ADVERTISEMENT

ಹೊಸದುರ್ಗ: ಜಲಾಶಯದ ಹಿನ್ನೀರಿನಲ್ಲಿ ಜಮೀನು ಮುಳುಗಡೆ, ರೈತ ಕಂಗಾಲು

ಹಿನ್ನೀರು ಪ್ರದೇಶದ ‌ನೂರಾರು ಎಕರೆ ಬೆಳೆ ನಾಶ

ಎಸ್.ಸುರೇಶ್ ನೀರಗುಂದ
Published 28 ನವೆಂಬರ್ 2021, 7:34 IST
Last Updated 28 ನವೆಂಬರ್ 2021, 7:34 IST
ವಾಣಿವಿಲಾಸ ಸಾಗರದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ತೆಂಗಿನತೋಟ
ವಾಣಿವಿಲಾಸ ಸಾಗರದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ತೆಂಗಿನತೋಟ   

ಹೊಸದುರ್ಗ: ವಾಣಿವಿಲಾಸ ಸಾಗರ ಜಲಾಶಯದಲ್ಲಿ 123 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದರಿಂದ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದ್ದ ತಾಲ್ಲೂಕಿನ ನೂರಾರು ಎಕರೆ ಬೆಳೆ ಮುಳುಗಡೆ ಆಗಿದ್ದು,ರೈತರು ಕಂಗಾಲಾಗಿದ್ದಾರೆ.

ಹಿನ್ನೀರು ಪ್ರದೇಶದ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ, ಮುದ್ದಾಪುರ, ಬೇವಿನಹಳ್ಳಿ, ಐನಹಳ್ಳಿ, ಅಂಚಿಬಾರಿಹಟ್ಟಿ, ನಾಗಯ್ಯನಹಟ್ಟಿ, ತಿಮ್ಮಯ್ಯನಹಟ್ಟಿ, ಕೆರೆಕೋಡಿಹಟ್ಟಿ, ಶೀರನಕಟ್ಟೆ, ಕೋಡಿಹಳ್ಳಿಹಟ್ಟಿ, ಪೂಜಾರಹಟ್ಟಿ, ಎಂ. ಮಲ್ಲಾಪುರ, ಮಾಳಿಗೆಹಟ್ಟಿ ಮತ್ತೋಡು ಹೋಬಳಿಯ ಅರೇಹಳ್ಳಿ, ತಿಪ್ಪೇನಹಳ್ಳಿ, ಹೊಸೂರು ಭೋವಿಹಟ್ಟಿ, ಚಳ್ಳಕೆರೆ, ಹುಣಸೇಕಟ್ಟೆ, ಇಂಡೇದೇವರಹಟ್ಟಿ, ನಾಗತೀಹಳ್ಳಿ, ಹೊಸತಿಮ್ಮಪ್ಪನಹಟ್ಟಿ, ಹಳೇತಿಮ್ಮಪ್ಪನಹಟ್ಟಿ, ತಾರೀಕೆರೆ, ಅಗಸರಹಳ್ಳಿ, ಕಾರೇಹಳ್ಳಿ ಲಿಂಗದಹಳ್ಳಿ, ಗಂಜಿಗೆರೆ, ಜೋಗಮ್ಮನಹಳ್ಳಿ, ಸಿದ್ದಪ್ಪನಹಟ್ಟಿ, ಅಜ್ಜಿಕಂಸಾಗರ ಗ್ರಾಮಗಳ ಸಮೀಪಕ್ಕೆ ವಿ.ವಿ. ಸಾಗರದ ಹಿನ್ನೀರು ಬಂದಿದ್ದು, ಕೆಲವು ಗ್ರಾಮಸ್ಥರಿಗೆ ಭೀತಿ ಎದುರಾಗಿದೆ.

