ಮೊಳಕಾಲ್ಮುರು: ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ ಸಾಕಷ್ಟು ಮಳೆಯಾಗಿ ಹಳ್ಳ, ಕೊಳ್ಳ ತುಂಬಿದ್ದರೂ ಅಂತರ್ಜಲ ಮಟ್ಟ ಸುಧಾರಣೆಗೆ ಅಷ್ಟಾಗಿ ಪ್ರಯೋಜನವಾಗುವುದಿಲ್ಲ ಎಂಬ ಆತಂಕ ರೈತ ವಲಯದಲ್ಲಿ ಮನೆಮಾಡಿದೆ.
ತಾಲ್ಲೂಕು ಬರಪೀಡಿತ ಎಂದು ಗುರುತಿಸಿಕೊಂಡಿದ್ದು, 800ರಿಂದ 1,000 ಅಡಿಗೆ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ಫ್ಲೋರೈಡ್‌ಯುಕ್ತ ನೀರು ಬಳಸಬೇಕಿದೆ. ಅನಾರೋಗ್ಯ ಸಮಸ್ಯೆಗಳು ನೀರಿನಿಂದ ಬರುತ್ತಿದೆ ಎಂಬ ಆರೋಪವೂ ಇದೆ. ಅಂತರ್ಜಲ ಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೂ ಇದಕ್ಕೆ ಪೂರಕ ಕಾರ್ಯಕ್ರಮ ರೂಪಿಸದಿರುವುದು ದುರಂತದ ಸಂಗತಿ.
ಇಲ್ಲಿನ ಜಮೀನಿನಲ್ಲಿರುವ ಮಣ್ಣು ಮರಳು ಮಿಶ್ರಣದಿಂದ ಕೂಡಿದ್ದು, ಎಷ್ಟೇ ಮಳೆ ಬಂದರೂ ನೀರನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಮಳೆ ನೀರು ಹಿಡಿದಿಡುವ ಕೆಲಸ ಮಾಡಿದಲ್ಲಿ ಅಂತರ್ಜಲ ಮಟ್ಟ ಸುಧಾರಣೆ ಸುಲಭವಾಗಲಿದೆ. ಸುಧಾರಣೆ ಕ್ರಮ ಕೈಗೊಳ್ಳದಿದ್ದಲ್ಲಿ ಭವಿಷ್ಯದ ಸ್ಥಿತಿ ಊಹಿಸಲೂ ಅಸಾಧ್ಯ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.
ಮಳೆಗಾಲದಲ್ಲಿ ಹಳ್ಳಗಳು ವ್ಯರ್ಥವಾಗಿ ಹರಿದು ನೀರು ಆಂಧ್ರ ಪಾಲಾಗುತ್ತಿದೆ. ದೇವಸಮುದ್ರ ಹೋಬಳಿಯಲ್ಲಿ ಪಕ್ಕುರ್ತಿ ಕೆರೆಯ ನೀರು ಗುಂಡೇರಿ ಹಳ್ಳದ ಮೂಲಕ ದೇವಸಮುದ್ರ ಕೆರೆ ಸೇರಿ ನಂತರ ಆಂಧ್ರಕ್ಕೆ ಹರಿಯುತ್ತದೆ. ಈ ವರ್ಷ ಈ ಹಳ್ಳ ಹಲವು ದಿನ ವ್ಯರ್ಥವಾಗಿ ಹರಿದಿದೆ. ಸಂಡೂರು, ಕೂಡ್ಲಿಗಿ ಭಾಗದ ನೀರು ಈ ಹಳ್ಳಕ್ಕೆ ಹರಿದು ಬರುತ್ತದೆ.
‘ರಂಗಯ್ಯನದುರ್ಗ ಜಲಾಶಯದಿಂದ 15 ದಿನಗಳಿಂದ ಅಪಾರ ನೀರು ಹೊರಬಿಡಲಾಗುತ್ತಿದೆ. ನೀರು ಮುಂದೆ ಭಟ್ರಹಳ್ಳಿ, ಅಮಕುಂದಿ, ನಾಗಸಮುದ್ರ ಮೂಲಕ ಆಂಧ್ರಕ್ಕೆ ಹರಿಯುತ್ತಿದೆ. ಈ ಬಾರಿ ಸಾಕಷ್ಟು ನೀರು ವ್ಯರ್ಥವಾಗಿದೆ.
ತಾಲ್ಲೂಕಿನ ದೊಡ್ಡಹಳ್ಳ ಹಾಗೂ ಪ್ರತಿವರ್ಷ ಮೈದುಂಬಿ ಹರಿಯುವ ಶಿಡ್ಲಹಳ್ಳದ ನೀರು ಸಹ ವ್ಯರ್ಥವಾಗುವುದನ್ನು ತಡೆಯಬೇಕು ಎಂಬ ಆಗ್ರಹ ಕಾರ್ಯರೂಪಕ್ಕೆ ಬಂದಿಲ್ಲ. ಇದಾದಲ್ಲಿ ಕಸಬಾ ಹೋಬಳಿಗೆ ಹೆಚ್ಚು ಸಹಕಾರಿಯಾಗುತ್ತದೆ’ ಎಂದು ಅಮಕುಂದಿ ಗಂಗಣ್ಣ ಹೇಳುವರು.
