ADVERTISEMENT

ಎಪಿಎಂಸಿ ಮಾರುಕಟ್ಟೆಯಲ್ಲಿ ಭದ್ರತೆಯ ಕೊರತೆ

ಹೊರಗಿನ ವಾಹನಗಳ ಓಡಾಟ, ರೈತರು– ವ್ಯಾಪಾರಿಗಳ ಪರದಾಟ: ಕಳ್ಳರ ಕಾಟ

ಎಂ.ಎನ್.ಯೋಗೇಶ್‌
Published 15 ನವೆಂಬರ್ 2024, 5:35 IST
Last Updated 15 ನವೆಂಬರ್ 2024, 5:35 IST
ಚಿತ್ರದುರ್ಗದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿರುವುದು
ಚಿತ್ರದುರ್ಗದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿರುವುದು   

ಚಿತ್ರದುರ್ಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಸಾರ್ವಜನಿಕ ವಾಹನಗಳ ಓಡಾಟ ಹೆಚ್ಚಾಗಿದ್ದು, ಭದ್ರತೆಯ ಕೊರತೆಯು ರೈತರು ಹಾಗೂ ವರ್ತಕರನ್ನು ಕಾಡುತ್ತಿದೆ. ನಿತ್ಯ ಟ್ರಾಫಿಕ್‌ ಜಾಮ್‌, ಅಪಘಾತ, ಜಗಳ, ಕಳ್ಳತನ ಪ್ರಕರಣಗಳು ಸಾಮಾನ್ಯ ಎಂಬಂತಾಗಿರುವುದರಿಂದ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರದಾಡುವಂತಾಗಿದೆ.

40 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಮಾರುಕಟ್ಟೆಯಲ್ಲಿ ನಿತ್ಯವೂ ಸಾವಿರಾರು ವರ್ತಕರು ಕೃಷಿ ಉತ್ಪನ್ನ ತಂದು ಮಾರಾಟ ಮಾಡುತ್ತಾರೆ. ಆದರೆ ಸುತ್ತಲೂ ಇರುವ ಪ್ರವೇಶದ್ವಾರಗಳಲ್ಲಿ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಅವಕಾಶ ಕೊಟ್ಟಿರುವ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು ರೈತರು ಮಾರುಕಟ್ಟೆಗೆ ಮಾಲು ತರಲು ಒದ್ದಾಡುತ್ತಿದ್ದಾರೆ.

ದಾವಣಗೆರೆ, ಹೊಳಲ್ಕೆರೆ, ಹೊಸಪೇಟೆಗೆ ತೆರಳುವ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳು ನಗರದ ಮೂಲಕ ಸಂಚರಿಸುವ ಬದಲು ಮಾರುಕಟ್ಟೆ ಪ್ರಾಂಗಣದಲ್ಲೇ ಓಡಾಡುತ್ತಿವೆ. ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಸಾರ್ವಜನಿಕರು ಅಲ್ಲಿ ಸಂಚರಿಸುವ ಬದಲು ಮಾರುಕಟ್ಟೆಯನ್ನೇ ಅಡ್ಡದಾರಿ ಮಾಡಿಕೊಂಡಿದ್ದಾರೆ.