ಅಧಿಕ ತೇವಾಂಶದಿಂದ ಹಲವು ಗ್ರಾಮಗಳಲ್ಲಿ ಜೋಪು ಹೆಚ್ಚಾಗಿದೆ. ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯ ಹತ್ತಾರು ಹಳ್ಳಿಯಲ್ಲಿ ಸ್ವಂತ ಜಮೀನು ಇಲ್ಲದ ನೂರಾರು ಬಡಕುಟುಂಬಗಳು ಹಿನ್ನೀರು ಪ್ರದೇಶದಲ್ಲಿ ಪ್ರತಿವರ್ಷ ರಾಗಿ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಸೇರಿ ಇನ್ನಿತರ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದರು. ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಯಿಸಿ ಬಾಳೆ, ತೆಂಗು, ಅಡಿಕೆ ಬೆಳೆಗಳನ್ನು ಬೆಳೆದಿದ್ದರು. ಆದರೆ, ಈ ಬಾರಿ ಸುರಿದ ಅಧಿಕ ಮಳೆ ಹಾಗೂ ಭದ್ರಾ ನದಿಯ ನೀರನ್ನು ವೇದಾವತಿ ನದಿ ಮೂಲಕ ಹರಿಸಿದ್ದರಿಂದ ಪ್ರಸ್ತುತ ವಿ.ವಿ. ಸಾಗರದಲ್ಲಿ 123 ಅಡಿಯಷ್ಟು ನೀರು ಸಂಗ್ರಹವಾಗಿದೆ.

ADVERTISEMENT

2 ದಶಕಗಳ ಬಳಿಕ ಜಲಾಶಯದಲ್ಲಿ ದಾಖಲೆ ಪ್ರಮಾಣದ ನೀರು ಈ ಬಾರಿ ಸಂಗ್ರಹವಾಗಿದೆ. ಇದರಿಂದಾಗಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಬೆಳೆದಿದ್ದ ನೂರಾರು ಎಕರೆ ಬೆಳೆ ಸಂಪೂರ್ಣ ನಾಶವಾಗಿದೆ.

‘ಬೇಸಾಯ, ಬಿತ್ತನೆ ಬೀಜ, ಗೊಬ್ಬರ, ಬೆಳೆಯ ಉಪಚಾರ ಸೇರಿ ನೂರಾರು ರೈತರು ತಲಾ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು. ಕೆಲವು ರೈತರು ಕೊರೆಯಿಸಿದ್ದ ಹಲವು ಕೊಳವೆಬಾವಿ, ವಿದ್ಯುತ್‌ ಪರಿವರ್ತಕ, ತೆಂಗು, ಬಾಳೆ, ಅಡಿಕೆ ತೋಟಗಳು ಮುಳುಗಡೆಯಾಗಿವೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದ್ದು ಸ್ವಂತ ಜಮೀನು ಇಲ್ಲದ ಕೆಲವು ಬಡಕುಟುಂಬಗಳು ಬೀದಿಪಾಲಾಗಿವೆ. ಬೆಳೆ ಕಳೆದುಕೊಂಡ ಕೆಲವರು ಕಣ್ಣೀರಿಡುತ್ತಾ ಉದ್ಯೋಗ ಅರಸಿ ಬೆಂಗಳೂರಿನತ್ತ ಗುಳೆ ಹೋಗುತ್ತಿದ್ದಾರೆ’ ಎನ್ನುತ್ತಾರೆ ಬೇವಿನಹಳ್ಳಿ ರುದ್ರೇಶ್‌.