‘ಜಿನಗಿಹಳ್ಳದ ಮೂಲಕ ಅಪಾರ ಪ್ರಮಾಣದ ನೀರು ಪ್ರತಿವರ್ಷ ಹರಿದು ಆಂಧ್ರಕ್ಕೆ ಸೇರುತ್ತಿದೆ. ಅಲ್ಲಿನ ಸರ್ಕಾರ ಗಡಿಯಲ್ಲಿ ದೊಡ್ಡ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನೀರು ತಡೆಯುವ ಕಾಮಗಾರಿ ಕೈಗೊಳ್ಳಿ ಎಂದು ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಪ್ರತಿ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರವಾಗುತ್ತದೆ’ ಎಂದು ರಾಂಪುರದ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
‘ರಾಂಪುರದ ಗುಂಡೇರಿ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸಲು ₹ 2.60 ಕೋಟಿ ಮಂಜೂರಾಗಿದೆ. ಶೀಘ್ರ ಟೆಂಡರ್ ಕರೆಯಲಾಗುವುದು. ಮುಖ್ಯವಾಗಿ ಕೆರೆಗಳನ್ನು ಸಂಪರ್ಕಿಸುವ ಎಲ್ಲ ಫೀಡರ್ ಚಾನಲ್‌ಗಳನ್ನು ದುರಸ್ತಿಪಡಿಸಿ ಸೇವೆಗೆ ನೀಡಲು ಒತ್ತು ನೀಡಲಾಗುವುದು. ಭಟ್ರಹಳ್ಳಿ ಕೆರೆ ಚಾನಲ್ 500 ಮೀಟರ್ ದುರಸ್ತಿ ಮಾಡಲಾಗಿದ್ದು, ಇನ್ನೂ 1500 ಮೀಟರ್ ಮಾಡಬೇಕಿದೆ. ಜಿನಗಿಹಳಕ್ಕೆ ಅಲ್ಲಲ್ಲಿ ಬ್ಯಾರೇಜ್ ನಿರ್ಮಿಸುವ ಪ್ರಸ್ತಾವವಿದೆ, ಅನುದಾನ ಅಭ್ಯವಿಲ್ಲ’ ಎಂದು ಸಣ್ಣ ನೀರಾವರಿ ಇಲಾಖೆ ಜಿಲ್ಲಾ ಎಂಜಿನಿಯರ್ ಅಣ್ಣಪ್ಪ ಪ್ರತಿಕ್ರಿಯಿಸಿದರು.
‘ಶಿಡ್ಲಹಳ್ಳದ ನೀರನ್ನು ಸದುಪಯೋಗ ಮಾಡಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ. ರಂಗಯ್ಯನದುರ್ಗ ಜಲಾಶಯದ ಎಡ ಕಾಲುವೆ ದುರಸ್ತಿ ಕಾರ್ಯ ಪೂರ್ಣವಾಗಿದೆ. ಇದರಿಂದ ಮುಂದಿನ 3– 4 ದಿನಗಳಲ್ಲಿ ಹಿರೇಕೆರೆಹಳ್ಳಿ ಕೆರೆಗೆ ನೀರು ಹರಿದು ತುಂಬಲಿದೆ. ಗಣಿಬಾಧಿತ ಪ್ರದೇಶ ಪುನಶ್ಚೇತನ ಅನುದಾನದಲ್ಲಿ ₹ 2.50 ಕೋಟಿ ಅನುದಾನ ಸಿಗಲಿದ್ದು, ಇದನ್ನೂ ಬ್ಯಾರೇಜ್ ನಿರ್ಮಾಣಕ್ಕೆ ಬಳಸಲಾಗುವುದು’ ಎಂದರು.
ಡಿಎಂಎಫ್ ನಿಧಿ ಟಿಎಸ್‌ಪಿ ಎಸ್‌ಸಿಪಿ ಅನುದಾನ ಮಂಜೂರು ಭರವಸೆ ಸಿಕ್ಕಿದೆ. ಇದರಲ್ಲಿ ಬ್ಯಾರೇಜ್ ಚೆಕ್ ಡ್ಯಾಂ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದುಅಪ್ಪಣ್ಣ ಸಣ್ಣ ನೀರಾವರಿ ಇಇಲಾಖೆ ಜಿಲ್ಲಾ ಎಂಜಿನಿಯರ್
ಮಳೆ ನೀರು ಹರಿದು ವ್ಯರ್ಥವಾಗುವುದು ಗಮನದಲ್ಲಿದೆ. ಅಗತ್ಯವಿರುವ ಕಡೆ ಚೆಕ್ ಡ್ಯಾಂ ನಿರ್ಮಿಸಲು ಸೂಚಿಸಲಾಗಿದೆ. ವರದಿ ತರಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು.ಎನ್.ವೈ. ಗೋಪಾಲಕೃಷ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.