ADVERTISEMENT

ನಿತ್ಯ ಶಾಲಾ ವಾಹನಗಳು, ಕಾರು, ಬೈಕ್‌ ಸೇರಿದಂತೆ ಖಾಸಗಿ ವಾಹನಗಳೆಲ್ಲವೂ ಮಾರುಕಟ್ಟೆಯ ಮೂಲಕವೇ ತೆರಳುತ್ತವೆ. ಬಸ್‌ ನಿಲ್ದಾಣ, ಬಿ.ಡಿ ರಸ್ತೆಯ ವಾಹನಗಳ ಗದ್ದಲದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಾರುಕಟ್ಟೆ ಮೂಲಕವೇ ಎಲ್ಲರೂ ತೆರಳುತ್ತಾರೆ. ಮೆದೇಹಳ್ಳಿ ಭಾಗಕ್ಕೆ ತೆರಳುವವರೂ ಇದೇ ರಸ್ತೆಯ ಮೂಲಕ ಓಡಾಡುತ್ತಾರೆ. ಹೀಗಾಗಿ ಮಾರುಕಟ್ಟೆಯ ಕಿರಿದಾದ ರಸ್ತೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ರಾಜ್ಯ, ಹೊರರಾಜ್ಯಗಳಿಂದ ಬೃಹತ್‌ ಲಾರಿಗಳು ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯಲು ಮಾರುಕಟ್ಟೆಗೆ ಬರುತ್ತವೆ. ಆದರೆ ಟ್ರಾಫಿಕ್‌ ಜಾಮ್‌ನಿಂದಾಗಿ ಮಾರುಕಟ್ಟೆ ಪ್ರವೇಶಿಸಲು ಕಷ್ಟ ಪಡುವಂತಾಗಿದೆ. ಬೆಳಿಗ್ಗೆ ಹೊತ್ತಿನಲ್ಲಿ ಜನರು ಕಚೇರಿಗಳಿಗೆ ತೆರಳಲು ಇದೇ ರಸ್ತೆಯಲ್ಲಿ ತೆರಳುವ ಕಾರಣ ರೈತರು ಹಾಗೂ ವರ್ತಕರ ಗಾಡಿಗಳು ಮಾರುಕಟ್ಟೆಗೆ ಬರಲು ಕಿರಿಕಿರಿ ಅನುಭವಿಸುವಂತಾಗಿದೆ. ಸಣ್ಣಪುಟ್ಟ ಅಪಘಾತಗಳಿಂದಾಗಿ ನಿತ್ಯ ಜಗಳಗಳಾಗುತ್ತಿದ್ದು ಇದನ್ನು ಕೇಳುವವರೇ ಇಲ್ಲವಾಗಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.

ಸದ್ಯ ಗೋವಿನಜೋಳ ಕಟಾವು ಮುಕ್ತಾಯಗೊಂಡಿದ್ದು, ರೈತರು ಅಪಾರ ಪ್ರಮಾಣದ ಜೋಳವನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಟ್ರಾಫಿಕ್‌ ಜಾಮ್‌ನಿಂದಾಗಿ ತಾವು ಮಾರಾಟ ಮಾಡಲು ಇಚ್ಛಿಸುವ ವರ್ತಕರ ಅಂಗಡಿ ತಲುಪಲು ಕಷ್ಟಪಡುವಂತಾಗಿದೆ. ಮಾಲು ಖರೀದಿಯ ನಂತರ ವರ್ತಕರು ಲಾರಿಗಳಿಗೆ ಮಾಲನ್ನು ಲೋಡ್‌ ಮಾಡುವುದಕ್ಕೂ ಪರಿತಪಿಸುತ್ತಿದ್ದಾರೆ.

‘ಬೆಳಿಗ್ಗೆ 8 ಗಂಟೆಗೆ ಟ್ರ್ಯಾಕ್ಟರ್‌ನಲ್ಲಿ ತಂದ ಗೋವಿನ ಜೋಳದ ಚೀಲಗಳನ್ನು ನಮ್ಮ ಏಜೆನ್ಸಿ ಅಂಗಡಿಗೆ ಸಾಗಿಸಲು ಪರದಾಡಬೇಕಾಯಿತು. ಟ್ರಾಫಿಕ್‌ ಜಾಮ್‌ನಿಂದಾಗಿ 10 ಗಂಟೆಯಾದರೂ ತಲುಪಲು ಸಾಧ್ಯವಾಗಲಿಲ್ಲ. ಮಾರುಕಟ್ಟೆ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು ಓಡಾಡುತ್ತಿರುವ ಕಾರಣ ಈ ಸಮಸ್ಯೆಯಾಗುತ್ತಿದೆ’ ಎಂದು ಸಿರಿಗೆರೆಯ ರೈತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕಳ್ಳರ ಕಾಟ: ಮಾರುಕಟ್ಟೆಯಲ್ಲಿ ಕಾವಲುಗಾರರಾಗಲೀ, ಪೊಲೀಸರಾಗಲಿ ಇಲ್ಲದ ಕಾರಣ ಪ್ರಾಂಗಣದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಖಾಲಿ ಚೀಲಗಳು ಸೇರಿದಂತೆ ಧಾನ್ಯ ತುಂಬಿದ ಚೀಲಗಳೂ ಕಳವಾಗಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ.