ಹಿನ್ನೀರು ಪ್ರದೇಶದಲ್ಲಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಸಂಪರ್ಕ ಕಲ್ಪಿಸಲು ಇದ್ದ ರಸ್ತೆಗಳು, ವಿದ್ಯುತ್‌ ಸಂಪರ್ಕದ ಲೈನ್‌ ಸಹ ಜಲಾವೃತವಾಗಿವೆ. 2 ಕಿ.ಮೀ ದೂರದ ರಸ್ತೆ ಸಂಪರ್ಕ ಕಡಿತವಾಗಿದ್ದು, ತಿಪ್ಪೇನಹಳ್ಳಿಯಿಂದ ಅರೇಹಳ್ಳಿಗೆ ಬರಲು ಜನರು 8 ಕಿ.ಮೀ ಸುತ್ತಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಮೀನಿಗೆ ಹೋಗಲು ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ಪೂರೈಕೆಯ ಕೊಳವೆಬಾವಿಗಳು ಮುಳುಗಡೆಯಾಗಿವೆ. ಕೆಲವು ರೈತರು ದೋಣಿ, ತೆಪ್ಪಗಳಲ್ಲಿ ಹೋಗಿ ಬರುತ್ತಿದ್ದಾರೆ. ತೋಟದಿಂದ ತೆಂಗಿನಕಾಯಿ, ಎಳನೀರು, ಅಡಿಕೆ, ಬಾಳೆ ತರುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಹಲವು ಬೆಳೆ ನಾಶದಿಂದ ನಷ್ಟ ಅನುಭವಿಸಿರುವ ರೈತರಿಗೆ ಜೀವನ ನಿರ್ವಹಣೆಯ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಅರೇಹಳ್ಳಿ ನಿರಂಜನಮೂರ್ತಿ.

ಜಲಾಶಯದಲ್ಲಿ ನೀರು ಹೆಚ್ಚು ಸಂಗ್ರಹವಾದರೆ ಇನ್ನೂ ಹಲವು ಜಮೀನು, ರಸ್ತೆಗಳು, ಕೊಳವೆಬಾವಿ ಜಲಾವೃತವಾಗುತ್ತವೆ. ಇದರಿಂದಾಗಿ ಜನರು ಇನ್ನೂ ತೊಂದರೆ ಅನುಭವಿಸಬೇಕಾಗುತ್ತದೆ. ಬೇವಿನಹಳ್ಳಿ, ಅರೇಹಳ್ಳಿ ಸೇರಿ ಇನ್ನಿತರ ಗ್ರಾಮದ ಮನೆಗಳ ಬಳಿಗೆ ಹಿನ್ನೀರು ನುಗ್ಗುತ್ತಿರುವುದರಿಂದ ಹಲವರಿಗೆ ಜೀವಭಯ ಉಂಟಾಗಿದೆ. ಹಾಗಾಗಿ ಬೆಳೆ ನಾಶದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತ ಕಾಪಾಡಲು, ಹಿನ್ನೀರಿಗೆ ಹೊಂದಿಕೊಂಡಿರುವ ಗ್ರಾಮಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂಬುದು ರೈತರ ಒತ್ತಾಯ.

***

ಹಿನ್ನೀರು ಪ್ರದೇಶದಲ್ಲಿ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಸಾಗುವಳಿ ಮಾಡುತ್ತಿದ್ದ ಜಮೀನು ರೈತರ ಹೆಸರಿಗೆ ಇರಲಿಲ್ಲ ಎಂದು ನೆಪ ಹೇಳದೆ ಬೇರೆಡೆ ಜಮೀನು ಕೊಡಬೇಕು.

- ನಿರಂಜನಮೂರ್ತಿ, ಅರೇಹಳ್ಳಿ ಗ್ರಾಮಸ್ಥ

***

ವಿ.ವಿ.ಸಾಗರದಲ್ಲಿ 2000ರಲ್ಲಿ 122.50 ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ 123 ಅಡಿಯಷ್ಟು ನೀರು ಸಂಗ್ರಹ ಆಗುತ್ತಿರುವುದರಿಂದ ಹಿನ್ನೀರು ಪ್ರದೇಶ ಗ್ರಾಮಗಳಿಗೆ, ರೈತರಿಗೆ ತೊಂದರೆಯಾಗುತ್ತಿದೆ.

- ದೂತೇಶ್‌, ಅರೇಹಳ್ಳಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.