-ಗಿಂಟಿಗಳು ಬೆಳೆದು ನಿಂತಿವೆ. ಸುತ್ತಲೂ ಹಾಕಲಾಗಿದ್ದ ಎಲ್‌ಇಡಿ ಲೈಟ್‌ಗಳು ಬೆಳಕು ಕಳೆದುಕೊಂಡಿವೆ. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳು ಸುಸ್ಥಿತಿಯಲ್ಲಿಲ್ಲ. ಹಲವು ಪ್ರತಿಮೆಗಳು ಮುರಿದು ಹೋಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಲ್ಕು ಪಿಲ್ಲರ್‌ಗಳು ಬಿರುಕು ಬಿಟ್ಟಿದ್ದು ದುರಸ್ತಿಗಾಗಿ ಕಾಯುತ್ತಿವೆ.
ಸ್ಮಾರಕದ ಆವರಣದಲ್ಲಿರುವ ಸಭಾಂಗಣದ ಮೆಟ್ಟಿಲುಗಳು ಕಿತ್ತು ಹೋಗಿವೆ. ಕಚೇರಿಯ ಕಾರಿಡಾರ್‌ನಲ್ಲಿ ಟೈಲ್‌ಗಳು ಮೇಲೆದ್ದು ಬಂದಿವೆ. ಛಾಯಾಚಿತ್ರ ಪ್ರದರ್ಶನದ ಕೊಠಡಿಯಲ್ಲಿ ನಿಜಲಿಂಗಪ್ಪ ಅವರು ಬಳಸುತ್ತಿದ್ದ ಪೀಠೋಪಕರಣಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ಅವರು ಪಡೆದಿರುವ ಪ್ರಶಸ್ತಿ ಫಲಕಗಳನ್ನು ಇಡಲಾಗಿದೆ. ಆದರೆ ಅವುಗಳನ್ನು ಎಲ್ಲೆಂದರಲ್ಲಿ ಇಟ್ಟಿರುವ ಕಾರಣ ನೋಡಲು ಚೆನ್ನಾಗಿ ಕಾಣುವುದಿಲ್ಲ.
'ಕಲ್ಲಿನಕೋಟೆ, ಚಂದ್ರವಳ್ಳಿ ನೊಡಲು ಬಂದವರನ್ನು ಪುಣ್ಯಭೂಮಿ ನೋಡುವಂತೆ ಮಾಡುವ ಸಾಕಷ್ಟು ಅವಕಾಶಗಳಿದ್ದವು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಸ್ಮಾರಕ ಇರುವ ಕಾರಣ ಅದನ್ನು ಈಗಲೂ ಪ್ರಮುಖ ಪ್ರೇಕ್ಷಣೀಯ ತಾಣವನ್ನಾಗಿ ಮಾಡಬಹುದು. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಪುಣ್ಯಭೂಮಿ ಅನಾಥವಾಗಿಯೇ ಉಳಿದಿದೆ' ಎಂದು ಸಾಹಿತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಸರ್ಕಾರವೇ ವಹಿಸಿಕೊಳ್ಳಲಿ
‘ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಖಾಸಗಿ ಸಂಸ್ಥೆಯಾಗಿದ್ದು ಪುಣ್ಯಭೂಮಿಯನ್ನು ನಿರ್ವಹಣೆ ಮಾಡುವುದು ತೀರಾ ಕಷ್ಟವಾಗಿದೆ. ಸರ್ಕಾರದಿಂದ ಹಣ ತಂದು ದಾನಿಗಳಿಂದ ಹಣ ಪಡೆದು ಸ್ಮಾರಕ ನಿರ್ಮಾಣ ಮಾಡಲಾಗಿದೆ. ಮುರುಘಾಮಠ ಜಾಗ ಕೊಟ್ಟಿದೆ ಆದರೆ ಇನ್ನೂ ಭೂಮಿಯು ಟ್ರಸ್ಟ್ ಹೆಸರಿಗೆ ನೋಂದಣಿಯಾಗಿಲ್ಲ. ನಿಜಲಿಂಗಪ್ಪ ಅವರ ಮನೆ ಅಭಿವೃದ್ಧಿಯ ಜೊತೆಜೊತೆಗೆ ಪುಣ್ಯಭೂಮಿಯ ನಿರ್ವಹಣೆ ಜವಾಬ್ದಾರಿಯನ್ನೂ ಸರ್ಕಾರವೇ ವಹಿಸಿಕೊಂಡು ಅಭಿವೃದ್ಧಿಗೊಳಿಸಬೇಕು’ ಎಂದು ಟ್ರಸ್ಟ್ ಕಾರ್ಯದರ್ಶಿ ಮಾಜಿ ಸಂಸದ ಎಚ್.ಹನುಮಂತಪ್ಪ ತಿಳಿಸಿದರು. ‘ಟ್ರಸ್ಟ್ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರಿಗೆ 94 ವರ್ಷ ವಯಸ್ಸಾಗಿದೆ. ನನಗೂ 93 ಆಗಿದೆ. ನಾವು ಇನ್ನೆಷ್ಟು ದಿನ ನೋಡಿಕೊಳ್ಳಲು ಸಾಧ್ಯ? ಅದಕ್ಕಾಗಿ ಪುಣ್ಯಭೂಮಿಯನ್ನೂ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದೇವೆ’ ಎಂದರು.
ಅಭಿವೃದ್ಧಿಗೆ ₹35 ಲಕ್ಷ ಬಿಡುಗಡೆ
‘2022ರಲ್ಲೇ ಪುಣ್ಯಭೂಮಿಗೆ ಕಾಯಕಲ್ಪ ನೀಡಲು ಸರ್ಕಾರ ₹ 34.79 ಲಕ್ಷ ಬಿಡುಗಡೆ ಮಾಡಿತ್ತು. ಕಾಮಗಾರಿ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕೆಲಸ ಮಾಡಲಿಲ್ಲ. ನಮ್ಮ ಒತ್ತಾಯದ ಮೇರೆಗೆ ಈಗ ಜಿಲ್ಲಾಧಿಕಾರಿಗಳು ಹಣವನ್ನು ಟ್ರಸ್ಟ್ ಖಾತೆಗೆ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಆಹ್ವಾನಿಸಿ ಟ್ರಸ್ಟ್ ವತಿಯಿಂದಲೇ ಅಭಿವೃದ್ಧಿಗೊಳಿಸಲಾಗುವುದು’ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು. ‘ಮಕ್ಕಳನ್ನು ಆಕರ್ಷಿಸಲು ಆಟಿಕೆಗಳನ್ನೊಳಗೊಂಡ ಉದ್ಯಾನ ಸ್ಥಾಪಿಸಬೇಕು. ಜೊತೆಗೆ ಸ್ಮಾರಕದ ಆವರಣದಲ್ಲಿ ವಿವಿಧ ಚಟುವಟಿಕೆಗಳು ನಡೆಯುವಂತಾಗಬೇಕು. ಅದಕ್ಕಾಗಿ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.