‘ಕಳ್ಳತನ ನಡೆದಾಗ ಪೊಲೀಸ್‌ ಠಾಣೆಗೆ ದೂರು ನೀಡುತ್ತೇವೆ. ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ನಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ’ ಎಂದು ವರ್ತಕರೊಬ್ಬರು ತಿಳಿಸಿದರು.

ಪ್ರಾಂಗಣದಲ್ಲಿರುವ ಪೊಲೀಸ್‌ ಉಪ ಠಾಣೆ ಪಾಳು ಬಿದ್ದಿರುವುದು
ಮಾರುಕಟ್ಟೆಗೆ 5 ಗೇಟ್‌ಗಳಿದ್ದು ಸಾರ್ವಜನಿಕ ವಾಹನ ತಡೆಯುವುದು ಕಷ್ಟದ ಕೆಲಸವಾಗಿದೆ. ಆದರೂ ಹೊರಗಿನ ವಾಹನಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು.
–ಬಿ.ಎಲ್‌.ಕೃಷ್ಣಪ್ಪ ಎಪಿಎಂಸಿ ಕಾರ್ಯದರ್ಶಿ

ಪೊಲೀಸ್‌ ಉಪಠಾಣೆ ತೆರವು

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಪೊಲೀಸ್‌ ಉಪಠಾಣೆ ಹಲವು ವರ್ಷಗಳಿಂದ ಇತ್ತು. ಪೊಲೀಸ್‌ ಸಿಬ್ಬಂದಿ ಇದ್ದಾಗ ಇಲ್ಲಿ ಟ್ರಾಫಿಕ್‌ ತೊಂದರೆ ಇರಲಿಲ್ಲ ಕಳ್ಳತನ ಪ್ರಕರಣಗಳೂ ಹೆಚ್ಚು ಇರಲಿಲ್ಲ. ಆದರೆ 2 ವರ್ಷಗಳ ಹಿಂದೆ ಇಲ್ಲಿಯ ಪೊಲೀಸ್‌ ಉಪಠಾಣೆಯನ್ನು ತೆರವುಗೊಳಿಸಲಾಗಿದೆ. ಠಾಣೆಯ ಕಟ್ಟಡ ಪಾಳು ಬಿದ್ದಿದ್ದು ಇಡೀ ಮಾರುಕಟ್ಟೆಗೆ ಭದ್ರತೆಯೇ ಇಲ್ಲವಾಗಿದೆ.

‘ಮಾರುಕಟ್ಟೆಯ ಭದ್ರತೆಗೆ ಪೊಲೀಸ್‌ ಸಿಬ್ಬಂದಿ ನೇಮಿಸುವಂತೆ ಹಲವು ವರ್ಷಗಳಿಂದಲೂ ಮನವಿ ಮಾಡುತ್ತಿದ್ದೇವೆ. ಕನಿಷ್ಠ ಕಾವಲುಗಾರರನ್ನಾದರೂ ಹಾಕುವಂತೆ ಒತ್ತಾಯಿಸಿದ್ದೇವೆ. ಆದರೆ ನಮ್ಮ ಬೇಡಿಕೆ ಈಡೇರಿಲ್ಲ. ಎಪಿಎಂಸಿ ಆಡಳಿತ ಮಂಡಳಿ ಕೇವಲ ಸುಂಕ ಕಟ್ಟಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ’ ಎಂದು ವರ್ತಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.